ಬೆಂಗಳೂರು: ಸಮಾಜಬಾಹಿರ ಕೃತ್ಯ ನಡೆಸುತ್ತಿರುವ ಆರೋಪದ ಮೇಲೆ ಭಾರತದಲ್ಲಿ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಸ್ಥೆಗಳನ್ನು ನಿಷೇಧಿಸಿ ಭಾರತ ಸರ್ಕಾರ ಹೊರಡಸಿದ್ದ ಆದೇಶವನ್ನು ಊರ್ಜಿತಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯುಎಪಿಎ (Unlawful Activities Prevention Act – UAPA) ಪ್ರಾಧಿಕಾರವು ದೇಶದ ವಿವಿಧೆಡೆ ವಿಚಾರಣೆ ಆರಂಭಿಸಿದೆ. ಈ ಸಂಬಂಧ ಇಂದು (ಜ 27) ಕರ್ನಾಟಕಕ್ಕೆ ಪ್ರಾಧಿಕಾರದ ಸದಸ್ಯರು ಆಗಮಿಸುತ್ತಿದ್ದು, ರಾಜ್ಯದ ವಿವಿಧೆಡೆ 3 ದಿನ ಸಂಚರಿಸಿ, ಮಾಹಿತಿ ಸಂಗ್ರಹಿಸಲಿದ್ದಾರೆ.
ವಿಚಾರಣೆ ವೇಳೆ ಪಿಎಫ್‌ಐ ನಿಷೇಧಕ್ಕೆ ಕಾರಣವಾದ ಅಂಶಗಳು, ನಿಷೇಧದ ಪರ ಹಾಗೂ ವಿರೋಧ ಇರುವ ಅಂಶಗಳ ಬಗ್ಗೆ ಪ್ರಾಧಿಕಾರ ಸದಸ್ಯರು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಪಿಎಫ್‌ಐ ಸದಸ್ಯರಿಂದ ನಡೆದ ಹತ್ಯೆ ಪ್ರಕರಣಗಳ ತನಿಖಾಧಿಕಾರಿಗಳ ವಿಚಾರಣೆಯೂ ನಡೆಯಲಿದೆ. ಈ ಸಂಬಂಧ ಈಗಾಗಲೇ ಎನ್ಐಎ ಸೇರಿ ಇತರ ತನಿಖಾಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ಪ್ರಾಧಿಕಾರದ ಸದಸ್ಯರು ಕರ್ನಾಟಕಕ್ಕೆ ಬರುವ ಮೊದಲು ಕೇರಳ ಹಾಗೂ ತಮಿಳುನಾಡಿನಲ್ಲಿ ವಿಚಾರಣೆ ನಡೆಸಿದ್ದರು. ಹಲವು ಪ್ರಕರಣಗಳ ವಿಚಾರಣೆ ಬಳಿಕ ಪ್ರಾಧಿಕಾರವು ತೀರ್ಪು ಪ್ರಕಟಿಸಲಿದೆ. ಪಿಎಫ್‌ಐ ನಿಷೇಧದ ಬಗ್ಗೆ ಕೇಂದ್ರ ಸರ್ಕಾರದ ಆದೇಶದ ಸ್ವರೂಪವೂ ಅನಂತರ ಅಂತಿಮಗೊಳ್ಳಲಿದೆ.
ಭಯೋತ್ಪಾದನಾ ಸಂಘಟನೆಗಳ ಪಟ್ಟಿಗೆ ಪಿಎಫ್‌ಐ
ಕೇಂದ್ರ ಸರ್ಕಾರವು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಯುಎಪಿಎ ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿತ್ತು. ಪಿಎಫ್‌ಐ ಜೊತೆಗೆ ಅದರ ಅಂಗಸಂಸ್ಥೆಗಳಾದ ರೆಹಾಬ್ ಇಂಡಿಯಾ ಫೌಂಡೇಷನ್ (ಆರ್‌ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಅಸೋಸಿಯೇಷನ್ (ಎನ್‌ಸಿಎಚ್‌ಆರ್‌ಒ), ನ್ಯಾಷನಲ್ ವಿಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಷನ್ ಮತ್ತು ರೆಹಾಬ್ ಫೌಂಡೇಷನ್ (ಕೇರಳ) ಸಂಘಟನೆಗಳನ್ನೂ ನಿಷೇಧಿಸಲಾಗಿತ್ತು.
ಏನಿದು ಯುಎಪಿಎ ಕಾಯ್ದೆ
ಕಾನೂನುಬಾಹಿರ ಚಟುವಟಿಕೆಗಳ ಸಂಘಟನೆಗಳನ್ನು ತಡೆಯುವ ಗುರಿಯನ್ನು ಯುಎಪಿಎ ಕಾಯ್ದೆಯು ಹೊಂದಿದೆ. ಭಾರತದ ಸಾರ್ವಭೌಮತ್ವದ ವಿರುದ್ಧ ನಡೆಸುವ ಚಟುವಟಿಕೆಗಳನ್ನು ತಡೆಯಲು ಈ ಕಾಯ್ದೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಯಾವುದೇ ಕಾನೂನಿನ ಪ್ರಕ್ರಿಯೆ ಇಲ್ಲದೆ ವ್ಯಕ್ತಿಗಳನ್ನು ಉಗ್ರರು ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಲಾಗಿತ್ತು. ಈ ತಿದ್ದುಪಡಿ ಮೂಲಕ ದೊರೆತ ಅಧಿಕಾರ ಬಳಸಿಕೊಂಡು ಕೇಂದ್ರ ಸರ್ಕಾರವು ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿತ್ತು.
Published On - 10:37 am, Fri, 27 January 23