ಬೆಂಗಳೂರು: ಆಹಾರ ಇಲಾಖೆಯ ಸಚಿವ ಉಮೇಶ್ ಕತ್ತಿ(61)(Umesh Katti) ವಿಧಿವಶ ಹಿನ್ನೆಲೆ ನಾಳೆ ನಡೆಯಬೇಕಿದ್ದ ಜನೋತ್ಸವ ಸಮಾವೇಶ ಬಹುತೇಕ ರದ್ದು ಸಾಧ್ಯತೆ ಎನ್ನಲಾಗುತ್ತಿದೆ. ಮೂರು ದಿನಗಳ ಕಾಲ ಸರ್ಕಾರದಿಂದ ಸಂತಾಪ ಸೂಚನೆ ಸಾಧ್ಯತೆಯಿದ್ದು, ಶೋಕಾಚರಣೆ ಘೋಷಣೆ ವೇಳೆ ಸಮಾವೇಶ, ಸರ್ಕಾರಿ ಕಾರ್ಯಕ್ರಮ ನಡೆಸುವ ಹಾಗಿಲ್ಲ. ಹೀಗಾಗಿ ಬಹುತೇಕ ಜನೋತ್ಸವ ಸಮಾವೇಶ ರದ್ದಾಗುವ ಸಾಧ್ಯತೆ ಎನ್ನುಲಾಗುತ್ತಿದೆ. ಈ ಹಿಂದೆಯೂ ಜನೋತ್ಸವ ಸಮಾವೇಶ ನಿಗದಿಯಾಗಿ ರದ್ದಾಗಿತ್ತು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸರ್ಕಾರದ ಸಾಧನೆಗಳ ಬಗ್ಗೆ ಸಮಾವೇಶದ ಮೂಲಕ ಪ್ರಚಾರ ಪಡಿಸಬೇಕಾದ ಅನಿವಾರ್ಯತೆಯಿದೆ ಎನ್ನಲಾಗುತ್ತುದೆ. ನಾಳೆ ನಿಗದಿಯಾಗಿರುವ ಸಮಾವೇಶವನ್ನ ಅನಿವಾರ್ಯವಾಗಿ ಮೊಟಕುಗೊಳಿಸಲು ತೀರ್ಮಾನ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದು, ಒಂದು ವೇಳೆ ಸಮಾವೇಶ ಆಯೋಜಿಸಿದ್ದೇ ಆದರೆ ವಿಪಕ್ಷಗಳ ವಾಗ್ದಾಳಿಗೂ ಸರ್ಕಾರ ಗುರಿಯಾಗುವ ಸಾಧ್ಯತೆಯಿದೆ.
ನಾಳೆಯ ಬಿಜೆಪಿ ಜನೋತ್ಸವ ಸಿಎಂ ನಿರ್ಧಾರದ ಮೇಲೆ ಅವಲಂಬಿತ
ಸಮಾವೇಶ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಕೆಲವೇ ಹೊತ್ತಿನಲ್ಲಿ ಸಿಎಂ ಅಂತಿಮ ತೀರ್ಮಾನ ಮಾಡಲಿದ್ದಾರೆ. ಸಿಎಂ ನಿರ್ಧಾರದ ಮೇಲೆ ನಾಳೆಯ ಬಿಜೆಪಿ ಜನೋತ್ಸವ ಅವಲಂಬಿತವಾಗಿದ್ದು, ಜನೋತ್ಸವ ಮುಂದೂಡಿಕೆ ಬಗ್ಗೆ ಬಿಜೆಪಿ ನಾಯಕರು ಮತ್ತು ಹಲವು ಸಚಿವರು ಒಲವು ಹೊಂದಿದ್ದಾರೆ. ಈಗಾಗಲೇ ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಸಚಿವ ಉಮೇಶ್ ಕತ್ತಿ ವಿಧಿವಶ: ಬುಧವಾರ ಬೆಳಗಾವಿಯ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ
ನಾಳೆ ಜನೋತ್ಸವ ಇದೆ ಅನ್ನೋ ಮಾಹಿತಿ ಇದೆ: ಸಚಿವ ಎಂಟಿಬಿ ನಾಗರಾಜ್
ಈ ಕುರಿತಾಗಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದು, ನಾಳೆ ಜನೋತ್ಸವ ಇದೆ ಅನ್ನೋ ಮಾಹಿತಿ ಇದೆ. ಇನ್ನೂ ರದ್ದು ಅಥವಾ ಮುಂದೂಡಿಲ್ಲ. ಇದರ ಬಗ್ಗೆ ಸಿಎಂ ಮತ್ತು ಸಚಿವ ಸುಧಾಕರ್ ನಿರ್ಧರಿಸ್ತಾರೆ. ಶೋಕಾಚರಣೆ ಸಹ ಇನ್ನೂ ಘೋಷಣೆ ಆಗಿಲ್ಲ. ಸಿಎಂ ಏನ್ ನಿರ್ಧಾರ ತಗೋತಾರೋ ನೋಡಬೇಕು ಎಂದು ಹೇಳಿದರು. ಇನ್ನೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಆಯೋಜಿಸಿದ್ದ ಮುಖ್ಯಮಂತ್ರಿಗಳ ಲಕ್ಷ ಬಹು ಮಹಡಿ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಮನೆಗಳ ಲೋಕಾರ್ಪಣೆ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಬೇಕಿತ್ತು. ಆದರೆ ಸಚಿವ ಉಮೇಶ್ ಕತ್ತಿ ನಿಧನದಿಂದ ಕಾರ್ಯಕ್ರಮ ರದ್ದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:50 am, Wed, 7 September 22