ಬೆಂಗಳೂರು, ಡಿ.3: ಆನ್ಲೈನ್ನಲ್ಲಿ ಪಾರ್ಟ್ ಟೈಂ ಕೆಲಸ ಹುಡುಕುತ್ತಿರುವವರನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ನಗರದ (Bengaluru) ಈಶಾನ್ಯ ವಿಭಾಗದ ಯಲಹಂಕ ಸೆನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆರೋಪಿಗಳು ಯಾವ ರೀತಿ ವಂಚನೆ ಎಸಗುತ್ತಿದ್ದರು ಎಂಬುದನ್ನು ಬಾಯಿಬಿಟ್ಟಿದ್ದಾರೆ.
ಪಾರ್ಟ್ ಟೈಂ ಜಾಬ್ ಹೆಸರಲ್ಲಿ ವಂಚಿಸುತ್ತಿದ್ದ ಸೈಯದ್ ಯೂನಸ್, ಸಯದ್ ಅರ್ಬಾಜ್, ಮೊಹಮ್ಮದ್ ಖಲಿಮುಲ್ಲಾ, ಇಬ್ರಾಹಿಮ್ ಕರ್ನೂಲ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಒಂದರ ನಂತರ ಒಂದು ಟಾಸ್ಕ್ ಕೊಟ್ಟು ಜನರನ್ನು ವಂಚಿಸುತ್ತಿರುವ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.
ಆನ್ಲೈನ್ನಲ್ಲಿ ಪಾರ್ಟ್ ಟೈಂ ಜಾಬ್ ಲಿಂಕ್ ಓಪನ್ ಮಾಡಿದ ಕೂಡಲೇ ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಮೂಲಕ ಮೆಸೇಜ್ ಬರುತ್ತಿತ್ತು. ನಂತರ ವಂಚಕರು ಒಂದೊಂದೇ ಟಾಸ್ಕ್ ಕೊಡಲು ಆರಂಭಿಸುತ್ತಾರೆ. ಮೊದಲಿಗೆ ಹೊಟೆಲ್ ರಿವ್ಯೂ ಕೊಡಿ, ಇನ್ಸ್ಟಾಗ್ರಾಂ ವಿಡಿಯೋ ಲೈಕ್ ಮಾಡಿ ಅಂತ ಹೇಳುತ್ತಾರೆ.
ಇದನ್ನೂ ಓದಿ: ಬಿಟ್ಟು ಹೋದ ಪತಿಯನ್ನು ಒಂದುಗೂಡಿಸುವುದಾಗಿ ನಂಬಿಸಿ ಮಹಿಳಾ ಎಫ್ಡಿಎಗೆ ವಂಚನೆ
ಲೈಕ್ ಮಾಡಿದ ಕೂಡಲೇ 150 -200 ರೂಪಾಯಿ ಅಕೌಂಟ್ಗೆ ಹಾಕಿ ಅಮಿಷ ವೊಡುತ್ತಿದ್ದರು. ಅನಂತರ ನಮ್ಮ ಗ್ರೂಪ್ಗೆ ನಿಮ್ಮನ್ನ ಸೇರಿಸುತ್ತೇವೆ ಅಂತ ಹೇಳುತ್ತಾರೆ. ಅಲ್ಲಿಂದ ನಂತರ ವಂಚಕರು ಮೋಸದ ಬಲೆ ಬೀಸುತ್ತಾರೆ. ಇನ್ನೂ ನೀವೂ ಹೂಡಿಕೆ ಮಾಡಿ ಹಣಗಳಿಸಬಹುದು ಅಂತಾ ಹೇಳುತ್ತಿದ್ದರು.
ಪ್ರಾರಂಭದಲ್ಲಿ 5-10 ಸಾವಿರ ಇನ್ವೆಸ್ಟ್ ಮಾಡಲು ಹೇಳುತ್ತಾರೆ. ಜನರು ಹೂಡಿಕೆ ಮಾಡಿದಾಗ ನಿಮ್ಮ ಖಾತೆಗೆ 50 ಸಾವಿರ ಜಮೆಯಾಗಿದೆ ಅಂತಾ ತೋರಿಸುತ್ತಿದ್ದರು. ಹೀಗೆ 5 ಲಕ್ಷದವರೆಗೂ ಇನ್ವೆಸ್ಟ್ ಮಾಡಿಸಿಕೊಂಡು ಅಮೇಲೆ ಇನ್ನೊಂದು ನಾಟಕ ಶುರು ಮಾಡುತ್ತಾರೆ.
ನಿಮ್ಮ ಖಾತೆಯಲ್ಲಿ 10 ಲಕ್ಷ ಇದೆ. ಆದರೆ ಅದನ್ನ ಟೆಕ್ನಿಕಲ್ ಸಮಸ್ಯೆಯಿಂದ ತೆಗಿಯೋಕೆ ಆಗುತ್ತಿಲ್ಲ. ನೀವು ಇನ್ನೂ ಸ್ವಲ್ವ ಅಮೌಂಟ್ ಹಾಕಿ ಅಗ ನಿಮಗೆ ಪೂರ್ತಿ ಹಣ ಬರುತ್ತದೆ ಅಂತ ನಂಬಿಸುತ್ತಿದ್ದರು. ಇದೇ ರೀತಿ ಆರೋಪಿಗಳು ಬರೋಬ್ಬರಿ 40 ಕೋಟಿ ರೂಪಾಯಿ ವಂಚಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ, ತನಿಖೆ ವೇಳೆ ಬರೋಬ್ಬರಿ 305 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ, ಬಂಧಿತ ಆರೋಪಿಗಳಿಂದ 4 ಮೊಬೈಲ್, 2 ಪಾಸ್ ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್, ಬಯೋಮೆಟ್ರಿಕ್ ಸಾಧನ, ಕಂಪನಿ ಸೀಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Sun, 3 December 23