Bigg News: ಆರಗ ಜ್ಞಾನೇಂದ್ರ ಸೇರಿ ಹಲವರಿಗೆ ನಿವೇಶನ ಹಂಚಿಕೆ: ಆದೇಶಗಳಿಗೆ ಸಹಿ ಹಾಕದಂತೆ ಬಿಡಿಎ ಆಯುಕ್ತರಿಗೆ ಸುಪ್ರೀಂಕೋರ್ಟ್ ತಾಕೀತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 26, 2022 | 9:36 AM

ರಾಜೇಶ್ ಗೌಡ ಅವರನ್ನು ಆ ಸ್ಥಾನದಿಂದ ಬದಲಿಸಬೇಕು. ಅವರಿಗೆ ಸುಪ್ರೀಂಕೋರ್ಟ್​ ಬಗ್ಗೆಯೂ ಗೌರವವಿಲ್ಲ’ ಎಂದು ನ್ಯಾಯಪೀಠವು ಕಠಿಣ ಪದಗಳಲ್ಲಿ ತಾಕೀತು ಮಾಡಿತು.

Bigg News: ಆರಗ ಜ್ಞಾನೇಂದ್ರ ಸೇರಿ ಹಲವರಿಗೆ ನಿವೇಶನ ಹಂಚಿಕೆ: ಆದೇಶಗಳಿಗೆ ಸಹಿ ಹಾಕದಂತೆ ಬಿಡಿಎ ಆಯುಕ್ತರಿಗೆ ಸುಪ್ರೀಂಕೋರ್ಟ್ ತಾಕೀತು
ಸುಪ್ರೀಂಕೋರ್ಟ್​ ಮತ್ತು ಬಿಡಿಎ ಆಯುಕ್ತ ರಾಜೇಶ್​ಗೌಡ
Follow us on

ದೆಹಲಿ: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (Bengaluru Development Authority – BDA) ತನ್ನ ಆದೇಶ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್​ (Supreme Court of India) ಆಕ್ಷೇಪ ವ್ಯಕ್ತಪಡಿಸಿದೆ. ಸಚಿವರೂ ಸೇರಿದಂತೆ ಹಲವು ವಿಐಪಿಗಳಿಗೆ ಪರ್ಯಾಯ ನಿವೇಶನ ಹಂಚಿಕೆ (Alloting Alternative Sites) ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸೇರಿದಂತೆ ಹಲವು ವಿಐಪಿಗಳಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ಬಿಡಿಎ ಆಯುಕ್ತ, ಐಎಎಸ್ ಅಧಿಕಾರಿ ರಾಜೇಶ್ ಗೌಡ (Rajesh Gowda) ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ರಾಜೇಶ್ ಗೌಡ ಅವರನ್ನು ಆಯುಕ್ತರ ಹುದ್ದೆಯಿಂದ ಸ್ಥಳಾಂತರಿಸಲು ಮೌಖಿಕ ಸೂಚನೆ ನೀಡಿದೆ. ಇಂದಿನಿಂದ ರಾಜೇಶ್ ಗೌಡ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿಹಾಕುವಂತಿಲ್ಲ ಎಂದು ಹೇಳಿದೆ.

ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಸುಪ್ರೀಂಕೋರ್ಟ್​ ತೀವ್ರ ವಾಗ್ದಾಳಿ ನಡೆಸಿದೆ. ಬಿಡಿಎ ಕಾರ್ಯದರ್ಶಿ, ಉಪ ಕಾರ್ಯದರ್ಶಿಯನ್ನು ಬದಲಿಸುವಂತೆ ಸೂಚನೆ ನೀಡಿದೆ. ಕಾರಂತ ಬಡಾವಣೆ ಲೋಪದೋಷಗಳ ಸಂಬಂಧ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ಕಾರ್ಯಗಳ ಪ್ರಗತಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹಾಗೂ ಸಂಚೀಜ್ ಖನ್ನಾ​​ ಅವರಿದ್ದ ನ್ಯಾಯಪೀಠವು ಆಯುಕ್ತರ ಬದಲಾವಣೆಗೆ ಸೂಚನೆ ನೀಡಿತು.

‘ಬಿಡಿಎ ಆಯುಕ್ತರಿಂದ ಪ್ರಾಧಿಕಾರಕ್ಕೆ ಆರ್ಥಿಕವಾಗಿ ನಷ್ಟವಾಗಿದೆ. ಆರ್​ಎಂವಿ 2ನೇ ಹಂತದಲ್ಲಿ ಇವರು ಹಂಚಿಕೆ ಮಾಡಿರುವ ನಿವೇಶನಗಳು ₹ 10 ಕೋಟಿಯವರೆಗೆ ಬೆಲೆ ಬಾಳುತ್ತವೆ. ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ನಿವೇಶನಗಳ ಹಂಚಿಕೆ ಮಾಡಬೇಕಿತ್ತು’ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ. ‘ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಇಂದಿನಿಂದ ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವುಂತಿಲ್ಲ. ಅವರನ್ನು ಆ ಸ್ಥಾನದಿಂದ ಬದಲಿಸಬೇಕು. ಅವರಿಗೆ ಸುಪ್ರೀಂಕೋರ್ಟ್​ ಬಗ್ಗೆಯೂ ಗೌರವವಿಲ್ಲ’ ಎಂದು ನ್ಯಾಯಪೀಠವು ಕಠಿಣ ಪದಗಳಲ್ಲಿ ತಾಕೀತು ಮಾಡಿತು.

ಈ ವೇಳೆ ಬಿಡಿಎ ಪರ ವಕೀಲರು ನ್ಯಾಯಾಲಯರ ಕ್ಷಮೆ ಕೋರಿ, ನಿವೇಶನ ಹಂಚಿಕೆ ಬಗ್ಗೆ ಆದೇಶ ಮಾರ್ಪಾಡು ಮಾಡುವಂತೆ ವಿನಂತಿಸಿದರು. ಈ ವಿನಂತಿಯನ್ನೂ ಸುಪ್ರೀಂಕೋರ್ಟ್ ತಿಳ್ಳಿ ಹಾಕಿತು.