ಬೆಂಗಳೂರು, ಫೆ.08: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್(Traffic) ಸಮಸ್ಯೆಯನ್ನು ತಡೆಗಟ್ಟಲು ಅದೆಷ್ಟೇ ಪ್ರಯತ್ನ ಮಾಡುತ್ತಿದ್ದರೂ ಆಗುತ್ತಿಲ್ಲ. ಇದೀಗ ಮಾರತಹಳ್ಳಿ(Marathahalli) ಹೊರ ವರ್ತುಲ ರಸ್ತೆಯಲ್ಲಿ ಜನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಎಚ್ಎಎಲ್ ಸಂಚಾರಿ ಪೊಲೀಸರು, ಸರ್ವಿಸ್ ರಸ್ತೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳು, ಬಿಎಂಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರವನ್ನು ನಿಷೇಧಿಸಿ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಅದರಂತೆ ಹಿಂದೂ ಐಟಿಪಿಎಲ್, ಕಾಡುಗೋಡಿ ಮತ್ತು ವರ್ತೂರು ಕೋಡಿ ಕಡೆಗೆ ಹೋಗುವ ಮಾರ್ಗಗಳನ್ನು ಸಂಪರ್ಕಿಸಲು ಕಾರ್ತಿಕ್ ನಗರದ ಇಸ್ರೋ ಜಂಕ್ಷನ್ನಲ್ಲಿ ಭಾರೀ ವಾಹನಗಳು ಯು-ಟರ್ನ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಇನ್ನು ನಗರದ ಕಡೆಗೆ ಹೋಗುವ ವಾಹನಗಳು ಇಸ್ರೋ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ, ಬಳಿಕ ದೊಡ್ಡನೆಕ್ಕುಂಡಿ ಗ್ರಾಮದ ಮೂಲಕ ಎಚ್ಎಎಲ್ ವಿಮಾನ ನಿಲ್ದಾಣದ ರಸ್ತೆಯ ಮಾರ್ಗವಾಗಿ ಹೋಗಬಹುದಾಗಿದೆ. ಇನ್ನು ಈ ನಿಷೇಧ, ಶಾಲಾ ವಾಹನಗಳಿಗೆ ಅನುವಹಿಸುವುದಿಲ್ಲ. ಸಾರಿಗೆ ಉದ್ದೇಶಗಳಿಗಾಗಿ ಸೇವಾ ರಸ್ತೆಯನ್ನು ಬಳಸಿಕೊಳ್ಳು ಅನುಮತಿ ನೀಡಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಂಧನ
ಮಾರತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರಿ ವಾಹನಗಳು ಮತ್ತು ಬಸ್ಗಳ ಮಾರ್ಗವನ್ನು ಬದಲಾಯಿಸುವ ಮೂಲಕ ಅಧಿಕಾರಿಗಳು ಟ್ರಾಫಿಕ್ನ್ನು ಸುಗಮಗೊಳಿಸಲು ಮತ್ತು ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಒಟ್ಟಾರೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ