ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ಅತ್ಯಾಚಾರ, ಕೊಲೆಗಳು: ಇದು ಕಳವಳಕಾರಿ ಸಂಗತಿ ಎಂದ ಸಿದ್ದರಾಮಯ್ಯ

ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿವೆ. ಇದು ಕಳವಳಕಾರಿ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್  ಮಾಡಿದ್ದಾರೆ.

ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ಅತ್ಯಾಚಾರ, ಕೊಲೆಗಳು: ಇದು ಕಳವಳಕಾರಿ ಸಂಗತಿ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯImage Credit source: kannadaprabha.com
Follow us
|

Updated on:Apr 02, 2023 | 5:41 PM

ಬೆಂಗಳೂರು: ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿವೆ. ಇದು ಕಳವಳಕಾರಿ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಟ್ವೀಟ್  ಮಾಡಿದ್ದಾರೆ. ಈ ಸರ್ಕಾರದಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಯುವುದು ಡೌಟು. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಲಿ. ಧರ್ಮ ರಕ್ಷಣೆ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿ ಬೆಳೆಸಿತ್ತು. ಇದಕ್ಕೆ ಸಾತನೂರು ಬಳಿ ನಡೆದ ಯುವಕನ ಹತ್ಯೆಯೇ ಸಾಕ್ಷಿ. ಹತ್ಯೆಯ ಹೊಣೆಯನ್ನು ಅಸಮರ್ಥ ಗೃಹ ಸಚಿವ ಆರಗ ಜ್ಞಾನೇಂದ್ರರೇ ಹೊರಬೇಕು. ಅಸಮರ್ಥ‌, ಅದಕ್ಷ, ಬೇಜವಾಬ್ದಾರಿ ಗೃಹ‌ಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ‌ ಇಲಾಖೆ ಮೇಲೆ ಆರಗ ಜ್ಞಾನೇಂದ್ರಗೆ ನಿಯಂತ್ರಣ‌ವೇ ಇಲ್ಲ. ಇಂಥ ಸಚಿವರಿಗೆ ರಾಜ್ಯದ ಶಾಂತಿ‌, ಸುವ್ಯವಸ್ಥೆಯನ್ನು‌ ನಿರ್ವಹಿಸಲು‌ ಸಾಧ್ಯವೇ ಎಂದು ವಾಗ್ದಾಳಿ ಮಾಡಿದ್ದಾರೆ.

ಕೂಡಲೇ ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ಕಿತ್ತುಹಾಕಲಿ. ಗೋರಕ್ಷಣೆಯ ಹೆಸರಲ್ಲಿ ನಡೆದ ಕೊಲೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗವಾಗಿರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನೇ ಜನ ಕಳೆದುಕೊಂಡಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿನ್ನೆ ಕೂಡ ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಕಗ್ಗಲೀಪುರದ ಬಾಲಕಿಯ ಅತ್ಯಾಚಾರ ಪ್ರಕರಣ ನಡೆದು ವಾರ ಕಳೆದಿಲ್ಲ ಅಷ್ಟರಲ್ಲೇ ಕೋರಮಂಗಲದ ಯುವತಿಯನ್ನು ನಾಲ್ವರು ರಾಕ್ಷಸರು ಅತ್ಯಾಚಾರಗೈದು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನೇ ಜನ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದರು.

ಗೃಹಸಚಿವರ ಆರಗ ಜ್ಞಾನೇಂದ್ರರ ಅಸಾಮರ್ಥ್ಯವೇ ಈ ದೌರ್ಜನ್ಯಗಳಿಗೆ ಕಾರಣ

ದುಷ್ಟರು, ಸಮಾಜಘಾತುಕರನ್ನು ಹಿಡಿದು ಸದೆಬಡಿಯಬೇಕಿದ್ದ ಸರ್ಕಾರ ಬದಲಿಗೆ ರೌಡಿಶೀಟರ್​ಗಳು, ಕೊಲೆಗಡುಕರಿಗೆ ರತ್ನಗಂಬಳಿ ಹಾಸಿ ಸನ್ಮಾನಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದರ ಫಲವನ್ನು ಜನಸಾಮಾನ್ಯರು ಉಣ್ಣಬೇಕಿದೆ. ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಸದನದಲ್ಲಿ ಪ್ರಶ್ನಿಸಿದಾಗ ಮೈಮೇಲೆ ಕಂಬಳಿಹುಳ ಬಿದ್ದವರಂತೆ ಕುಣಿದಾಡಿ ಎಗರಾಡಿದ್ದ ಗೃಹಸಚಿವರ ಆರಗ ಜ್ಞಾನೇಂದ್ರರ ಅಸಾಮರ್ಥ್ಯವೇ ಈ ದೌರ್ಜನ್ಯಗಳಿಗೆ ಕಾರಣ.

ಇದನ್ನೂ ಓದಿ: ಸಚಿವ ಶ್ರೀರಾಮುಲು ಅನ್ನು ಪೆದ್ದ ಎಂದ ಮಾಜಿ ಸಿಎಂ ಸಿದ್ದರಾಮಯ್ಯ: ಏಕವಚನದಲ್ಲೇ ವಾಗ್ದಾಳಿ

ಜನಸಾಮಾನ್ಯರು ಹೇಳುವ ಮಾತು ನಿಜ

ಕಠಿಣ ಕ್ರಮದ ಭರವಸೆ ನೀಡುವ ಗೃಹಸಚಿವರು ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಶಕ್ತರು ಎಂಬ ಜನಸಾಮಾನ್ಯರು ಹೇಳುವ ಮಾತು ನಿಜವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾಡಿದ್ದಾರೆ. ಸಾಮರ್ಥ್ಯ, ನೈತಿಕತೆ ಇಲ್ಲದೆ ಕುರ್ಚಿಗೆ ಅಂಟಿಕೊಂಡಿರುವ ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದರು.

ರಾಜ್ಯ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ

ಗೃಹಸಚಿವ ಆರಗ ಜ್ಞಾನೇಂದ್ರರ ಅದಕ್ಷತೆಯಿಂದ ರಾಜ್ಯ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಚುನಾವಣೆ ಕಾಲದಲ್ಲಿ ಪೊಲೀಸ್ ನಿಷ್ಕ್ರಿಯತೆ ಅಪಾಯಕಾರಿಯಾಗಬಾರದು. ಆದ್ದರಿಂದ ಚುನಾವಣಾ ಆಯೋಗ ಪೊಲೀಸ್ ಇಲಾಖೆ ಕಾರ್ಯನಿರ್ವಹಣೆ ಮೇಲೆ ನಿಗಾಯಿಡಬೇಕೆಂದು ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:41 pm, Sun, 2 April 23