
ಬೆಂಗಳೂರು, ನವೆಂಬರ್ 04: ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗ್ತಿದೆ ಎಂದು ಆರೋಪಿಸಿ ಲೆಕ್ಕಪತ್ರ ಕೋರಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನಯ ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿದೆ. ರಿಟ್ ಅರ್ಜಿಯಲ್ಲಿ ಬ್ಯಾಂಕ್ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರೆಂದು ವಿಜಯ್ ಮಲ್ಯ ಪರ ವಕೀಲ ಸಜನ್ ಪೂವಯ್ಯಗೆ ಕೋರ್ಟ್ ಪ್ರಶ್ನೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್ಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.
ವಿಜಯ್ ಮಲ್ಯ ಪರ ವಾದಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತದೆ. ಬ್ಯಾಂಕ್ನವರು ಒಂದು ಹೇಳುತ್ತಾರೆ, ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ UBHL ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿದ್ದು, ಡಾ.ವಿಜಯ್ ಮಲ್ಯ ಇದರ ನಿರ್ದೇಶಕರಾಗಿದ್ದರು. ಅಲ್ಲದೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವುದು ಸಾಂವಿಧಾನಿಕ ಹಕ್ಕೆಂದು ಹೇಳಿದ್ದಾರೆ. ಈ ವೇಳೆ ಪ್ರಶ್ನೆ ಮಧ್ಯಪ್ರವೇಶ ಮಾಡಿದ ಪೀಠ, ‘ಸುಪ್ರೀಂ’ನ ನ್ಯಾಯಾಂಗ ನಿಂದನೆ ಕೇಸ್ನಲ್ಲಿ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟ್ ವಿಚಾರಣೆಗೆ ಬಂದಿಲ್ಲ. ಹೀಗಿರುವಾಗ ರಿಟ್ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಪ್ರಶ್ನಿಸಿದೆ. ವಿಜಯ್ ಮಲ್ಯ ಲಂಡನ್ ಕೋರ್ಟ್ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದು ಈ ವೇಳೆ ಮಲ್ಯ ಪರ ವಕೀಲರು ವಾದಿಸಿದ್ದಾರೆ.
ಇದನ್ನೂ ಓದಿ: ವಿಜಯ್ ಮಲ್ಯ ಬೇರೆ ಬೇರೆ ದೇಶಗಳಲ್ಲಿ ಹೊಂದಿರುವ ಆಸ್ತಿಗಳೇನು? ಅವುಗಳ ಮೌಲ್ಯವೆಷ್ಟು?
ಇತ್ತ ಬ್ಯಾಂಕ್ಗಳ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದು, ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಅವರು ಮುಗ್ದರಾಗಿದ್ದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆಂದು ಆರೋಪಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನ ನವೆಂಬರ್ 12ಕ್ಕೆ ಮುಂದೂಡಿದೆ.
ತಾನು ಪಾವತಿಸಬೇಕಿದ್ದ 6,200 ಕೋಟಿ ಸಾಲಕ್ಕೆ 14,000 ಕೋಟಿ ವಸೂಲಿ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವರೇ ಲೋಕಸಭೆಗೆ ತಿಳಿಸಿದ್ದು, 10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಪ್ರಕ್ರಿಯೆ ಮುಂದುವರಿಸಲಾಗಿದೆ. ಹೀಗಾಗಿ ವಸೂಲಿಯಾದ ಲೆಕ್ಕಪತ್ರವನ್ನು ಬ್ಯಾಂಕ್ಗಳು ನೀಡಬೇಕು ಎಂಬುದು ವಿಜಯ್ ಮಲ್ಯ ಆಗ್ರಹ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.