ಬೀದರ್: ಜಿಲ್ಲೆಯ ಭಾಲ್ಕಿ ನಗರ ಪೊಲೀಸ್ ಠಾಣೆ ಸಿಪಿಐ ಲಂಚ ಪಡೆಯುವ ವಿಡಿಯೋ ವೈರಲ್ ಆಗಿದೆ. ಸಿಪಿಐ P.R.ರಾಘವೇಂದ್ರ ವಿರುದ್ಧ ಲಂಚ ಸ್ವೀಕಾರ ಆರೋಪ ಕೇಳಿ ಬಂದಿದ್ದು ಲಂಚ ಪಡೆಯುವ ವಿಡಿಯೋ ವೈರಲ್ ಆಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಸಿಪಿಐ P.R.ರಾಘವೇಂದ್ರ ಪೊಲೀಸ್ ಸಮವಸ್ತ್ರದಲ್ಲಿ ವ್ಯಕ್ತಿಯಿಂದ ಲಂಚ ಪಡೆದಿದ್ದಾರೆ. ಈ ಲಂಚದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಪಿಐ ರಾಘವೇಂದ್ರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಭಾಲ್ಕಿ ನಗರಕ್ಕೆ ಸಿಪಿಐಯಾಗಿ P.R.ರಾಘವೇಂದ್ರ ವರ್ಗಾವಣೆಯಾಗಿದ್ದರು. ಸಣ್ಣಪುಟ್ಟ ವಿಷಯಕ್ಕೆ ಸಾರ್ವಜನಿಕರಿಗೆ ಕಿರುಕುಳು ಕೊಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ.
ಪಿಎಸ್ಐ ಧಮ್ಕಿಗೆ ನೊಂದು ಮೂವರು ಆತ್ಮಹತ್ಯೆ ಯತ್ನ
ಇನ್ನು ಮತ್ತೊಂದು ಕಡೆ ದೂರು ತೆಗೆದುಕೊಳ್ಳದೇ ಪ್ರತಿ ದೂರು ದಾಖಲಿಸಿಕೊಂಡು ಬಂಧಿಸುವುದಾಗಿ ಪಿಎಸ್ಐ ಧಮ್ಕಿ ನೀಡಿರುವ ಘಟನೆ ನಡೆದಿದೆ. ಹೀಗಾಗಿ ಮನನೊಂದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯನ ಕುಟಂಬ ಆತ್ಮಹತ್ಯೆಗೆ ಯತ್ನಿಸಿದೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ವಿಷ ಬಾಟಲಿ ಮುಂದಿಟ್ಟು ವಿಡಿಯೋ ಮಾಡಿ ಒಂದೇ ಮನೆಯ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುಡಗೇರಿ ಪೊಲೀಸ್ ಠಾಣೆ ಪಿಎಸ್ಐ ಸವಿತಾ ಮುನ್ನಳ್ಳಿ ಮೇಲೆ ಆರೋಪ ಕೇಳಿ ಬಂದಿದ್ದು ಗ್ರಾ.ಪಂ. ಮಾಜಿ ಸದಸ್ಯ ಸಿದ್ಧಪ್ಪ ಕಳಸಣ್ಣನವರ, ಪುತ್ರ ಬಸವರಾಜ ಕಳಸಣ್ಣನವರ ಹಾಗೂ ಯಲ್ಲಪ್ಪ ಕಳಸಣ್ಣನವರ ಆತ್ಮಹತ್ಯಗೆ ಯತ್ನಿಸಿದ್ದಾರೆ. ಸದ್ಯ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೂವರ ಸ್ಥಿತಿಯೂ ಸ್ವಲ್ಪ ಗಂಭೀರವಾಗಿದೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದ್ದ ಅವ್ಯವಹಾರ ಸಂಬಂಧ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗನಗೌಡ ಕೋಟಿಗೌಡರ ವಿರುದ್ಧ ಸಿದ್ಧಪ್ಪ ದೂರು ನೀಡಿದ್ದರು. ಸಿದ್ಧಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಗನಗೌಡಗೆ ನೋಟೀಸ್ ಗಳು ಬರ್ತಿದ್ದವು. ಈ ವಿಚಾರವಾಗಿ ನಾಗನಗೌಡ ಹಾಗೂ ಸಿದ್ಧಪ್ಪ ಗುಂಪಿನ ನಡುವೆ ಪರಸ್ಪರ ಹಲ್ಲೆ ಪ್ರಕರಣ ನಡೆದಿತ್ತು. ಸಿದ್ಧಪ್ಪ ದೂರು ನೀಡೋಕೆ ನಾಲ್ಕು ದಿನ ಸುತ್ತಿದರೂ ಪಿಎಸ್ಐ ಪ್ರಕರಣ ದಾಖಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬದಲಿಗೆ ನಾಗನಗೌಡ ನೀಡಿದ ದೂರನ್ನು ದಾಖಲಿಸಿಕೊಂಡು ಸಿದ್ಧಪ್ಪ ಹಾಗೂ ಇಬ್ಬರು ಪುತ್ರರನ್ನು ಬಂಧಿಸೋದಾಗಿ ಪಿಎಸ್ಐ ಎಚ್ಚರಿಕೆ ನೀಡಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಭ್ರಷ್ಟಾಚಾರದ ಕುರಿತು ದೂರು ನೀಡಿದ್ರೂ ಜಿ.ಪಂ. ಸಿಇಒ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಭ್ರಷ್ಟಾಚಾರ ಆರೋಪ ಮಾಡಿದ ನನ್ನನ್ನೇ ಬಂಧಿಸೋಕೆ ಪೊಲೀಸರು ಮುಂದಾಗಿದ್ದಾರೆ. ಸತ್ಯಕ್ಕೆ ಕಾಲವಿಲ್ಲ ಎಂದು ಹೇಳಿ ವಿಷ ತೆಗೆದುಕೊಳ್ಳೋದಾಗಿ ವಿಡಿಯೋದಲ್ಲಿ ಸಿದ್ಧಪ್ಪ ತಿಳಿಸಿದ್ದಾರೆ. ನಂತರ ಸಿದ್ಧಪ್ಪ, ಇಬ್ಬರು ಪುತ್ರರು ವಿಷ ಸೇವಿಸಿದ್ದಾರೆ.
ಇದನ್ನೂ ಓದಿ: ಸಿಸಿಟಿವಿಯಲ್ಲಿ ದಾಖಲು: ಮನೆಯಲ್ಲಿ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಸಿಬಿ ದಾಳಿ, ಆನೇಕಲ್ ಪುರಸಭೆ ಅಧಿಕಾರಿ ಸೇರಿ ಮೂವರ ಸೆರೆ