
ಬೆಂಗಳೂರು, ಅಕ್ಟೋಬರ್ 24: ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಹಗಲಿರುಳು ಶ್ರಮಿಸುವ ಪತ್ರಕರ್ತರು ಮತ್ತು ಮಾಧ್ಯಮ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ಟಿಎನ್‌ಐಟಿ ಅಕಾಡೆಮಿ’ ವತಿಯಿಂದ ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ, ವಿವಿಧ ರಾಜ್ಯಗಳ ಹಾಗೂ ಭಾಷೆಗಳ ನುರಿತ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಲ್ಲಿ ಪ್ರಮುಖವಾಗಿ ಟಿವಿ9 ಕನ್ನಡ ವಾಹಿನಿಯ ದಿಗ್ಗಜರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಬಾರಿಯ ಪ್ರಶಸ್ತಿ ಸಮಾರಂಭದಲ್ಲಿ‘ಟಿವಿ9 ಕನ್ನಡ’ದ ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ. ವಾಹಿನಿಯ ಕ್ರೈಂ ವಿಭಾಗದ ಮುಖ್ಯಸ್ಥರಾದ ಹೆಚ್.ವಿ. ಕಿರಣ್ ಅವರಿಗೆ ‘ಎಕ್ಸಲೆನ್ಸ್ ಇನ್ ಕ್ರೈಮ್ ಜರ್ನಲಿಸಂ’ ವಿಭಾಗದಲ್ಲಿ ಪ್ರತಿಷ್ಠಿತ TNIT ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಟಿವಿ9 ನುರಿತ ಸಿಬ್ಬಂದಿಯಾದ ಸುನೀಲ್ ಅವರಿಗೆ ‘ಉತ್ತಮ ರಾಜಕೀಯ ವರದಿಗಾರಿಕೆ’ ಪ್ರಶಸ್ತಿ, ಹಾಗೂ ಶಿವಪ್ರಸಾದ್ ಬಿ ಅವರಿಗೆ ‘ಉತ್ತಮ ಅಪರಾಧ ವರದಿಗಾರ’ ಪ್ರಶಸ್ತಿ ಒಲಿದು ಬಂದಿದೆ.
ಇದಲ್ಲದೆ, ಟಿವಿ9 ನ ಹಿರಿಯ ನಿರ್ಮಾಪಕ ಹಾಗೂ ಲೇಖಕರಾದ ರವೀಂದ್ರ ಮುದ್ದಿ ಅವರಿಗೆ ‘ಬೆಸ್ಟ್ ಮೀಡಿಯಾ ಮಾಸ್ಟರ್’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಈ ದಿಗ್ಗಜರು ಸಲ್ಲಿಸಿರುವ ವಿಶಿಷ್ಟ ಸೇವೆ ಹಾಗೂ ಕಠಿಣ ಪರಿಶ್ರಮವನ್ನು ಗುರುತಿಸಿ ಈ ಗೌರವ ನೀಡಲಾಗಿದ್ದು, ಟಿವಿ9 ಕನ್ನಡ ವಾಹಿನಿಗೆ ಒಟ್ಟಾರೆಯಾಗಿ ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿದೆ.
ಸುದ್ದಿ ಸಂಗ್ರಹಿಸಲು ಮತ್ತು ತಲುಪಿಸಲು ಮಳೆ, ಗಾಳಿ ಹಾಗೂ ಕಠಿಣ ಸವಾಲುಗಳನ್ನು ಲೆಕ್ಕಿಸದೆ ಕ್ಯಾಮೆರಾದ ಮುಂದೆ ಹಾಗೂ ಹಿಂದೆ ಕಾರ್ಯನಿರ್ವಹಿಸುವ ಕ್ಯಾಮೆರಾಮೆನ್‌ಗಳು, ಸಿನಿಮಾ, ರಾಜಕೀಯ, ಮೆಟ್ರೋ ಮತ್ತು ಕ್ರೈಮ್ ವಿಭಾಗದ ರಿಪೋರ್ಟರ್‌ಗಳ ಪರಿಶ್ರಮಕ್ಕೆ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಈ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಪ್ರಸ್ತುತ ಒಂಬತ್ತನೇ ವರ್ಷಕ್ಕೆ ಯಶಸ್ವಿಯಾಗಿ ಪಾದರ್ಪಣೆ ಮಾಡಿದೆ. ಈ ಬಾರಿಯ ‘ಮಾಧ್ಯಮ ಹಬ್ಬ’ದಲ್ಲಿ ದಕ್ಷಿಣ ಭಾರತದ 5 ರಾಜ್ಯಗಳು ಹಾಗೂ 4 ಭಾಷೆಗಳಿಗೆ ಸೇರಿದ ಪತ್ರಕರ್ತರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 80ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ವಿತರಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 am, Sat, 24 October 26