ಬೆಂಗಳೂರು: ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಏರಿಕೆ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಬೆಂಗಳೂರು ವಿವಿ ಆದೇಶ ಹೊರಡಿಸಿದೆ. ಮಾಸ್ಕ್ ಜತೆ ಬೂಸ್ಟರ್ ಡೋಸ್ ಪಡೆಯುವಂತೆ ಸೂಚಿಸಿದೆ.
ಮಾಸ್ಕ್ ಧರಿಸುವಂತೆ ಜನರು ಹಾಗೂ ವ್ಯಾಪಾರಿಗಳಿಗೆ ಜಾಗೃತಿ
ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗುವ ಭೀತಿ ಹಿನ್ನೆಲೆ ಮಾಸ್ಕ್ ಧರಿಸುವಂತೆ ಜನರು ಹಾಗೂ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ ಬಿಬಿಎಂಪಿ ಮಾರ್ಷಲ್ಗಳು ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯದ ಬಗ್ಗೆ ನಿರ್ಧಾರ
ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ. ನಿನ್ನೆ ಸಭೆಯಲ್ಲಿ ಮಾಸ್ಕ್ ಧರಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯದ ಬಗ್ಗೆ ನಿರ್ಧಾರ ಮಾಡುತ್ತೇವೆ. ಪ್ರಧಾನಿಗಳೇ ನಿನ್ನೆ ಮಾಸ್ಕ್ ಧರಿಸಿಕೊಂಡಿದ್ದರು. ಮಾಸ್ಕ್ ಧರಿಸಿ ಮೋದಿ ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಿದರೆ ಒಳ್ಳೆಯದು. ಅಗತ್ಯ ಬಿದ್ದರೆ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸುತ್ತೇವೆ ಎಂದರು.
ಇದನ್ನೂ ಓದಿ: Nasal Covid Vaccine: ಮೂಗಿನ ಮೂಲಕ ಹಾಕುವ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ
ಆರೋಗ್ಯ ಸಚಿವರ ಸಭೆ ಬೆನ್ನಲ್ಲೇ ಬಿಬಿಎಂಪಿ ಮೀಟಿಂಗ್ ನಡೆಸಲು ಮುಂದಾಗಿದೆ. ಪಾಲಿಕೆ ವತಿಯಿಂದ ಸರಣಿ ವರ್ಚುವಲ್ ಸಭೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದು ಮಧ್ಯಾಹ್ನ ಹೋಟೆಲ್ ಅಸೋಸಿಯೇಷನ್ , ಪಬ್ ಅಂಡ್ ಕ್ಲಬ್ , ಬಾರ್ ಅಸೋಸಿಯೇಷನ್, ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳ ಜತೆ ಸಭೆ ನಡೆಯಲಿದೆ. ಸಭೆಯಲ್ಲಿ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಸೆಲಬ್ರೇಶನ್ ಹೇಗಿರಬೇಕು ? ಸುರಕ್ಷತೆ ಕ್ರಮಗಳೇನು ಎಂದು ಚರ್ಚಿಸಲಾಗುತ್ತೆ. ಬಿಬಿಎಂಪಿ ಮುಖ್ಯ ಆಯುಕ್ತ , ಆರೋಗ್ಯ ವಿಭಾಗದ ವಿಶೇಷ ಆಯುಕ್ತ , ಮುಖ್ಯ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಜಿಲ್ಲೆ ಜಿಲ್ಲೆಗಳಲ್ಲಿ ಕೊರೊನಾ ಅಲರ್ಟ್
ಮತ್ತೆ ಕರೋನ ಹಾವಳಿ ಹಿನ್ನೆಲೆ ಗದಗ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ಕೈಗೊಳ್ಳುತ್ತಿದೆ. ಗದಗದಲ್ಲಿ ಮದುವೆ, ಕಾರ್ಯಕ್ರಮ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಈ ಬಗ್ಗೆ ಟಿವಿ9ಗೆ ಗದಗ ಡಿಎಚ್ಓ ಡಾ. ಜಗದೀಶ್ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:59 am, Fri, 23 December 22