ಬೀದರ್: ಆರ್​​ಎಸ್​​ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ನೋಟಿಸ್!

ರಾಜ್ಯ ಸರ್ಕಾರ ಪರೋಕ್ಷವಾಗಿ RSSಗೆ ಅಂಕುಶ ಹಾಕೋದಕ್ಕೆ ಮುಂದಾಗಿತ್ತು. ಆದರೆ ಧಾರವಾಡ ಹೈಕೋರ್ಟ್ ಪೀಠ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇನ್ನು ಪಥಸಂಚಲನದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರಿಗೆ ನೋಟಿಸ್​ ಜಾರಿ ಮಾಡಲಾಗುತ್ತಿದೆ. ಇದೀಗ ಬೀದರ್​ ಜಿಲ್ಲೆಯ ಔರಾದ್​ ತಾಲೂಕಿನ ನಾಲ್ವರು ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.​

ಬೀದರ್: ಆರ್​​ಎಸ್​​ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ನೋಟಿಸ್!
ಶಿಕ್ಷಕರಿಗೆ ನೋಟಿಸ್​

Updated on: Oct 29, 2025 | 6:05 PM

ಬೀದರ್, ಅಕ್ಟೋಬರ್​ 29: ಆರ್​​ಎಸ್​​ಎಸ್​​ಗೆ (RSS) ಪರೋಕ್ಷವಾಗಿ ಅಂಕುಶ ಹಾಕಹೊರಟಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​​ನಲ್ಲಿ ಭಾರಿ ಹಿನ್ನಡೆಯಾಗಿದೆ. ಹೀಗಿರುವಾಗ ಆರ್​​ಎಸ್​​ಎಸ್​ ಪಥಸಂಚಲನದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಔರಾದ್​ ತಾಲೂಕಿನ ನಾಲ್ವರು ಶಿಕ್ಷಕರಿಗೆ (Teachers) ನೋಟಿಸ್ ನೀಡಲಾಗಿದೆ. ಕಾರಣ ಕೇಳಿ ನಾಲ್ವರಿಗೆ ಔರಾದ್ ಬಿಇಓ ಅವರಿಂದ ನೋಟಿಸ್​ ಜಾರಿ ಮಾಡಲಾಗಿದೆ.

ಶಿಕ್ಷಕರ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಮುಖಂಡರ ಆಗ್ರಹ

ಅ. 7, 13ರಂದು ಔರಾದ್​ನಲ್ಲಿ ಆರ್​​ಎಸ್​​ಎಸ್​​ ಪಥಸಂಚಲನ ನಡೆದಿತ್ತು. ಶಿಕ್ಷಕರಾದ ಮಹದೇವ​, ಶಾಲಿವಾನ್​, ಪ್ರಕಾಶ್ ಮತ್ತು ಸತೀಶ್​​ ಭಾಗವಹಿಸಿದ್ದರು. ಈ ಬಗ್ಗೆ ಅಕ್ಟೋಬರ 27 ರಂದು ದಲಿತ ಸೇನೆಯ ಮುಖಂಡರು ಬಿಇಒಗೆ ದೂರು ನೀಡಿದ್ದರು. ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ದೂರು ಸಲಿಸಿದ ಮರುದಿನ ಅಂದರೆ ಮಂಗಳವಾರ ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್​​ನಲ್ಲಿ ಏನಿದೆ?

ಬೀದರ ಜಿಲ್ಲೆಯ ಔರಾದ ಬಿ ತಾಲೂಕಿನಲ್ಲಿ ಅಕ್ಟೋಬರ್​ 7 ಮತ್ತು 13 ರಂದು ನಡೆದ ಆರ್​​ಎಸ್​​​ಎಸ್​ ಪಥಸಂಚಲನದಲ್ಲಿ ತಾವುಗಳು ಭಾಗಿಯಾಗಿರುತ್ತಿರಿ. ಈ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿರುವ ದೃಶ್ಯಗಳು ಕಂಡು ಬಂದಿರುತ್ತವೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಪತ್ರ ಬೆನ್ನಲ್ಲೇ ಸಿಎಂ ಮಹತ್ವದ ಸೂಚನೆ: RSS ಚಟುವಟಿಕೆಗಳಿಗೆ ಬೀಳುತ್ತಾ ಬ್ರೇಕ್?

ತಾವುಗಳು ಸರಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವುಗಳು ಆರ್​​ಎಸ್​​​ಎಸ್​ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ದವಾಗಿ ಕರ್ತವ್ಯ ಮಾಡಿರುವಿರಿ. ಈ ಪ್ರಯುಕ್ತ ತಾವುಗಳು ಈ ನೋಟಿಸ್ ತಲುಪಿದ ಬಳಿಕ ಕಾರಣ ಕೇಳುವ ನೋಟಿಸ್‌ಗೆ ಲಿಖಿತ ಹೇಳಿಕೆಯನ್ನು ನೀಡಿ ಖುದ್ದಾಗಿ ಬಂದು ಈ ಕಛೇರಿಗೆ ಸಲ್ಲಿಸುವುದು. ಇಲ್ಲವಾದಲ್ಲಿ ಏಕಪಕ್ಷಿಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ. ನಿಯಂಕ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುದೆಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:04 pm, Wed, 29 October 25