ಬೆಂಗಳೂರು, ಫೆ.04: ಬೆಂಗಳೂರಿನ ಆ್ಯಪ್ ಆಧಾರಿದ ಟ್ರ್ಯಾಕ್ಸಿ ಆಗ್ರಿಗೇಟರ್ ಗಳ ಹಗಲು ದರೋಡೆಗೆ ಲಗಾಮ್ ಇಲ್ಲದಂತಾಗಿದೆ. ಮನಸಿಗೆ ಬಂದಂತೆ ದರ ಏರಿಕೆ ಮಾಡಿ ಜನರಿಂದ ನಿರಂತರ ಸುಲಿಗೆ ಮಾಡ್ತಿದ್ದಾರೆ. ಈ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ (Transport Department) ಹೊಸದೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪೀಕ್ ಹವರ್ನಲ್ಲಿ ಡಬಲ್ ರೇಟ್, ಮಳೆ ಬಂದ್ರೆ ಬೇಕಾಬಿಟ್ಟಿ ದರ ಏರಿಕೆ, ಈಗಿದ್ದ ರೇಟ್ ಮರುಕ್ಷಣದಲ್ಲಿ ದುಪ್ಪಟಾಗಿರುತ್ತೆ. ಇದು ಬೆಂಗಳೂರಿನ ಓಲಾ-ಊಬರ್, ರ್ಯಾಪಿಡೋ ಸೇರಿದಂತೆ ಟ್ಯಾಕ್ಸಿ ಆ್ಯಪ್ ಗಳ ಹಗಲು ದರೋಡೆಯ ಕಥೆ. ಹೀಗೆ ಮನಸಿಗೆ ಬಂದಂತೆ ಮಾಡ್ತಿರುವ ಸುಲಿಗೆಗೆ ಜನರು ರೋಸಿ ಹೋಗಿದ್ರು. ದೂರು ನೀಡಿ ನೀಡಿ ಅಸಹಾಯಕಾರಾಗಿದ್ರು. ಕೊನೆಗೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು. ಈ ಕಳ್ಳಾಟಕ್ಕೆ ಫುಲ್ ಸ್ಟಾಪ್ ಹಾಕಲು ಮಾಸ್ಟರ್ ಪ್ಲಾನ್ ಒಂದನ್ನ ಮಾಡಿದೆ.
ಪೀಕ್ ಅವರ್ನಲ್ಲಿ ಬೇಕಾಬಿಟ್ಟಿ ದರ ಏರಿಸಿ ಸುಲಿಗೆ ಮಾಡ್ತಿದ್ದ, ಓಲಾ, ಊಬರ್, ರ್ಯಾಪಿಡೋ ಸೇರಿ ಟ್ಯಾಕ್ಸಿ ಆ್ಯಪ್ಗಳಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ಪ್ರಯಾಣ ಮತ್ತು ಸಾಗಾಣಿಕೆ ದರಗಳನ್ನು ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಮೌಲ್ಯದ ಆಧಾರದ ಮೇಲೆ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಒಂದೇ ಮಾದರಿಯ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಆದೇಶ ತಕ್ಷಣದಲ್ಲೇ ಅನ್ವಯವಾಗುವಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಎಂಕೆ ಹುಬ್ಬಳ್ಳಿ ಧ್ವಜ ತೆರವು: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಗಲಾಟೆಗೆ ಕಾರಣ ಎಂದ ಬೆಳಗಾವಿ ಎಸ್ಪಿ
10 ಲಕ್ಷ ಕ್ಕಿಂತ ಕಡಿಮೆ ಇರುವ ವಾಹನಗಳಿಗೆ ಕನಿಷ್ಠ ದರ 100ರೂ, ಪ್ರತಿ ಕಿ.ಮೀಟರ್ ಗೆ 24 ರೂ. 10 ಲಕ್ಷದಿಂದ 15 ಲಕ್ಷದವರಿಗೆ ಕನಿಷ್ಠ ದರ 115 ರೂ ಪ್ರತಿ ಕಿ.ಮೀಟರ್ ಗೆ 28 ರೂ ನಿಗದಿ ಮಾಡಲಾಗಿದೆ. 15 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಕನಿಷ್ಠ ದರ 130, ಪ್ರತಿ ಕಿ.ಮೀಟರ್ ಗೆ 32 ರೂ ನಿಗದಿ ಮಾಡಲಾಗಿದೆ. ಲಗೇಜ್ ದರ ಮೊದಲಿನ 120 ಕೆಜಿ ವರೆಗೆ ಉಚಿತ ನಂತರ 30 ಗ್ರಾಂಗೆ 7 ರೂ ನಿಗದಿ ಮಾಡಲಾಗಿದೆ. ಕಾಯುವಿಕೆ ದರ ಮೊದಲು 5 ನಿಮಿಷ ಉಚಿತ. ನಂತರ ಪ್ರತಿ ನಿಮಿಷಕ್ಕೆ 1 ರೂ. ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರ ಮಾಡುವ ಟ್ಯಾಕ್ಸಿ ಗಳ ಮೇಲೆ 10 ರಷ್ಟು ಹೆಚ್ಚುವರಿ ಜಿಎಸ್ಟಿ ಟೋಲ್ ಶುಲ್ಕವನ್ನ ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಇನ್ಮೇಲೆ ಸಮಯದ ಆಧಾರದ ಮೇಲೆ ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿಪಡಿಸಿರೋ ದರಗಳನ್ನು ಮಾತ್ರ ಪಡೆಯಬೇಕು. ಇಲ್ಲವಾದ್ರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆ ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ 2021ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಿಗದಿ ಮಾಡಿತ್ತು. ಆದರೆ ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ 3-4 ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಸಿಟಿ ಟ್ಯಾಕ್ಸಿ ಸೇವೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ ಸಂಬಂಧ ಜನರಿಂದ ವ್ಯಾಪಕ ದೂರುಗಳು ಬಂದಿವೆ. ಹೀಗಾಗಿ ಅಗ್ರಿಗೇಟರ್ ಕಂಪನಿ ಹಾಗೂ ಇತರೆ ಟ್ಯಾಕ್ಸಿ ಚಾಲಕರ ಆಟಾಟೋಪಕ್ಕೆ ಬ್ರೇಕ್ ಹಾಕಲು ಏಕರೂಪದ ದರ ನಿಗದಿಪಡಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:22 pm, Sun, 4 February 24