
ಬೀದರ್ ಜಿಲ್ಲೆಯಲ್ಲಿ ಬಟರ್ ಫ್ರೂಟ್ ಬೆಳೆದು ಮಾದರಿ ಎನಿಸಿಕೊಂಡ ರೈತ... ಮಲೆನಾಡಿನಲ್ಲಿ ಬೆಳೆಯುವ ಬೆಣ್ಣೆ ಹಣ್ಣು ಬರದ ನಾಡು ಬೀದರ್ ಜಿಲ್ಲೆಯಲ್ಲಿ ಬೆಳೆದ ರೈತ... ಕಲ್ಲಂಗಡಿ, ಪಪ್ಪಾಯಿ ಬೆಳೆಸಿ ನಷ್ಟ ಅನುಭವಿಸಿದ ರೈತನಿಂದ ಮೊದಲ ಪ್ರಯೋಗದಲ್ಲಿಯೇ ಯಶಸ್ಸು ಕಂಡ ರೈತ... ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ.

ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್ ಫ್ರೂಟ್ನ್ನು ಬೆಳೆಯಲಾಗುತ್ತದೆ. ಪಿಯರ್ ಹಣ್ಣಿನ ಆಕಾರದಲ್ಲಿರುವ ಈ ಹಣ್ಣು ಮೆಕ್ಸಿಕೊ ದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಹಣ್ಣನ್ನು ಈಗ ಗಡಿ ಜಿಲ್ಲೆ, ಬಯಲುಸೀಮೆ ಬೀದರ್ ನಲ್ಲಿಯೂ ಬೆಳೆಯಲು ಆರಂಭಿಸಿದ್ದಾರೆ.

ಹೌದು ಎರಡು ರಾಜ್ಯದ ಗಡಿಯನ್ನ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಮಾವು, ಟೊಮೆಟೋ ಹಣ್ಣು ಸೇರಿದಂತೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದರಲ್ಲಿ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆದ್ರೆ ಇತ್ತೀಚೆಗೆ ಇಲ್ಲಿನ ರೈತರು ಇವುಗಳ ಹೊರತಾಗಿ ವಿದೇಶಿ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

ಇದೀಗ ಮಲೆನಾಡು ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಬಟರ್ ಫ್ರೂಟ್ ಕೃಷಿ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಅಲ್ಲೂರು ಗ್ರಾಮದ ಡಾ. ನಾಗೇಂದ್ರಪ್ಪ ಬಿರಾದಾರ್ ಅವರು ತಮ್ಮ ಐದು ಎಕರೆಯಷ್ಟು ಜಮೀನಿನಲ್ಲಿ ಡಿಫರೆಂಟ್ ಬೆಳೆಯಾದ ಬಟರ್ ಫ್ರೂಟ್ ಅನ್ನು ಬೆಳೆದು ಇತರ ರೈತರಿಗೂ ಮಾದರಿಯಾಗಿದ್ದಾರೆ.

ಕೊರೊನಾ ಬಂದ ಸಮಯದಲ್ಲಿ ತಮ್ಮ ಐದು ಎಕರೆ ಪ್ರದೇಶದಲ್ಲಿ 550 ಬಟರ್ ಫ್ರೂಟ್ ಹಣ್ಣಿನ ಗಿಡಗಳನ್ನ ನಾಟಿ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ವೈಜ್ಞಾನಿಕ ಹಾಗೂ ಸಾವಯವ ರೀತಿಯಲ್ಲಿ ಗಿಡಗಳನ್ನ ಆರೈಕೆ ಮಾಡ್ತಿದ್ದಾರೆ. ಸದ್ಯ ಈಗ ಗಿಡಗಳಲ್ಲಿ ಫಸಲು ಬಿಡಲು ಆರಂಭವಾಗಿದ್ದು ಉತ್ತಮ ಲಾಭವೂ ಸಿಗುತ್ತಿದೆಂದು ರೈತ ಹೇಳುತ್ತಿದ್ದಾರೆ.

ಬೀದರ್ ಜಿಲ್ಲೆಗೆ ಅವಕಾಡೊ ಹಣ್ಣಿನ ಗಿಡಗಳು ಹೊಸ ಬೆಳೆಯಾಗಿದ್ದು, ಸ್ಥಳೀಯ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಪ್ರೋತ್ಸಾಹದಿಂದ ಕೇರಳ ರಾಜ್ಯದಿಂದ ಕಸಿ ಮಾಡಿರುವ ಅವಕಾಡೊ ತಳಿಯ ಗಿಡಗಳನ್ನ ತಂದು ಬೆಳೆಯಲಾಗಿದೆ. ಗಿಡಗಳನ್ನ ಆರೈಕೆ ಮಾಡುವ ವಿಧಾನದ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳೇ ತರಬೇತಿಯನ್ನ ನೀಡಿದ್ದು, ಅಧಿಕಾರಿಗಳ ಮಾರ್ಗದರ್ಶನದಿಂದ ಡಾ. ನಾಗೇಂದ್ರಪ್ಪ ಬಿರಾದಾರ್ ಅವರು ಯಶಸ್ವಿಯಾಗಿ ಗಿಡಗಳನ್ನ ಬೆಳೆಸಿದ್ದಾರೆ.

ಬೆಣ್ಣೆ ಹಣ್ಣು ಪೌಷ್ಠಿಕ ಆಹಾರ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಈಗ ಇವರು ಗಿಡಗಳನ್ನ ನಾಟಿ ಮಾಡಿ ಎರಡೂವರೆ ವರ್ಷವಾಗಿದೆ. ನಾಟಿ ಮಾಡಿದ ಎರಡನೇ ವರ್ಷದಿಂದ ಹಣ್ಣು ಬಿಡಲು ಆರಂಭವಾಗುತ್ತದೆ. ಆದರೆ ಐದು ವರ್ಷದ ಗಿಡವಾದಾಗ ವರ್ಷಕ್ಕೆ ಎರಡು ಸಲ ಕಾಯಿ ಬಿಡುತ್ತದೆ. ಒಂದು ಗಿಡಕ್ಕೆ ಸರಿ ಸುಮಾರು 10-15 ಕೆಜಿಯಷ್ಟು ಹಣ್ಣು ಕೊಡುತ್ತದೆ. ಒಂದು ಕೆಜಿಗೆ 100 ರೂಪಾಯಿಯಂತೆ ಮಾರಾಟವಾದರೂ ಕೂಡಾ ಎಕರೆಗೆ 5-10 ಲಕ್ಷ ರೂಪಾಯಿ ಆದಾಯ ಬರುತ್ತದೆಂದು ರೈತ ಡಾ. ನಾಗೇಂದ್ರಪ್ಪ ಬಿರಾದಾರ್ ಹೇಳುತ್ತಾರೆ.

ಇನ್ನು ಬೀದರ್ ಜಿಲ್ಲೆಯಲ್ಲಿ ಸುಮಾರು 60 ಎಕರೆಗೂ ಅಧಿಕ ಬಟರ್ ಫ್ರೂಟ್ ಹಣ್ಣಿನ ಗಿಡಗಳನ್ನ ನಾಟಿ ಮಾಡಿದ್ದು ಒಂದೆರಡು ವರ್ಷದಲ್ಲಿ ಇಳುವರಿ ಕೊಡಲು ಆರಂಭವಾಗುತ್ತದೆ. ಇದನ್ನ ನೋಡಿಕೊಂಡು ಇನ್ನೂ ಹೆಚ್ಚು ಹೆಚ್ಚು ರೈತರು ಅವಕಾಡೋ ಹಣ್ಣನ್ನ ಬೆಳೆಯುವ ಸಾಧ್ಯತೆಯಿದೆ ಎಂದು ರೈತರು ಹೇಳುತ್ತಾರೆ.

ಈ ಹಣ್ಣು ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಲಾಭವು ಕೂಡಾ ಇದೆ. ರೈತರು ಈ ಹಣ್ಣನ್ನ ಬೆಳೆಸಿ ಲಾಭ ಗಳಿಸಬಹುದು ಎಂದು ರೈತ ಡಾ. ನಾಗೇಂದ್ರಪ್ಪ ಬಿರಾದಾರ್ ಹೇಳುತ್ತಿದ್ದಾರೆ.

ಐದು ಎಕರೆ ಜಮೀನಿನಲ್ಲಿ ಬೆಳೆದಿರುವ ಅವಕಾಡೆ ಹಣ್ಣನ್ನ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದೊಂದು ದಶಕದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.

ಕಳೆದೊಂದು ದಶಕದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.