ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್‌ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ

ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ ಎಲೆಕ್ಟ್ರಿಕ್ ಟ್ಯಾಕ್ಸಿ ಬೆಂಗಳೂರು ಪ್ರವೇಶಕ್ಕೆ ರಾಜ್ಯ ಸಾರಿಗೆ ಇಲಾಖೆ ಪರವಾನಗಿ ನೀಡಿದೆ. ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳು-2016ರ ಅಡಿಯಲ್ಲಿ ಪರವಾನಗಿ ನೀಡಲಾಗಿದ್ದು, ಇದು 2031ರ ಸೆಪ್ಟೆಂಬರ್‌ವರೆಗೆ ಮಾನ್ಯವಾಗಿರಲಿದೆ. ಆದರೆ, ಈ ಕಂಪನಿಯ ಪ್ರವೇಶದಿಂದ ಸ್ಥಳೀಯ ಚಾಲಕರ ಆದಾಯ ಕುಸಿಯುತ್ತದೆ ಎಂದು ಕರ್ನಾಟಕದ ಚಾಲಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್‌ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ
ಸಾಂದರ್ಭಿಕ ಚಿತ್ರ
Image Credit source: www.greensm.com

Updated on: Nov 11, 2026 | 4:49 PM

ಬೆಂಗಳೂರು, ನವೆಂಬರ್​​ 11: ವಿಯೆಟ್ನಾಂ ಮೂಲದ ಉದ್ಯಮ ಸಮೂಹ ವಿನ್‌ಗ್ರೂಪ್‌ನ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯಾದ ಗ್ರೀನ್ ಎಸ್‌ಎಂ, ಕರ್ನಾಟಕದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನಿರ್ವಹಿಸಲು ರಾಜ್ಯ ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿದೆ. ಇದರಿಂದ ಈಗಾಗಲೇ ರ‍್ಯಾಪಿಡೋ, ನಮ್ಮ ಯಾತ್ರಿ ಮತ್ತು ಉಬರ್ ಕಂಪನಿಗಳ ಪ್ರಾಬಲ್ಯವಿರುವ ಬೆಂಗಳೂರಿನ ಸ್ಪರ್ಧಾತ್ಮಕ ಕ್ಯಾಬ್ ಮಾರುಕಟ್ಟೆಗೆ ಗ್ರೀನ್ ಎಸ್‌ಎಂ ಪ್ರವೇಶಿಸಲು ಹಾದಿ ಸುಗಮವಾಗಿದೆ.

ಪರಾವನಿಗೆಗೆ ವಿರೋಧ ವ್ಯಕ್ತ

ಆದರೆ, ತನ್ನದೇ ವಾಹನಗಳ ಸಮೂಹವನ್ನು ಹೊಂದಿರುವ ಹಾಗೂ ಚಾಲಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುವ ಜಾಗತಿಕ ಎಲೆಕ್ಟ್ರಿಕ್ ಕ್ಯಾಬ್ ಸೇವೆಯ ಪ್ರವೇಶಕ್ಕೆ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಮತ್ತು ಪೀಸ್ ಆಟೋ ಯೂನಿಯನ್ ಸೇರಿದಂತೆ ಟ್ಯಾಕ್ಸಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮತ್ತೊಂದು ದೊಡ್ಡ ಕಂಪನಿಯ ಪ್ರವೇಶದಿಂದ ಈಗಾಗಲೇ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚಗಳ ನಡುವೆ ಚಾಲಕರ ಆದಾಯ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಅಲ್ಲದೆ, ಗ್ರೀನ್ ಎಸ್‌ಎಂಗೆ ನೀಡಿರುವ ಪರವಾನಗಿಯನ್ನು ಮರುಪರಿಶೀಲಿಸಿ ರದ್ದುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

Loading...

ಇದನ್ನೂ ಓದಿ: ನಮ್ಮ ಮೆಟ್ರೋ: ಔಟರ್ ರಿಂಗ್‌ ರೋಡ್​ನಲ್ಲಿ ಬ್ಲೂ ಲೈನ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭ

ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳು-2016ರ ಅಡಿಯಲ್ಲಿ ಗ್ರೀನ್ ಎಸ್‌ಎಂಗೆ ಪರವಾನಗಿ ನೀಡಲಾಗಿದ್ದು, ಈ ಪರವಾನಗಿ 2031ರ ಸೆಪ್ಟೆಂಬರ್‌ವರೆಗೆ ಮಾನ್ಯವಾಗಿರಲಿದೆ. ಆದರೆ, ಟ್ಯಾಕ್ಸಿ ಸಂಘಟನೆಗಳು ಪರವಾನಗಿ ನೀಡಿರುವ ಪ್ರಕ್ರಿಯೆಯನ್ನೇ ಪ್ರಶ್ನಿಸಿದ್ದು, ಅಗ್ರಿಗೇಟರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿವೆ.

ಭಾರತದಲ್ಲಿ ಗ್ರೀನ್ ಎಸ್‌ಎಂ ಸೇವೆ ಎಲ್ಲೆಲ್ಲಿದೆ?

ಗ್ರೀನ್ ಎಸ್‌ಎಂ ವಿನ್‌ಗ್ರೂಪ್‌ನ ಸಾರಿಗೆ ಮತ್ತು ಸಂಚಾರ ಸೇವೆಗಳ ವಿಭಾಗವಾಗಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಟ್ಯಾಕ್ಸಿ ವಾಹನಗಳ ಸಮೂಹವನ್ನು ನಿರ್ವಹಿಸುತ್ತದೆ. 2026ರ ಜೂನ್‌ನಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗ್ರೀನ್ ಎಸ್‌ಎಂ ಲಿಮೋ ಸೇವೆಯ ಮೂಲಕ ಭಾರತಕ್ಕೆ ಪ್ರವೇಶಿಸಿತ್ತು. ಬಳಿಕ ಹೈದರಾಬಾದ್ ಸೇರಿದಂತೆ ಇತರ ನಗರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಕಂಪನಿಯು ಏಳು ಆಸನಗಳ ಎಲೆಕ್ಟ್ರಿಕ್ ಮಲ್ಟಿ-ಪರ್ಪಸ್ ವಾಹನವಾದ ವಿನ್ಫಾಸ್ಟ್ ಲಿಮೋ ಗ್ರೀನ್ ಅನ್ನು ಬಳಸುತ್ತಿದೆ. ಪ್ರತಿ ಕಿಲೋಮೀಟರ್‌ಗೆ ಸುಮಾರು 8 ರೂಪಾಯಿ ದರದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿದೆ. ತರಬೇತಿ ಪಡೆದ ಚಾಲಕರು ಹಾಗೂ ವಾಹನದ ಒಳಭಾಗ ಮತ್ತು ಹೊರಭಾಗದಲ್ಲಿ ಅಳವಡಿಸಿರುವ ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಮತ್ತು ತುರ್ತು ಸಹಾಯ ಬಟನ್‌ಗಳಂತಹ ಸುರಕ್ಷತಾ ಸೌಲಭ್ಯಗಳೊಂದಿಗೆ ಸೇವೆ ಒದಗಿಸುವುದಾಗಿ ಗ್ರೀನ್ ಎಸ್‌ಎಂ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:48 pm, Wed, 11 November 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us