ಬೆಂಗಳೂರು: ಕುದುರೆ ಮೇಲೆ ಕೂರಿಸಲ್ಲ ಎಂದಿದ್ದಕ್ಕೆ ಬಾಲಕನ ಹತ್ಯೆ ಪ್ರಕರಣ, ಮೂವರು ಅರೆಸ್ಟ್
ಕುದುರೆ ಮೇಲೆ ಕೂರಿಸುವುದಿಲ್ಲ ಎಂದಿದ್ದಕ್ಕೆ ಬಾಲಕನನ್ನು ಹತ್ಯೆಗೈದಿದ್ದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ಕುದುರೆ ಮೇಲೆ ಕೂರಿಸುವುದಿಲ್ಲ ಎಂದಿದ್ದಕ್ಕೆ 15 ವರ್ಷದ ಬಾಲಕನನ್ನು ಹತ್ಯೆಗೈದಿದ್ದ (Murder Of Boy) ಮೂವರು ಆರೋಪಿಗಳನ್ನು ಕೆಜಿ ಹಳ್ಳಿ (KG Halli) ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಯದ್ ಶೋಯಬ್, ಸುಹೇವುಲ್ಲಾ ಷರೀಫ್, ಮೊಹಮ್ಮದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸುಮಾರು 60 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಏಪ್ರಿಲ್ 3ರಂದು ನಡೆದಿದ್ದಾದರೂ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸತೀಶ್ ಎಂಬ ಬಾಲಕ ಮಾಸ್ಕ್ ರಸ್ತೆಯಲ್ಲಿ ಕುದುರೆ ನೋಡಿಕೊಳ್ಳುತ್ತಿದ್ದನು. ಹೀಗಾಗಿ ಸುಹೇಉಲ್ಲಾ ಷರೀಫ್ಗೆ ಕುದುರೆ ಮೇಲೆ ಸವಾರಿ ಮಾಡುವ ಆಸೆಯಿಂದ ಸತೀಶ್ ಬಳಿಗೆ ಬಂದಿದ್ದನು. ಆದರೆ ಕುದುರೆ ಮೇಲೆ ದೊಡ್ಡವರನ್ನು ಕುಳಿತುಕೊಳ್ಳಿಸುವುದಿಲ್ಲ ಎಂದು ಸತೀಶ್ ಹೇಳಿದ್ದಾನೆ. ಈ ವೇಳೆ ಕುಪಿತಗೊಂಡ ಸುಹೇಉಲ್ಲಾ ಷರೀಫ್, ಸತೀಶ್ ಕೆನ್ನೆಗೆ ಬಾರಿಸಿ ಹೋಗಿದ್ದನು. ಈ ವಿಚಾರವನ್ನು ಸತೀಶ್ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದನು.
ಇದನ್ನೂ ಓದಿ: ಇವಳೊಂದು ದಿಕ್ಕು- ಅವನೊಂದು ದಿಕ್ಕು: ವರ್ಗಾವಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಇಂಡೇನ್ ಕಂಪನಿ ಮಹಿಳಾ ಅಧಿಕಾರಿ!
ಕೆಲವು ದಿನಗಳ ಬಳಿಕ ಸುಹೇಉಲ್ಲಾ ಷರೀಫ್ ಚಹಾ ಕುಡಿಯಲೆಂದು ಟೀ ಶಾಪ್ಗೆ ಬಂದಿದ್ದನು. ಇದನ್ನು ನೋಡಿದ ಸತೀಶ್ ಮತ್ತು ಆತನ ಸ್ನೇಹಿತರು, ಷರೀಫ್ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ದ್ವೇಷಕ್ಕೆ ಬಿದ್ದ ಸುಹೇಉಲ್ಲಾ ಷರೀಫ್, ಹಲ್ಲೆಗೆ ಪ್ರತೀಕಾರವಾಗಿ ಬಾಲಕನ ಕೊಲೆಗೆ ಸಂಚು ರೂಪಿಸಿದ್ದನು. ಅದರಂತೆ ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಏಪ್ರಿಲ್ 3ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸತೀಶ್ನನ್ನು ಕೆಜಿ ಹಳ್ಳಿ ರೈಲು ಹಳಿ ಬಳಿಯ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು.
ಕೊಲೆ ವಿಚಾರ ತಿಳಿದ ಕೆಜಿ ಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದರು. ತನಿಖಾ ಭಾಗವಾಗಿ ಸುಮಾರು 60 ಸಿಸಿಟಿವಿ ದೃಶ್ಯಾವಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಮೂವರು ಆರೋಪಿಗಳ ಸುಳಿವು ಸಿಕ್ಕಿವೆ. ಅದರಂತೆ ಆರೋಪಿಗಳ ಬೆನ್ನುಬಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರೈಂ ನ್ಯೂಸ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Sun, 9 April 23