ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ 2ನೇ ಅಭ್ಯರ್ಥಿ ವಿಚಾರವಾಗಿ ನಾವು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಬೆಂಗಳೂರಿನಲ್ಲಿ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಾವು ಗೆಲ್ಲುತ್ತೇವೆ ಎಂದು 2ನೇ ಅಭ್ಯರ್ಥಿ ನಾಮಪತ್ರ ಹಾಕಿಸಿದ್ದೇವೆ. ನಮಗೂ ಬೇರೆ ಬೇರೆ ಮತ ಬರಲಿದೆ, ಹೇಗೆ ಎಂದು ಹೇಳುವುದಿಲ್ಲ. ಜೆಡಿಎಸ್ ಬೆಂಬಲಿಸುತ್ತೇವೆ ಎಂದು ನಾವೆಲ್ಲೂ ಹೇಳೇ ಇಲ್ಲವಲ್ಲ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇವೆ. ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸುವಂತೆ ಹೈಕಮಾಂಡ್ ಹೇಳಿತ್ತು. ಕಾಂಗ್ರೆಸ್ನ 2ನೇ ಅಭ್ಯರ್ಥಿ ಮನ್ಸೂರ್ ಖಾನ್ ಗೆಲ್ಲುವುದು ನಿಶ್ಚಿತ. ನಾವು ಗೆಲ್ಲುತ್ತೇವೆಂಬ ವಿಶ್ವಾಸದಿಂದಲೇ 2ನೇ ಅಭ್ಯರ್ಥಿ ಹಾಕಿದ್ದೇವೆ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ತಿಪಟೂರಿನಲ್ಲಿ ಸಚಿವ ನಾಗೇಶ್ ಮನೆಗೆ NSUI ಮುತ್ತಿಗೆ
ತಿಪಟೂರಿನಲ್ಲಿ ಸಚಿವ ನಾಗೇಶ್ ಮನೆಗೆ NSUI ಮುತ್ತಿಗೆ ವಿಚಾರವಾಗಿ ಮಾತನಾಡಿದ್ದು, ಜೂನ್ 1ರಂದು NSUI ಅಧ್ಯಕ್ಷ ಕೀರ್ತಿಗಣೇಶ್ ನೇತೃತ್ವದಲ್ಲಿ ಶಿಕ್ಷಣ ಸಚಿವ ನಾಗೇಶ್ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವುದು ಸಾಂವಿಧಾನಿಕ ಹಕ್ಕು. ವಿದ್ಯಾರ್ಥಿ ಸಂಘಟನೆಯವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆರ್ಎಸ್ಎಸ್ನವರು ಈ ಹಿಂದೆ ಚಡ್ಡಿ ಹಾಕಿಕೊಳ್ಳುತ್ತಿದ್ದರು. ಪ್ರತಿಭಟನೆ ಅಂಗವಾಗಿ ಒಂದೇ ಒಂದು ಚಡ್ಡಿ ಸುಟ್ಟುಹಾಕಿದ್ದರು. ಒಂದೇ ಒಂದು ಚಡ್ಡಿ ಸುಟ್ಟಿದ್ದು ತಪ್ಪಾಗಿ ಕಂಡಿದೆ. ಮನೆ ಕಾಂಪೌಂಡ್ ಗೇಟ್ ತೆಗೆದಿತ್ತು ಒಳಗಡೆ ಹೋಗಿದ್ದಾರೆ. ಪ್ರತಿಭಟನೆ ಮಾಡುವಾಗ ಜನ ಸೇರುವುದು ತಪ್ಪಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸರು ಏನು ಮಾಡುತ್ತಿದ್ದರು. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವೇಳೆ ಕೆ.ಎಸ್. ಈಶ್ವರಪ್ಪ ಮೆರವಣಿಗೆ ಮಾಡಿದ್ದು, ಅವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ; ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಸೀಕ್ವೆಲ್ ಮಾಡೋಕೆ ರೆಡಿ ಆದ ರಕ್ಷಿತ್ ಶೆಟ್ಟಿ; ನಿರ್ದೇಶನ ಯಾರದ್ದು?
ಗೃಹಸಚಿವ ಆರಗ ಜ್ಞಾನೇಂದ್ರ ಯಾವ ಕ್ರಮಕೈಗೊಂಡಿದ್ದೀಯಪ್ಪಾ? ಪಠ್ಯ ಕೇಸರೀಕರಣ ವಿರೋಧಿಸಿ ಎನ್ಎಸ್ಯುಐ ಪ್ರತಿಭಟನೆ ಮಾಡಿದ್ದರು. ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಜಾಗೆ ಆಗ್ರಹಿಸಲಾಗಿದೆ. ಪಠ್ಯದಿಂದ ನಮ್ಮ ಪಾಠ ಕೈಬಿಡುವಂತೆ ಒತ್ತಾಯಿಸಿ ಸಾಹಿತಿಗಳ ಪ್ರತಿಭಟನೆ ಮಾಡಿದ್ದು, ಸಾಹಿತಿಗಳ ಪ್ರತಿಭಟನೆಗೆ ರಾಜ್ಯ ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ. ಜೂನ್ 1ರಂದು ಪ್ರತಿಭಟನೆ ಮಾಡಿದ್ದ NSUI ವಿರುದ್ಧ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿ ಎಫ್ಐಆರ್ ಹಾಕಿಸಿ, ಜೈಲಿಗೆ ಕಳುಹಿಸಿದ್ದಾರೆ. ಪ್ರತಿಭಟನೆ ಮಾಡಿದ್ದ ವಿದ್ಯಾರ್ಥಿಗಳ ಮೇಲೆ ರೋಹಿತ್, ಮಂಜು ಹಲ್ಲೆ ಮಾಡಿದ್ದವರ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ. ತುಮಕೂರು ಎಸ್ಪಿ ಜತೆ ಮಾತನಾಡಿದ್ದೇನೆ, ಕ್ರಮಕ್ಕೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದರು.
ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ. ರಾಜ್ಯ ಸರ್ಕಾರ, ಗೃಹಸಚಿವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಯತ್ನಿಸಿದ್ರೆ ಬೀದಿಗೆ ಇಳಿಯಬೇಕಾಗುತ್ತೆ. ಪ್ರಜಾಪ್ರಭುತ್ವ, ಸಂವಿಧಾನ ನಾಶಮಾಡಲು ಯತ್ನಿಸಿದರೆ ಕೆಟ್ಟ ಹೆಸರು. ರಾಜ್ಯ ಸರ್ಕಾರಕ್ಕೆ ಈಗಾಗಲೇ ಕೆಟ್ಟ ಹೆಸರು ಬಂದಿದೆ, ಶಾಪ ಹಾಕುತ್ತಿದ್ದಾರೆ. ಈ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಎಂದು ಜನ ಕಾಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:40 pm, Fri, 3 June 22