ಅತಿವೃಷ್ಟಿ-ಅನಾವೃಷ್ಠಿಗೆ ಆ ಬೆಳೆ ರೈತನ ಆದಾಯಕ್ಕೆ ಹೊಡೆತಕೊಡೋದಿಲ್ಲ. ಒಂದು ಸಲ ನಾಟಿ ಮಾಡಿದರೆ, ಮತ್ತೆ ಖರ್ಚಿಲ್ಲ, ರೈತನಿಗೆ ಶ್ರಮವೂ ಕಡಿಮೆ. ಇನ್ನು ಕಬ್ಬು, ಪಪ್ಪಾಯಿ, ಬಾಳೆ ಬೆಳೆಗೆ ಹೋಲಿಸಿದರೆ ಈ ಬೆಳೆ ಉತ್ತಮ ಆದಾಯ ಕೊಡುವ ಕೃಷಿ. ಜೀರೆನಿಯಂ (Geranium crop) ಈ ಹೆಸರು ಅದೆಷ್ಟೋ ರೈತರಿಗೆ ಗೊತ್ತಿರುವುದೇ ಇಲ್ಲಾ. ಆದರೆ ಈ ಜೀರೆನಿಯಂ ಕೃಷಿಯಿಂದ ವರ್ಷಕ್ಕೆ ಲಕ್ಷ ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಈ ಬೆಳೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ರೈತರು ಬೆಳೆಯುತ್ತಿದ್ದು ಉತ್ತಮ ಆದಾಯವನ್ನ ಗಳಿಸುತ್ತಿದ್ದಾರೆ. ಈ ಬೆಳೆ ಬೀದರ್ ಜಿಲ್ಲೆಯ ಮಹಾರಾಷ್ಟ್ರ ಗಡಿಯಲ್ಲಿರುವ ಕಮಲನಗರ ತಾಲೂಕಿಗೂ ಕಾಲಿಟ್ಟಿದ್ದು ಇದನ್ನ ಬೆಳೆಯುತ್ತಿರುವ ರೈತರು ಕೈ ತುಂಬಾ ಆದಾಯ ಗಳಿಸಿಕೊಂಡು ಸುಂದರ ಜೀವನ ಸಾಗಿಸುತ್ತಿದ್ದಾರೆ.
ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಢೊಣಗಾಂವ್ ಎಂ. ಗ್ರಾಮದ ನಿವೃತ್ತ ಪ್ರಾಚಾರ್ಯರಾದ ಸುಭಾಷ್ ಮಾಣೀಕ್ ರಾವ್ ಅವರು ಕೃಷಿಯಲ್ಲಿ ಎಂಎಸ್ಸಿ, ಪಿಎಚ್ ಡಿ ಪಡೆದಿದ್ದಾರೆ. ಇವರು ಕೃಷಿಯಲ್ಲಿ ಏನಾದರೂ ಹೊಸತನ್ನ ಬೆಳೆಯುವ ಹಂಬಲವಿದೆ. ಹೀಗಾಗಿಯೇ ರಾಜ್ಯದಲ್ಲಿಯೇ ಮೊದಲನೆಯದಾಗಿ ವಿಶಿಷ್ಟವಾದ ಜೀರೆನಿಯಂ ಕೃಷಿ ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನ ಹೇಗೆ ಗಳಿಸಬಹುದೆಂದು ಈ ರೈತ ತೋರಿಸಿಕೊಟ್ಟಿದ್ದಾನೆ. ತನ್ನ ಎರಡು ಎಕರೆ ಜಮೀನಿನಲ್ಲಿ ಜೀರೆನಿಯಂ ಕೃಷಿಯಲ್ಲಿ ತೊಡಗಿದ್ದು ಮೊದಲ ಬಾರಿಗೆ ಜೀರೆನಿಯಂ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾನೆ. ಮೂರು ವರ್ಷದಿಂದ ಇವರು ಎರಡು ಎಕರೆಯಷ್ಟು ಜಮೀನಿನಲ್ಲಿ ಜೀರೆನಿಯಂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಜಿರೇನಿಯಂ ನಾಟಿ ಮುನ್ನ ಅಧ್ಯಯನ ಮುಖ್ಯ!
ಈ ಜೀರೆನಿಯಂ ಬೆಳೆಯನ್ನ ತಮ್ಮ ಹೊಲದಲ್ಲಿ ಬೆಳೆಯಬೇಕು ಅಂತಾ ಯೋಚಿಸಿದ ಕೂಡಲೇ ಈ ಬೆಳೆಯ ಬಗ್ಗೆ ಇದನ್ನ ಬೆಳೆಯುವ ರೈತರ ಜೊತೆಗೆ ಹತ್ತಾರು ಕಡೆಗಳಲ್ಲಿ ಸಂಪರ್ಕ ಮಾಡಿ ಇದರ ಸಾಧಕ ಬಾಧಕಗಳು, ರೋಗ, ಇದಕ್ಕೆ ಬೇಕಾಗುವ ಔಷಧಿ, ಮಾರುಕಟ್ಟೆ ಹೀಗೆ ಎಲ್ಲಾ ಮಾಹಿತಿಯನ್ನ ಪಡೆದುಕೊಂಡು ಮಹಾರಾಷ್ಟ್ರದ ಅಹ್ಮದ್ ನಗರದಿಂದ ಜೀರೆನಿಯಂ ಸಸಿಗಳನ್ನ ತಂದು ತಮ್ಮ ಹೊಲದಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡುವ ಮುನ್ನ ಹೊಲವನ್ನ ಚೆನ್ನಾಗಿ ಹದ ಮಾಡಿಕೊಂಡು ಎರೆಹುಳು ಗೊಬ್ಬರವನ್ನ ಹಾಕಿ ಜೀರೆನಿಯಂ ಬೆಳೆಯ ಕಾಂಡವನ್ನ ತಂದು ಸಾಲಿನಿಂದ ಸಾಲಿಗೆ ಮುರು ಅಡಿ ಅತರ ಗಿಡದಿಂದ ಗಿಡಕ್ಕೆ ಒಂದು ಫೋಟ್ ಅಂತರ ದಲ್ಲಿ ಜೀರೆನಿಯಂ ಕಾಂಡವನ್ನ ನಾಟಿ ಮಾಡಿದ್ದಾರೆ.
ನಾಟಿ ಮಾಡಿದ ಮೂರು ತಿಂಗಳಲ್ಲಿ ಆದಾಯ ಶುರು!
ನಾಟಿ ಮಾಡಿದ ಮೂರು ತಿಂಗಳಿಗೆ ಗಿಡ ದೊಡ್ಡದಾಗುತ್ತದೆ. ಅದು ಡೊದ್ದದಾಗುತ್ತಿದ್ದಂತೆ ಅದರ ಎಲೆಗಳನ್ನ ಕಟ್ ಮಾಡಿ ಮಾರಾಟ ಮಾಡಬೇಕು. ಇದರ ಎಲೆ ಒಂದು ಟನ್ ಗೆ 12 ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಒಂದು ಸಲ ಕಟಾವು ಮಾಡಿದರೆ ಎಕರೆಗೆ 25 ಟನ್ ವರೆಗೆ ಇಳುವರಿ ಬರುತ್ತದೆ. ಒಂದು ಸಲ ಕಟಾವು ಮಾಡಿದರೆ ಎಕರೆಗೆ 3 ಲಕ್ಷ ರೂಪಾಯಿ ಆದಾಯ ಬಂದಂತಾಯಿತು. ಕಟಾವು ಮಾಡಿದ ಪ್ರತಿ ಮೂರು ತಿಂಗಳಿಗೊಮ್ಮೆ ಮರಳಿ ಇದನ್ನ ಕಟಾವು ಮಾಡಬೇಕು ಅಂದರೆ ವರ್ಷಕ್ಕೆ 4 ನಾಲ್ಕು ಸಲ ಕಟಾವು ಮಾಡಬೇಕು. ಅಲ್ಲಿಗೆ, ವರ್ಷಕ್ಕೆ 10 ರಿಂದ 15 ಲಕ್ಷ ರೂಪಾಯಿ ಅದಾಯ ಕಟ್ಟಿಟ್ಟಬುತ್ತಿ!
ಸುಂಗಧ ದ್ರವ್ಯದಲ್ಲಿ ಬಳಕೆ
ಇಷ್ಟಕ್ಕೂ ಈ ಜೀರೆನಿಯಂ ಅನ್ನು ಎಲ್ಲಿ ಬಳಸುತ್ತಾರೆ ಅಂದ್ರೆ ಸುಂಗಧ ದ್ರವ್ಯ (scent manufacturing), ಸಾಬೂನು, ಶಾಂಪು ತಯಾರಿಕೆಗೆ ಬಳಕೆ ಮಾಡುತ್ತಾರೆ. ಹಾಗಾಗಿ ಇದಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ಆದರೆ ಇದರ ಬಗ್ಗೆ ರೈತರಿಗೆ ಅಷ್ಟೊಂದು ಮಾಹಿತಿಯಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಇದನ್ನ ಬೆಳೆಯೋದಿಲ್ಲ. ಆದರೆ ಮಹಾರಾಷ್ಟ್ರದ ಉಗ್ದಿರ್ ಭಾಗದಲ್ಲಿ ಈ ಬೆಳೆಯನ್ನ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದು ಈ ಬೆಳೆಯಿಂದಲೇ ರೈತರು ಲಕ್ಷಾಧಿಪತಿಗಳಾಗುತ್ತಿದ್ದಾರೆ. ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರು ಕಡಿಮೆ ಶ್ರಮ, ಕಡಿಮೆ ಬಂಡವಾಳ, ಕಡಿಮೆ ನೀರು ಇರುವ ರೈತರು ಈ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡು ಈ ಕೃಷಿಯಲ್ಲಿ ತೊಡಗುವುದು ಉತ್ತಮ. ಏನಂತೀರಾ ರೈತ ಬಾಂಧವರೇ!?
– ಸುರೇಶ್ ನಾಯಕ್, ಟಿವಿ 9, ಬೀದರ್