ಬೆಂಗಳೂರು: ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೆ ಅನುಗುಣವಾದ ಅಭಿಪ್ರಾಯಗಳನ್ನು ಇತರ ದೇಶಗಳ ಮೇಲೆ ಹೇರುವುದನ್ನು ನಿಲ್ಲಿಸುವ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ (Dr. S. Jaishankar) ಹೇಳಿದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ (Tejasvi Surya) ಮತ್ತು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ (PC Mohan) ನೇತೃತ್ವದಲ್ಲಿ ಕಬ್ಬನ್ ಪಾರ್ಕ್ನಲ್ಲಿ 500 ಕ್ಕಿಂತಲೂ ಅಧಿಕ ಯುವ ಮತದಾರರು, ವಾಯು ವಿಹಾರಿ ಗಳೊಂದಿಗೆ ಆಯೋಜನೆಗೊಂಡಿದ್ದ Meet and Greet ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಸಂಸದ ಸ್ಥಾನಕ್ಕೆ ಅನರ್ಹಗೊಂಡ ಪ್ರಕ್ರಿಯೆಗೆ ಅಮೆರಿಕ ಮತ್ತು ಜರ್ಮನಿ ದೇಶಗಳು ನೀಡಿರುವ ಪ್ರತಿಕ್ರಿಯೆ ಅನಗತ್ಯ ಎಂದರು.
ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆಯಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ಮೂಲಭೂತ ಪ್ರಜಾಪ್ರಭುತ್ವ ತತ್ವಗಳು ಅನ್ವಯಿಸಬೇಕು ಎಂದು ಜರ್ಮನಿ ಹೇಳಿತ್ತು. ಭಾರತದ ವಿರೋಧ ಪಕ್ಷದ ರಾಜಕಾರಣಿ ರಾಹುಲ್ ಗಾಂಧಿ ವಿರುದ್ಧದ ಪ್ರಕರಣದ ತೀರ್ಪನ್ನು ನಾವು ಗಮನಿಸಿದ್ದೇವೆ. ಅವರ ಸಂಸದೀಯ ಸ್ಥಾನವನ್ನು ರದ್ದು ಮಾಡಲಾಗಿದೆ. ನಮಗೆ ತಿಳಿದಿರುವಂತೆ ರಾಹುಲ್ ಗಾಂಧಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವವರಿದ್ದಾರೆ ಎಂದು ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದರು.
“ಪಾಶ್ಚಿಮಾತ್ಯ ರಾಷ್ಟ್ರಗಳು ಬೇರೆ ದೇಶಗಳ ಸಾರ್ವಭೌಮತ್ವ, ಸಾಂವಿಧಾನಿಕ ಅಧಿಕಾರಗಳ ಕುರಿತಾದ ಆಂತರಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವೇ ಶ್ರೇಷ್ಠ ಎಂಬ ಮನಸ್ಥಿತಿಯಿಂದ ಹೊರಬಂದಿಲ್ಲ, ಇದೇ ಪರಿಸ್ಥಿತಿ ಮುಂದುವರಿದಿರುವುದರಿಂದ ಬೇರೆ ರಾಷ್ಟ್ರಗಳೂ ಸಮನಾದ ದೃಷ್ಟಿಕೋನದಿಂದ ಪ್ರತಿಕ್ರಿಯೆ ನೀಡಲು ಆರಂಭಿಸಿರುವುದು ಸಾಮಾನ್ಯ. ಹಿಂದೆಂದಿಗಿಂತಲೂ ಪ್ರಸ್ತುತ ಸಂದರ್ಭದಲ್ಲಿ ಇಂತಹ ಮನಸ್ಥಿತಿಯನ್ನು ವಿಶ್ವದಾದ್ಯಂತ ನಾವು ಕಾಣಬಹುದು” ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸುಲೇಟ್ ಕಚೇರಿ ಆರಂಭಿಸಲು ಬ್ಲಿಂಕನ್ಗೆ ಮನವಿ ಸಲ್ಲಿಸುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್
“ಇನ್ನೊಂದು ಆಯಾಮದ ಮೂಲಕ ಗಮನಿಸಿದರೆ, ನಮ್ಮಲ್ಲಿಯೇ ಇರುವ ಕೆಲವರು ಪಶ್ಚಿಮದ ರಾಷ್ಟ್ರಗಳಿಗೆ ತೆರಳಿ ಭಾರತದ ಕುರಿತಾಗಿ ಅವಮಾನಕರ ಅಭಿಪ್ರಾಯಗಳನ್ನು ವಿವರಿಸಿ, ಆಹ್ವಾನ ನೀಡಿರುವುದರ ಪರಿಣಾಮದಿಂದ ಮಾತ್ರ ಇಂತಹ ಹೇಳಿಕೆಗಳು ಹೊರಬರಲು ಸಾಧ್ಯ. ಈ ರೀತಿಯ ಮನಸ್ಥಿತಿಯ ದೇಶದ ಒಳಗಿನ ಹಾಗೂ ಹೊರಗಿನ ಇಬ್ಬರಲ್ಲೂ ಇರುವ ಮೂಲ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ನಡೆಯಲೇಬೇಕಿದೆ” ಎಂದು ಅವರು ವಿವರಿಸಿದರು.
ಇತ್ತೀಚೆಗೆ ರಾಹುಲ್ ಗಾಂಧಿಯವರು ಬ್ರಿಟನ್ಗೆ ಭೇಟಿ ನೀಡಿದ್ದ ಸಮಯದಲ್ಲಿ ಕೇಂಬ್ರಿಡ್ಜ್ ಯೂನಿವರ್ಸಿಟಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತದ ಬಗ್ಗೆ ಟೀಕಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೇಕಾದ ಸಾಂಸ್ಥಿಕ ಚೌಕಟ್ಟು ದುರ್ಬಲಗೊಳ್ಳುತ್ತಿದೆ. ಭಾರತೀಯ ಪ್ರಜಾತಂತ್ರ ವ್ಯವಸ್ಥೆಯ ಮೂಲ ಸ್ವರೂಪವೇ ಆಕ್ರಮಕ್ಕೊಳಗಾಗಿದೆ. ವಿಪಕ್ಷ ನಾಯಕರ ಮೇಲೆ ಸರ್ಕಾರ ಗೂಢಚಾರಿಕೆ ಮಾಡಲು ಪೆಗಾಸಸ್ ಬಳಸುತ್ತಿದೆ. ನನ್ನ ಫೋನ್ನಲ್ಲೇ ಪೆಗಾಸಸ್ ಹಾಕಲಾಗಿತ್ತು. ಮಾಧ್ಯಮ ಮತ್ತು ನ್ಯಾಯಾಂಗವನ್ನು ಸರ್ಕಾರ ನಿಯಂತ್ರಿಸುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು ಜನಾಂಗದವರನ್ನು ಬೆದರಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದರು ಎಂದಿದ್ದರು.
ಉಚಿತ ಕೊಡುಗೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, “ಇತ್ತೀಚೆಗೆ ಉಚಿತ ಕೊಡುಗೆಗಳನ್ನು ನೀಡುವ ಪರಿಪಾಠ ದೆಹಲಿಯಿಂದ ಶುರುವಾಗಿ ದೇಶದ ಇತರ ಭಾಗಗಳಿಗೂ ಹಬ್ಬುತ್ತಿರುವುದು ಆತಂಕಕಾರಿ. ಅಂತಹ ಸರ್ಕಾರಗಳಿಗೆ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸಮಸ್ಯೆ ಆಗಿರುವುದರಿಂದ ಹಾಗೂ ತಾತ್ಕಾಲಿಕ ರಾಜಕೀಯ ಲಾಭದ ಸಲುವಾಗಿ ಮಾಡುವ ಇಂತಹ ಯೋಜನೆಗಳಿಗೆ ಯಾರೋ ಒಬ್ಬರು ಬೆಲೆ ತೆರಲೆಬೇಕು. ಒಂದೆಡೆ ಉಚಿತ ನೀಡುವಾಗ, ಇನ್ನೆಲ್ಲೋ ಒಂದೆಡೆಯಿಂದ ಕ್ರೋಢೀಕರಣ ಮಾಡಲೇಬೇಕು. ಜವಾಬ್ದಾರಿ ರಹಿತ ಇಂತಹ ಉಚಿತ ಕೊಡುಗೆಗಳ ಕಾರ್ಯಕ್ರಮಗಳಿಂದ ದೇಶದ ಬೊಕ್ಕಸಕ್ಕೆ ಉಂಟಾಗುವ ಹಾನಿ ಅಪಾರ” ಎಂದರು.
“ಪ್ರಸ್ತುತ G 20 ಆತಿಥೇಯ ರಾಷ್ಟ್ರವಾಗಿರುವ ಭಾರತವು ಇದುವರೆಗೆ G 20 ಸದಸ್ಯ ರಾಷ್ಟ್ರವಲ್ಲದ ದೇಶಗಳನ್ನು ಸಂಪರ್ಕಿಸಿ, ಅವುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ. G 20 ಸಮಾವೇಶಕ್ಕೆ ಆಗಮಿಸುವ ಜಗತ್ತಿನ ಖ್ಯಾತ 200 ಕ್ಕಿಂತಲೂ ಅಧಿಕ ಅಗ್ರಗಣ್ಯ ವ್ಯಕ್ತಿಗಳಿಗೆ ಈ ದೇಶದ ವೈವಿಧ್ಯಮಯ ಸಂಸ್ಕೃತಿ, ಆಚಾರ, ವಿಚಾರ, ಅಡುಗೆ, ತಿನಿಸುಗಳನ್ನು ಕುರಿತಾಗಿ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶ. G 20 ಆಯೋಜನೆಯ ಹಿಂದಿನ ಉದ್ದೇಶ, ಭಾರತ ವಿಶ್ವಕ್ಕೆ ತೆರೆದುಕೊಳ್ಳುವುದು ಹಾಗೂ ವಿಶ್ವವು ಭಾರತವನ್ನು ಅರ್ಥೈಸಿಕೊಳ್ಳುವುದು ಆಗಿದೆ ಎಂದು ಡಾ. ಎಸ್ ಜೈಶಂಕರ್ ಸಂವಾದದಲ್ಲಿ ವಿವರಿಸಿದ್ದು ವಿಶೇಷವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
“ಮುಂಚೆ ಇಂತಹ ಅತೀ ದೊಡ್ಡ ಸಮಾವೇಶಗಳನ್ನು ಆಯ್ದ ಕೇವಲ 2-3 ನಗರಗಳಲ್ಲಿ ಮಾತ್ರ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ದೇಶದ 60 ಇತರ ನಗರಗಳಲ್ಲಿ ಸಮಾವೇಶ ಆಯೋಜಿಸಿ ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸಿರುವುದು ಗಮನಾರ್ಹ. ಭಾರತದ ಅಭಿವೃದ್ಧಿಗೆ ಪ್ರತೀ ರಾಜ್ಯ, ನಗರಗಳು ಕೂಡ ಗಣನೀಯ ಕೊಡುಗೆ ನೀಡುತ್ತಿದ್ದು, ಜಾಗತಿಕ ವಿದ್ಯಮಾನಗಳನ್ನು ಇತರ ನಗರಗಳಿಗೂ ಪ್ರಚುರಪಡಿಸುವ ಉದ್ದೇಶದಿಂದ ಈ ರೀತಿ ಎಲ್ಲೆಡೆ G 20 ಸಮಾವೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ” ಎಂದು ಜೈಶಂಕರ್ ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Sun, 2 April 23