AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ: ಔಟರ್ ರಿಂಗ್‌ ರೋಡ್​ನಲ್ಲಿ ಬ್ಲೂ ಲೈನ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ಬ್ಲೂ ಲೈನ್‌ ಯೋಜನೆ ಮಹತ್ವದ ಹಂತ ತಲುಪಿದೆ. ಬೈಯಪ್ಪನಹಳ್ಳಿ ಡಿಪೋದಿಂದ ದೊಡ್ಡನೆಕ್ಕುಂದಿವರೆಗೆ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. 13 ನಿಲ್ದಾಣಗಳನ್ನು ಒಳಗೊಂಡ ಸಿಲ್ಕ್‌ ಬೋರ್ಡ್‌-ಕೆ.ಆರ್‌.ಪುರಂ ಮಾರ್ಗವು ಐಟಿ ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ. ಈ ಮಾರ್ಗದಲ್ಲಿ ಮೇ 2027ರ ವೇಳೆಗೆ ಸಾರ್ವಜನಿಕ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ನಮ್ಮ ಮೆಟ್ರೋ: ಔಟರ್ ರಿಂಗ್‌ ರೋಡ್​ನಲ್ಲಿ ಬ್ಲೂ ಲೈನ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭ
ನೀಲಿ ಲೈನ್ ಮೆಟ್ರೋ
ಭಾವನಾ ಹೆಗಡೆ
|

Updated on: Nov 11, 2026 | 12:14 PM

Share

ಮುಖ್ಯಾಂಶಗಳು

  • ಬೆಂಗಳೂರು ಮೆಟ್ರೋ ಬ್ಲೂ ಲೈನ್‌ ರೈಲು ಔಟರ್ ರಿಂಗ್‌ ರೋಡ್‌ಗೆ ತಲುಪಿದೆ
  • ಬೈಯಪ್ಪನಹಳ್ಳಿ ಡಿಪೋದಿಂದ ದೊಡ್ಡನೆಕ್ಕುಂದಿವರೆಗೆ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಿದೆ
  • ಮೇ 2027ರ ವೇಳೆಗೆ ಸಾರ್ವಜನಿಕ ಸಂಚಾರ ಆರಂಭಿಸುವ ಗುರಿ ಬಿಎಂಆರ್‌ಸಿಎಲ್‌ ಹೊಂದಿದೆ

ಬೆಂಗಳೂರು, ನವೆಂಬರ್ 11: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಮಹತ್ವದ ಸುದ್ದಿ. ನಗರದ ಬಹುನಿರೀಕ್ಷಿತ ಬ್ಲೂ ಲೈನ್‌ ಮೆಟ್ರೋ ಯೋಜನೆಯ ರೈಲು ಇದೀಗ ಔಟರ್ ರಿಂಗ್‌ ರೋಡ್‌ ಮಾರ್ಗವನ್ನು ತಲುಪಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಿರುವುದು ಯೋಜನೆಯ ಕಾಮಗಾರಿಯಲ್ಲಿ ಮಹತ್ವದ ಪ್ರಗತಿಯಾಗಿದೆ. ವಿಶೇಷವಾಗಿ ಸಿಲ್ಕ್‌ ಬೋರ್ಡ್‌ನಿಂದ ಕೆಆರ್‌ ಪುರಂವರೆಗಿನ ಸಂಚಾರ ದಟ್ಟಣೆಯಿಂದ ನಿತ್ಯ ಸಂಕಷ್ಟ ಅನುಭವಿಸುವ ಉದ್ಯೋಗಿಗಳು ಹಾಗೂ ಪ್ರಯಾಣಿಕರಿಗೆ ಈ ಯೋಜನೆ ದೊಡ್ಡ ನಿರೀಕ್ಷೆ ಮೂಡಿಸಿದೆ.

ಟ್ರಯಲ್ ರನ್ ಆರಂಭ!

ಸಿಲಿಕಾನ್ ಸಿಟಿಯ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿರುವ ನಮ್ಮ ಮೆಟ್ರೋ ಬ್ಲೂ ಲೈನ್‌ ಯೋಜನೆ ಮಹತ್ವದ ಹಂತ ತಲುಪಿದೆ. ನಗರದ ಐಟಿ ಕಾರಿಡಾರ್‌ ಎಂದೇ ಗುರುತಿಸಿಕೊಂಡಿರುವ ಔಟರ್ ರಿಂಗ್‌ ರೋಡ್‌ (ORR) ಮಾರ್ಗಕ್ಕೆ ಮೆಟ್ರೋ ರೈಲು ತಲುಪಿದ್ದು, ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ನವೆಂಬರ್ 10ರಂದು ಬೈಯಪ್ಪನಹಳ್ಳಿ ಡಿಪೋದಿಂದ ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣದವರೆಗೆ ರೈಲಿನ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ಇದರಿಂದಾಗಿ ಸಿಲ್ಕ್‌ ಬೋರ್ಡ್‌-ಕೆ.ಆರ್‌.ಪುರಂ ಮಾರ್ಗದ ಕಾಮಗಾರಿಯಲ್ಲಿ ಮತ್ತೊಂದು ಮಹತ್ವದ ಪ್ರಗತಿ ಸಾಧಿಸಿದಂತಾಗಿದೆ.

ಬೈಯಪ್ಪನಹಳ್ಳಿಯಿಂದ ದೊಡ್ಡನೆಕ್ಕುಂದಿವರೆಗೆ ರೈಲು ಸಂಚಾರ

ಬಿಎಂಆರ್‌ಸಿಎಲ್‌ ಅಧಿಕಾರಿಗಳ ಪ್ರಕಾರ, ನವೆಂಬರ್ 7ರಂದು ಬೈಯಪ್ಪನಹಳ್ಳಿ ಡಿಪೋದಿಂದ ಬೆನ್ನಿಗಾನಹಳ್ಳಿವರೆಗೆ ಮೊದಲ ಹಂತದ ಪರೀಕ್ಷಾರ್ಥ ಸಂಚಾರ ನಡೆಸಲಾಗಿತ್ತು. ಇದೀಗ ರೈಲನ್ನು ಕೆ.ಆರ್‌.ಪುರಂ ಮಾರ್ಗವಾಗಿ ದೊಡ್ಡನೆಕ್ಕುಂದಿವರೆಗೆ ವಿಸ್ತರಿಸಲಾಗಿದೆ. ರೈಲಿನ ವಿದ್ಯುತ್ ವ್ಯವಸ್ಥೆ, ಬೋಗಿಗಳ ಕಾರ್ಯಕ್ಷಮತೆ, ಹಳಿ ಮತ್ತು ಮೂಲಸೌಕರ್ಯಗಳ ಸಿದ್ಧತೆ ಪರಿಶೀಲಿಸುವುದು ಈ ಪರೀಕ್ಷಾರ್ಥ ಸಂಚಾರದ ಉದ್ದೇಶವಾಗಿದೆ. ಮುಂದಿನ ಹಂತದಲ್ಲಿ ಮುಖ್ಯ ಮಾರ್ಗದ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲಾಗುತ್ತಿದೆ.

13 ನಿಲ್ದಾಣಗಳನ್ನು ಒಳಗೊಂಡ ಬ್ಲೂ ಲೈನ್!

ಬ್ಲೂ ಲೈನ್‌ನ ಎರಡನೇ ಹಂತದ 2ಎ ಯೋಜನೆಯಡಿ ಸೆಂಟ್ರಲ್ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌.ಪುರಂವರೆಗೆ 19.75 ಕಿಲೋಮೀಟರ್ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿರಲಿವೆ. ಸೆಂಟ್ರಲ್ ಸಿಲ್ಕ್‌ ಬೋರ್ಡ್‌, ಎಚ್‌ಎಸ್‌ಆರ್‌ ಲೇಔಟ್‌, ಅಗರ, ಇಬ್ಬಲೂರು, ಬೆಳ್ಳಂದೂರು, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಬಾಗ್ಮನೆ, ಸರಸ್ವತಿನಗರ ಹಾಗೂ ಕೆ.ಆರ್‌.ಪುರಂ ಪ್ರಮುಖ ನಿಲ್ದಾಣಗಳಾಗಿವೆ.

ಮೇ 2027ಕ್ಕೆ ಸಾರ್ವಜನಿಕ ಸಂಚಾರದ ಗುರಿ

ಔಟರ್ ರಿಂಗ್‌ ರೋಡ್‌ನಲ್ಲಿ ಸಾವಿರಾರು ಐಟಿ ಉದ್ಯೋಗಿಗಳು ಪ್ರತಿದಿನ ಸಂಚರಿಸುತ್ತಿದ್ದು, ಈ ಮಾರ್ಗದ ಮೆಟ್ರೋ ಸೇವೆ ಆರಂಭವಾದರೆ ರಸ್ತೆ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಬಿಎಂಆರ್‌ಸಿಎಲ್‌ ಮೇ 2027ರ ವೇಳೆಗೆ ಈ ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ಆರಂಭಿಸುವ ಗುರಿ ಹೊಂದಿದೆ. ಆದರೆ ಅದಕ್ಕೂ ಮೊದಲು ಪರೀಕ್ಷಾರ್ಥ ಸಂಚಾರ, ಸುರಕ್ಷತಾ ತಪಾಸಣೆ ಮತ್ತು ಅಗತ್ಯ ಶಾಸನಬದ್ಧ ಅನುಮತಿಗಳು ಪೂರ್ಣಗೊಳ್ಳಬೇಕಿದೆ. ಬ್ಲೂ ಲೈನ್‌ ಮುಂದಿನ ಹಂತದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More