ಕಾರಂಜಾ ಡ್ಯಾಂನಿಂದ ಕಾಲುವೆಗೆ ಪರೀಕ್ಷಾರ್ಥ ನೀರು: ಹೊಲಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ಹಾನಿ

|

Updated on: Jan 05, 2021 | 1:43 PM

ಜಿಲ್ಲೆಯ ಕಾರಂಜಾ ಡ್ಯಾಂನಿಂದ ಪರೀಕ್ಷೆಗೆಂದು ಕಾಲುವೆಗೆ ನೀರು ಬಿಡಲಾಗಿದ್ದು, ಕಾಲುವೆ ನೀರು ರೈತರ ಹೊಲಗಳಿಗೆ ನುಗ್ಗಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ತೊಗರಿ, ಜೋಳ, ಕಡಲೆ ಬೆಳೆಯಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ.

ಕಾರಂಜಾ ಡ್ಯಾಂನಿಂದ ಕಾಲುವೆಗೆ ಪರೀಕ್ಷಾರ್ಥ ನೀರು: ಹೊಲಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ಹಾನಿ
ಕಾರಂಜಾ ಅಣೆಕಟ್ಟು
Follow us on

ಬೀದರ್: ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯದ ಹಿನ್ನೀರು ಈಗಾಗಲೇ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ಆಹುತಿ ಪಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದರ ಬೆನ್ನಲೇ, ಈಗ ಕಾರಂಜಾ ಡ್ಯಾಂನಿಂದ ಪರೀಕ್ಷೆಗೆಂದು ಕಾಲುವೆಗೆ ನೀರು ಬಿಡಲಾಗಿದೆ. ಇದೇ ಕಾಲುವೆ ನೀರು ರೈತರ ಹೊಲಗಳಿಗೆ ನುಗ್ಗಿದ್ದು ನೂರಾರು ಎಕರೆಯಲ್ಲಿ ಬೆಳೆದಿರುವ ತೊಗರಿ, ಜೋಳ, ಕಡಲೆ ಬೆಳೆಯಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ.

ಅತಿವೃಷ್ಟಿಯಿಂದ ರೈತರು ಕುಗ್ಗಿದ್ದಾರೆ:

ಮೊದಲೇ ಅತಿವೃಷ್ಟಿಯಿಂದಾಗಿ ರೈತರು ತಾವು ಬೆಳೆದ ಉದ್ದು, ಸೋಯಾ, ಹೆಸರು ಬೇಳೆಗಳನ್ನು ಕಳೆದುಕೊಂಡಿದ್ದಾರೆ. ಇದರ ನಡುವೆ ಈಗ ಕಾರಂಜಾ ಡ್ಯಾಂನಿಂದ ಕಾಲುವೆಗೆ ಬಿಟ್ಟಿರುವ ನೀರಿನಿಂದಾಗಿ ಚಳಿಗಾಲದ ಬೆಳೆಯೂ ಕೂಡಾ ಹಾಳಾಗಿದ್ದು, ಈ ನಷ್ಟವನ್ನು ಭರಿಸುವವರಾರು ಎಂದು ಇಲ್ಲಿನ ರೈತರು ಪ್ರಶ್ನೆ ಮಾಡುತ್ತಿದ್ದಾರೆ. ಭಾಲ್ಕಿ ತಾಲೂಕಿನ ಮುರಾಳ, ಬೀರಿ, ವಸಳಸಂಗ, ಕೆರೂರು, ಕೂಡ್ಲಿ, ನಾಗರಾಳ ಗ್ರಾಮದ ಸರಿ ಸುಮಾರು ನೂರು ಎಕರೆಯಷ್ಟು ಜಮೀನಿನಲ್ಲಿ ನೀರು ನಿಂತಿದೆ. ಇದು ರೈತರನ್ನು ಕಂಗೆಡುವಂತೆ ಮಾಡಿದ್ದು, ಬೆಳೆ ಹಾನಿಗೆ ಪರಿಹಾರ ಕೊಡಿ ಎಂದು ರೈತರು ಮನವಿ ಮಾಡುತ್ತಿದ್ದಾರೆ.

1969ರಲ್ಲಿ ಆರಂಭವಾಗಿದ್ದ ಕಾರಂಜಾ ಯೋಜನೆ:

1969 ಕಾಮಗಾರಿಗಳ ಮುಕ್ತಾಯದ ನಂತರ 1972ರಲ್ಲಿ ಎಲ್ಲಾ ಕಾಲುವೆ ಮೂಲಕ ರೈತರಿಗೆ ನೀರು ಬೀಡಬೇಕಾಗಿತ್ತು. ಮಳೆಯ ಕೊರೆತೆಯಿಂದ ಕಾಲುವೆಗೆ ನೀರು ಹರಿಸದ ಕಾರಣ ಎಲ್ಲಾ ಕಾಲುವೆಗಳು ಹಾಳಾಗಿದ್ದವು.  2016ರಲ್ಲಿ ಸಚಿವ ಈಶ್ವರ ಖಂಡ್ರೆ  ಅಂದಿನ ಸಿಎಂ ಸಿದ್ದರಾಮಯ್ಯನವರ ಮೇಲೆ ನಿರಂತರ ಒತ್ತಡ ತಂದು ಕಾಲುವೆ ಆಧುನೀಕರಣಕ್ಕಾಗಿ 500 ಕೋಟಿ ರೂಪಾಯಿ ಅನುದಾನ ಮಂಜೂರಾತಿ ಮಾಡಿಸಿದ್ದರು. ಇದರ ಪರಿಣಾಮ ಇದೀಗ 131 ಕಿ.ಮೀ. ಬಲದಂಡೆ ಮತ್ತು 31 ಕಿ.ಮೀ. ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈಗ ಕಾಲುವೆಯಲ್ಲಿ ನೀರು ಬಿಟ್ಟು ಪರೀಕ್ಷೆ ಸಹ ಮಾಡಲಾಗುತ್ತಿದೆ.

ಬಲದಂಡೆ ಕಾಲುವೆಯಲ್ಲಿ ನೀರು:

ಬಲದಂಡೆ ಕಾಲುವೆಯಲ್ಲಿ ನೀರು ಬಿಟ್ಟಿರುವ ಪರಿಣಾಮ ನೀರು ಕೊನೆಯ ಅಂಚಿನವರೆಗೂ ತಲುಪಿದೆ. ಆದರೆ ದೊಡ್ಡ ಕಾಲುವೆಯಿಂದ ಸಣ್ಣ ಸಣ್ಣ ಕಾಲುವೆಗೆ ನೀರು ಬಿಡಲಾಗುತ್ತಿದ್ದು, ಈ ಕಾಲುವೆಗಳನ್ನು ದುರಸ್ಥಿ ಮಾಡಿಲ್ಲ. ಹೀಗಾಗಿ ಕಾಲುವೆಯ ನೀರು ಬೇಕಾಬಿಟ್ಟಿಯಾಗಿ ಹೊಲಗಳಿಗೆ ನುಗ್ಗುತ್ತಿದೆ. ಇದರ ಪರಿಣಾಮವಾಗಿ ಹೊಲಗಳಲ್ಲಿ ನೀರು ನಿಂತುಕೊಂಡು ಬೆಳೆ ಹಾನಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಕಟಾವಿಗೆ ಬಂದಿರುವ ಕಬ್ಬು ಕೂಡಾ ಸಾಗಿಸಲಾಗದೆ ರೈತರಿಗೆ ತೊಂದರೆಯಾಗಿದೆ. ನಮ್ಮ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲ ಎಂಬುದು ರೈತರ ಅಳಲು ತೋಡಿಕೊಂಡಿದ್ದಾರೆ.

ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರಿಂದ ಮನವಿ:
ಈ ವಿಚಾರದ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ನಾವು ಕಾಲುವೆಗೆ ನೀರು ಹರಿಸುತ್ತಿದ್ದೇವೆ. ನೀರು ಹೊಲಕ್ಕೆ ನುಗ್ಗಿದರೆ ಗುತ್ತಿಗೆದಾರನಿಗೆ ಸರಿ ಮಾಡಲು ಹೇಳುತ್ತೇವೆಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ಹೇಳಿದ್ದಾರೆ.

ಕಾರಂಜಾ ಡ್ಯಾಂ ಭರ್ತಿ; ಕಟಾವಿಗೆ ಬಂದ ಕಬ್ಬು ಸಾಗಿಸಲಾಗದೆ ಪರದಾಟ: ರೈತರ ಗೋಳು ಕೇಳೋರು ಯಾರು?

Published On - 1:33 pm, Tue, 5 January 21