Karnataka Polls: ಕಾಂಗ್ರೆಸ್ ವಿರುದ್ಧ ಲಿಂಗಾಯತ, ಮುಸ್ಲಿಂ ಸಮುದಾಯ ಗರಂ; ಕೈ ಟಿಕೆಟ್ ಆಕಾಂಕ್ಷಿಗಳಿಂದ ಬಹಿರಂಗ ಸಭೆ
ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯಗಳು ಅಸಮಾಧಾನ ಹೊರಹಾಕುತ್ತಿದ್ದು, ಟಿಕೆಟ್ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಮುಖಂಡರಲ್ಲೂ ಅಸಮಾಧಾನ ಮುಂದುವರಿದಿದೆ.
ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಆ್ಯಕ್ಟಿವ್ ಆಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ (Congress Ticket Fight) ಜೋರಾಗಿದೆ. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಸುಮುದಾಯದ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಇತ್ತ ನಾಯಕರ ನಡೆಯಿಂದ ಅಸಮಾಧಾನಗೊಂಡ ಕಾಂಗ್ರೆಸ್ ಮುಖಂಡರು ಬಹಿರಂಗ ಸಭೆಗಳನ್ನು ನಡೆಸುತ್ತಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತ ಮುಖಂಡರೂ ಆಗಿರುವ ಮಾಜಿ ಶಾಸಕ ಶಫಿ ಅಹಮ್ಮದ್ (Shafi Ahmed) ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಲ್ಪಸಂಖ್ಯಾತರು ಟಿಕೆಟ್ ಕೇಳಿ ಪಡೆಯುವ ಪರಿಸ್ಥಿತಿಗೆ ಬಂದಿದ್ದೇವೆ ಎಂದರು. ತುಮಕೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದೆ. ಆದರೂ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ. 2ನೇ ಪಟ್ಟಿಯಲ್ಲಿ ಮಾಜಿ ಶಾಸಕ ರಫಿಕ್ ಅಹ್ಮದ್ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ತುಮಕೂರಿನ 11 ಕ್ಷೇತ್ರದ ಪೈಕಿ 8 ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಿದೆ. ಇನ್ನೂ ಮೂರು ಬಾಕಿ ಉಳಿಸಿಕೊಂಡಿದೆ. ತುಮಕೂರು ನಗರ ಕ್ಷೇತ್ರ ಗೆಲ್ಲಬೇಕಾದರೆ ಮಾಜಿ ಶಾಸಕ ರಫಿಕ್ ಅಹಮದ್ ಅವರಿಗೆ ಟಿಕೆಟ್ ಕೊಡಿ ಎಂದು ಮಾಜಿ ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ಬಳಿ ಹತ್ತಾರು ಬಾರಿ ಕೇಳಿಕೊಂಡಿದ್ದೇವೆ. ಆದರೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆಯಾಗದಿರುವುದು ನಮಗೆ ನಿರಾಸೆ ಉಂಟಾಗಿದೆ. ಪಕ್ಷದಿಂದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅವಮಾನ ಆಗಿದೆ. ಇದು ಸಹಿಸಲಾರದ ಅವಮಾನ ಉಂಟುಮಾಡಿದ್ದಾರೆ ಎಂದರು.
ತುಮಕೂರು ನಗರ ಕ್ಷೇತ್ರವನ್ನು ಪಕ್ಷದ ಮುಖಂಡರು ಲಘುವಾಗಿ ಪರಿಗಣಿಸಿದ್ದಾರೆ. ನಾವು ಗಂಭೀರವಾಗಿ ಹೇಳುತಿದ್ದೇವೆ ನಮಗಾದ ಅವಮಾನ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾವು ಅಲ್ಪಸಂಖ್ಯಾತರು ನಿಮ್ಮ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡಿ ಶಿಸ್ತಿನ ಸಿಪಾಯಿ ಆಗಿದ್ದೇವೆ. ತುಮಕೂರು ನಗರ ಕ್ಷೇತ್ರ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮೀಸಲಾಗಿರಿಸಿದೆ. ಹಾಗಾಗಿ ಅಲ್ಪ ಸಂಖ್ಯಾತರಿಗೆ ಕೊಡುವಂತೆ ಮನವಿ ಮಾಡುತ್ತೇವೆ. ನಾವು ಟಿಕೆಟ್ ಬೇಡಿಪಡೆಯುವ ಮಟ್ಟಕ್ಕೆ ಕಾಂಗ್ರೆಸ್ ನಮಗೆ ತಂದು ನಿಲ್ಲಿಸಿದೆ ಎಂದರು.
ಇದನ್ನೂ ಓದಿ: HD Kumaraswamy: ಹಾಸನ ಜೆಡಿಎಸ್ ಟಿಕೆಟ್ ಯಾರಿಗೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಹೆಚ್ಡಿ ಕುಮಾರಸ್ವಾಮಿ
ಪಕ್ಷಕ್ಕಾಗಿ ಇಷ್ಟೇಲ್ಲಾ ದುಡಿದರೂ ನಮ್ಮನ್ನು ಯಾವುದೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರ ಮನಸ್ಸಿಗೆ ಬಂದಹಾಗೆ ನಡೆದುಕೊಳ್ಳುತಿದ್ದಾರೆ. ಅದು ಆಗಕೂಡದು. ನಮ್ಮ ನಿರ್ಲಕ್ಷ್ಯಕ್ಕೆ ಇಡೀ ಪಕ್ಷವನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ. ತುಮಕೂರಿಂದ ಬೆಳಗಾವಿವರೆಗೂ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಪ ಸಂಖ್ಯಾತ ಸಮುದಾಯ ಬೆಳೆಯಲು ನಮಗೆ ಅವಕಾಶ ಕೊಡಬೇಕು ಎಂದರು.
ಚಿಕ್ಕಮಗಳೂರು ಕಾಂಗ್ರೆಸ್ನಲ್ಲಿ ನಿಲ್ಲದ ಅಸಮಾಧಾನದ ಕೂಗು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಚ್.ಡಿ.ತಮ್ಮಯ್ಯ ವಿರುದ್ಧದ ಅಸಮಾಧಾನದ ಕೂಗು ಮುಂದುವರಿದಿದೆ. ಟಿಕೆಟ್ ಆಕಾಂಕ್ಷಿಗಳು ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಆರಂಭಿಸಿದ್ದು, ನಿನ್ನೆಯ ಗಲಾಟೆ ಬಳಿಕ ಇಂದು ಮತ್ತೆ ಕಾಂಗ್ರೆಸ್ ಮುಖಂಡರ ಬಹಿರಂಗ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಆರು ಜನ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಬಂಡಾಯ ಸಭೆ ನಡೆಸಲಾಗಿದ್ದು, ನಮ್ಮ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ಕೊಡಬೇಕು. ಆರು ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಲ್ಲಿ ಕೆಲಸ ಮಾಡೋಣ ಎಂಬ ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ. ಅಲ್ಲದೆ, ಹೆಚ್.ಡಿ.ತಮ್ಮಯ್ಯ ಬಿಜೆಪಿ ಏಜೆಂಟ್ ಎಂದು ಆಕ್ರೋಶ ಹೊರಹಾಕಲಾಗಿದ್ದು, ತಮ್ಮಯ್ಯ ಕಾಂಗ್ರೆಸ್ ಸೇರಿರುವುದೇ ಬಿಜೆಪಿ ಗೆಲ್ಲಿಸಲು ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಮತ್ತೆ ಗರಂ
ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತರಿಗೆ ಮಾನ್ಯತೆ ನೀಡದ ಹಿನ್ನೆಲೆ ಆಕ್ರೋಶಗೊಂಡಿರುವ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಹಾಗೂ ಲಿಂಗಾಯತ ಸಮಾನ ಮನಸ್ಕರ ವೇದಿಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ನಲ್ಲಿ ಲಿಂಗಾಯತ ಮಠಾಧೀಶರ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ. 2ನೇ ಪಟ್ಟಿಯಲ್ಲೂ ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಚುನಾವಣೆಯಲ್ಲಿ ಇದರ ಸಾಧಕ-ಬಾಧಕ ಪಕ್ಷ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Sun, 2 April 23