ರಾಜಸ್ಥಾನ, ಛತ್ತೀಸಗಡ್ ಹಾಗೂ ಮಧ್ಯಪ್ರದೇಶದಲ್ಲಿ ಮುನ್ನಡೆ; ಕರ್ನಾಟಕ ಬಿಜೆಪಿ ನಾಯಕರು ಹೇಳಿದ್ದಿಷ್ಟು

ರಾಜಸ್ಥಾನ, ಛತ್ತೀಸಗಡ್​, ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟವಾಗುತ್ತಿದೆ. ರಾಜಸ್ಥಾನ, ಛತ್ತೀಸಗಡ್​, ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೇ, ತೆಲೆಂಗಾಣದಲ್ಲಿ ಕಾಂಗ್ರೆಸ್​ ಮುನ್ನಡೆಯಲ್ಲಿದೆ. ಈ ವಿಚಾರವಾಗಿ ಕರ್ನಾಟಕದ ಬಿಜೆಪಿ ನಾಯಕರು ಏನು ಹೇಳಿದರು? ಇಲ್ಲಿದೆ ಓದಿ

ರಾಜಸ್ಥಾನ, ಛತ್ತೀಸಗಡ್ ಹಾಗೂ ಮಧ್ಯಪ್ರದೇಶದಲ್ಲಿ ಮುನ್ನಡೆ; ಕರ್ನಾಟಕ ಬಿಜೆಪಿ ನಾಯಕರು ಹೇಳಿದ್ದಿಷ್ಟು
ಬಿಜೆಪಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Dec 03, 2023 | 2:09 PM

ಬೆಂಗಳೂರು ಡಿ.03: ರಾಜಸ್ಥಾನ, ಛತ್ತೀಸಗಡ್​, ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟವಾಗುತ್ತಿದೆ. ರಾಜಸ್ಥಾನ, ಛತ್ತೀಸಗಡ್​, ಮಧ್ಯಪ್ರದೇಶದಲ್ಲಿ ಬಿಜೆಪಿ (BJP) ಮುನ್ನಡೆ ಸಾಧಿಸಿದ್ದರೇ, ತೆಲಂಗಾಣದಲ್ಲಿ ಕಾಂಗ್ರೆಸ್ (Congress)​ ಮುನ್ನಡೆಯಲ್ಲಿದೆ. ಈ ವಿಚಾರವಾಗಿ ಕರ್ನಾಟಕದ ಬಿಜೆಪಿ ನಾಯಕರು ಮಾತನಾಡಿದ್ದಾರೆ. “ದೇಶದಲ್ಲಿ ಬಿಜೆಪಿಯ ಪರ ವಾತಾವರಣ ಇದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕೆಂದು ಜನ ಬಯಸಿದ್ದಾರೆ. ಸುನಾಮಿ ರೀತಿ ಭಾರತೀಯ ಜನತಾ ಪಾರ್ಟಿಯ ಅಲೆ ಎದ್ದಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯುತ್ತೆ ಎಂದು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಹೇಳಿದರು.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದ ಜನರು ದೇಶದ ರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆ. ಅಧಿಕಾರವನ್ನು ಕಬಳಿಸುವ ಗ್ಯಾರಂಟಿಯನ್ನು ಜನರು ಬಯಸುತ್ತಿಲ್ಲ. ಗ್ಯಾರಂಟಿ ಆಮಿಷವೊಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದರಿಂದ ರಾಜ್ಯದ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಜೆಡಿಎಸ್​, ಬಿಜೆಪಿ ಒಟ್ಟಾಗಿ ಹೋರಾಡಿ 28 ಕ್ಷೇತ್ರವನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ. ಈ ಫಲಿತಾಂಶ ಸೆಮಿಫೈನಲ್ ಅಂತಾ ಒತ್ತಿ ಒತ್ತಿ ಸಿದ್ದರಾಮಯ್ಯ ಹೇಳುತ್ತಿದ್ದರು. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹಲವು ವಿಷಯಗಳಿಗೆ ಗ್ರಾಸವಾಗಿದೆ. ಕಾಂಗ್ರೆಸ್​ನವರು ಮೋದಿ ಅವರನ್ನು ಟಾರ್ಗೆಟ್ ಮಾಡಿ ಚುನಾವಣೆ ಮಾಡಿದರು. ಸನಾತನ ಧರ್ಮ, ಜಾತಿ ರಾಜಕೀಯ ಇಟ್ಟುಕೊಂಡು ಚುನಾವಣೆ ಮಾಡಿದರು. ಅಪಪ್ರಚಾರದ ಮೂಲಕ ಗೆಲ್ಲಬಹುದೆಂದು ನಿಲುವು ತೆಗೆದುಕೊಂಡಿದ್ದರು. ಆದರೆ ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶ ಜನ ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ರಾಜಸ್ಥಾನದ ಸಿಎಂ ಸ್ಥಾನದ ರೇಸ್​ನ ಮುಂಚೂಣಿಯಲ್ಲಿ ಮಹಂತ್ ಬಾಲಕನಾಥ್; ಯುಪಿ ಯೋಗಿಗೂ ಇವರಿಗೂ ಏನು ಸಂಬಂಧ?

ಗ್ಯಾರಂಟಿ ವಿಷಯದಲ್ಲಿ ಹೇಳಿದ್ದ ಒಂದು ಮಾಡಿದ್ದೇ ಬೇರೆ ಅಂತ ಜನರಿಗೆ ಗೊತ್ತಾಗಿದೆ. ತೆಲಂಗಾಣದಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಗ್ಯಾರಂಟಿ ಭರವಸೆ ನೀಡಿದ್ದಾರೆ. ಈ ಮೂಲಕ ತೆಲಂಗಾಣದಲ್ಲಿ ಮೋಸ ಮಾಡುವ ಪ್ರಯತ್ನ ಮಾಡಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಅವರ ಆಟ ನಡೆಯಲಿಲ್ಲ. ತೆಲಂಗಾಣದಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ವರ್ಸಸ್ ಬಿಜೆಪಿ ಇದೆ. ಇಂಡಿಯಾ ಮೈತ್ರಿಕೂಟ ಲೋಕಸಭಾ ಚುನಾವಣೆ ವೇಳೆಗೆ ಕುಸಿಯಲಿದೆ ಎಂದು ಭವಿಷ್ಯ ನುಡಿದರು.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅತೀ ಹೆಚ್ಚು ಭ್ರಷ್ಟ ಸರ್ಕಾರ. ಹೆಚ್ಚು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ನ ದೊಡ್ಡ ಪ್ರಕರಣಗಳು ಹೊರಬರಲಿವೆ. ಗ್ಯಾರಂಟಿ 25% ಮಾತ್ರ ತಲುಪಿದೆ, ಜನರಿಗೆ ಮೋಸ ಮಾಡಿದ್ದಾರೆ. ಅಧಿವೇಶನ ಮುಗಿದ ಕೂಡಲೇ ಗ್ಯಾರಂಟಿಯನ್ನು ಎಕ್ಸ್​ಪೋಸ್ ಮಾಡುವ ಕೆಲಸ ಹಳ್ಳಿಯಲ್ಲಿ ಮಾಡುತ್ತೇವೆ. ಯಾರಿಗೆ ಗ್ಯಾರಂಟಿ ಸಿಕ್ಕಿಲ್ಲವೋ ಅವರ ಚಳುವಳಿ ಮಾಡುತ್ತೇವೆ. ಲೋಕಸಭೆ ಚುನಾವಣೆಗೆ 25 ಗೆಲ್ಲುತ್ತೇವೆ. ಕಾಂಗ್ರೆಸ್ ವಿರೋಧಿ ಮತಗಳನ್ನು ಒಗ್ಗೂಡಿಸಲು ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರೂ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಜೆಡಿಎಸ್ ಜೊತೆಗಿನ ಮೈತ್ರಿ ನಮಗೆ ಸಹಾಯ ಖಂಡಿತಾ ಆಗಲಿದೆ ಎಂದರು.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈ ಹಿಂದೆ ರಾಜಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿತ್ತು. ಈಗ ರಾಜಸ್ಥಾನದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಛತ್ತೀಸ್​ಗಢ ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ಫಲಿತಾಂಶ ಕಾಂಗ್ರೆಸ್​ ಧೂಳೀಪಟ ಮಾಡುವುದಕ್ಕೆ ನಾಂದಿ. ಮುಂದಿನ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ನೆರವಾಗುತ್ತೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬಿಜೆಪಿ ಗೆಲುವಿಗೆ ಮೋದಿ, ಅಮಿತ್ ಷಾ, ನಡ್ಡಾ ಕಾರಣ. ಕಾಂಗ್ರೆಸ್​ನಲ್ಲಿ ದೇಶ ಆಳುವ ನಾಯಕ ಇಲ್ಲ ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ಅಧಿವೇಶನ ಮುಗಿದ ಮೇಲೆ ನಾನು ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಎಲ್ಲಾ ಕಡೆ ನಂಬಿಕೆ, ವಿಶ್ವಾಸ ಬಂದಿದೆ. ಎಸ್​ಸಿ, ಎಸ್​ಟಿ, ಓಬಿಸಿ ವರ್ಗವನ್ನು ಜೊತೆಗೆ ಒಯ್ಯುವ ಮೂಲಕ ಪಕ್ಷ ಬಲಪಡಿಸುತ್ತೇವೆ. ಬಿಜೆಪಿ ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಈ ಫಲಿತಾಂಶ ಉಪಕಾರಿಯಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ