ಬೆಂಗಳೂರು: ಚಳಿಗಾಲ ಮುಗಿದು ಬೇಸಿಗೆ ಶುರುವಾಗಿದೆ. ಶಿವರಾತ್ರಿ (Shivaratri) ಮುಗಿಯುತ್ತಿದ್ದಂತೆ ಶಿವ ಶಿವ ಎನ್ನುವಷ್ಟು ಬಿಸಿಲಿನ ತಾಪಮಾನ ಏರುತ್ತಾ ಹೋಗುತ್ತದೆ. ಈ ಸಮಯದಲ್ಲಿ ತಂಪಾದ ಪಾನಿಯಾ, ಹಣ್ಣು ಮತ್ತು ತರಕಾರಿಗಳಿಗೆ ಭಾರೀ ಬೇಡಿಕೆ ಬರುತ್ತದೆ. ಇನ್ನು ಸಿಲಿಕಾನ್ ಸಿಟಿಯಲ್ಲಿ (Silicon city) ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್ಗೆ ಮುಟ್ಟಿದ್ದು, ಜನರು ಬಿಸಿಲಿನ ಬೇಗೆಗೆ ಹೈರಾಣಾಗುತ್ತಿದ್ದಾರೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಜನರು ತಂಪಾದ ಹಣ್ಣು ಮತ್ತು ತರಕಾರಿಗಳ ಮೊರೆ ಹೋಗಿದ್ದು, ಆದರೆ ಇವುಗಳ ಬೆಲೆ ಕೂಡ ಗಗನಕ್ಕೇರಿವೆ.
ನಗರದ ಹಣ್ಣಿನ ಮಾರುಕಟ್ಟೆಗಳಾದ ಕೆಆರ್ ಮಾರುಕಟ್ಟೆ (KR Market), ಕಲಾಸಿಪಾಳ್ಯ ಮಾರುಕಟ್ಟೆ (Kalasipalya Market), ಯಶವಂತಪುರ (Yeshwantpur), ಮಡಿವಾಳ (Madiwala) ಮತ್ತು ಹಾಪ್ಕಾಮ್ಸ್ಗಳಲ್ಲಿ (Hopcoms) ಈಗಾಗಲೆ ಕಾಲೋಚಿತವಾಗಿ ಸಿಗುವ ಕಲ್ಲಂಗಡಿ, ಕರಬೂಜ ಹಣ್ಣು ಮತ್ತು ಟೊಮೇಟೊ ಹಣ್ಣುಗಳ ಬೆಲೆ ಜಾಸ್ತಿಯಾಗಿವೆ. ಕಲ್ಲಂಗಡಿ ಹಣ್ಣಿನ ಬೆಲೆ ಕಳೆದ ಕೆಲವು ದಿನಗಳಲ್ಲಿ ಶೇ 50 ರಷ್ಟು ಏರಿಕೆಯಾಗಿದೆ. ಕಳೆದ ವಾರ ಕಲ್ಲಂಗಡಿ ಹಣ್ಣು ಕೆಜಿಗೆ 15 ರಿಂದ 20 ರೂ. ಮಾರಾಟವಾಗುತ್ತಿತ್ತು. ಆದರೆ ಈಗ ಪ್ರತಿ ಕೆಜಿಗೆ 20-30 ರೂ. ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ಬೆಲೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ.
ಕೆ ಆರ್ ಮಾರುಕಟ್ಟೆಯಲ್ಲಿ ಓರ್ವ ವ್ಯಾಪಾರಸ್ತ ಹೇಳುವ ಪ್ರಕಾರ ಈಗಾಗಲೆ ಕಲ್ಲಂಡಿ ಹಣ್ಣಿನ ಬೆಲೆ ಏರಿಕೆಯಾಗಿದೆ. ನಾವು ಪ್ರತಿ ದಿನ 50 ರಿಂದ 250 ಟನ್ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣಿನ ಬೇಡಿಕೆ ಜಾಸ್ತಿಯಾದರೇ ಬೆಲೆ ಕೂಡ ಜಾಸ್ತಿಯಾಗುತ್ತದೆ ಮತ್ತು ಮಾರಾಟ ಕೂಡ ಜಾಸ್ತಿಯಾಗುತ್ತದೆ ಎಂದು ಹೇಳಿದ್ದಾರೆ.
ಕೆ.ಆರ್.ಮಾರುಕಟ್ಟೆಯಲ್ಲಿ ಸುಮಾರು ಹತ್ತಾರು ಸಗಟು ಕಲ್ಲಂಗಡಿ ವ್ಯಾಪಾರಿಗಳಿದ್ದಾರೆ. ಪ್ರತಿ ಕಲ್ಲಂಗಡಿ 4 ಕೆಜಿಯಿಂದ 12 ಕೆಜಿ ತೂಗುತ್ತದೆ. ಸದ್ಯದ ಮಟ್ಟಿಗೆ ಕೆ.ಆರ್.ಮಾರುಕಟ್ಟೆಯಲ್ಲಿ ಪ್ರತಿ ಸಗಟು ಮಾರಾಟಗಾರರು 1ಕೆಜಿ ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಹೆಚ್ಚಾದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಲಿದ್ದು, ಬೆಲೆ ಏರಿಕೆಯಾಗಲಿದೆ ಎಂದು ಕೆ.ಆರ್.ಮಾರುಕಟ್ಟೆಯ ಸಗಟು ಹಣ್ಣು ಮಾರಾಟಗಾರ ಮಂಜುನಾಥ್ ತಿಳಿಸಿದ್ದಾರೆ.
ಹಣ್ಣಿನ ಅಂಗಡಿಗಳ ಹೊರತಾಗಿ, ಬೇಸಿಗೆಯಲ್ಲಿ, ಬೆಂಗಳೂರಿನ ಹಲವಾರು ಬೀದಿ ಬದಿ ವ್ಯಾಪಾರಿಗಳು ಸಹ ಸಣ್ಣ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಈಗ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು 10 ರೂ.ಗೆ ಮಾರುತ್ತಿದ್ದಾರೆ. ಅನೇಕ ಮಾರಾಟಗಾರರು ಸಂಪೂರ್ಣ ಹಣ್ಣನ್ನು ಮಾರಾಟ ಮಾಡುವುದಕ್ಕಿಂತ ಹೆಚ್ಚು ತುಂಡುಗಳನ್ನು ಮಾರಾಟ ಮಾಡುತ್ತಾರೆ.
ಇನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಈ ವರ್ಷ ಹಣ್ಣುಗಳ ಉತ್ಪಾದನೆಯು ಕುಸಿಯುವ ಸಾಧ್ಯತೆಯಿದೆ. ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯು ಈ ಋತುವಿನಲ್ಲಿ 30 ಪ್ರತಿಶತದವರೆಗೆ ಕುಸಿಯಬಹುದು, ಮುಖ್ಯವಾಗಿ ಹೂಬಿಡುವ ಮತ್ತು ಫ್ರುಟಿಂಗ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ