ಬೀದರ್: ಚೆಂಡು ಹೂವಿಲ್ಲದೇ ದೀಪಾವಳಿ ಹಬ್ಬ ಕಳೆಗಟ್ಟುವುದೇ ಇಲ್ಲ. ಶೃಂಗಾರಕ್ಕೆ ಇದು ಬೇಕೆ ಬೇಕು. ದೀಪಗಳ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿದ್ದು, ಬೀದರ್ ಜಿಲ್ಲೆಯ ಸುತ್ತ ಮುತ್ತಲಿನ ಗ್ರಾಮಗಳ ಹೊಲದಲ್ಲಿ ಬಣ್ಣ ಬಣ್ಣದ ಹೂವುಗಳು ಜನರನ್ನು ಸೆಳೆಯುತ್ತಿದೆ. ದೀಪಾವಳಿ ಆಚರಣೆಗೆ ದಿನಗಣನೆ ಶುರುವಾಗಿದ್ದು, ಝಗಮಗಿಸುವ ಬೆಳಕಿನ ಹಬ್ಬದ ಸಡಗರಕ್ಕೆ ಚೆಂಡು ಹೂವಿನ ಚೆಲವು ಮತ್ತಷ್ಟು ಇಮ್ಮಡಿಗೊಳಿಸಲಿದೆ. ಅತಿವೃಷ್ಠಿ ನಡುವೇಯೂ ಚೆಂಡು ಹೂವಿನ ಪರಿಮಳ ಎಲ್ಲೆಡೆ ಪಸರಿಸುತ್ತಿದೆ.
ದೀಪಾವಳಿಗೆ ಅಂತಾ ಪ್ರತಿಯೊಬ್ಬ ರೈತ ತನ್ನ ಹೊಲದಲ್ಲಿ ಗುಂಟೆಯಷ್ಟಾದರೂ ಹೂವು ಬೆಳೆದು ಲಾಭದ ನಿರಿಕ್ಷೆಯಲ್ಲಿದ್ದಾರೆ. ಮಲೆನಾಡು ಅಂದರೆ ಹೂಗಳ ತವರೂರು ಎನ್ನುತ್ತಾರೆ. ಏಕೆಂದರೆ ಅಲ್ಲಿ ಹೂಗಳ ಕಲವರ ಜೋರಾಗಿರುತ್ತದೆ. ಆದರೆ ಈಗ ಗಡಿ ಜಿಲ್ಲೆ ಬೀದರ್ನಲ್ಲಿಯು ಅತಿವೃಷ್ಠಿಯ ನಡುವೆ ರೈತರು ಬಗೆಬಗೆಯ ಹೂವುಗಳನ್ನು ಬೆಳೆಸಿದ್ದು ಹೂವುಗಳ ಸುಗಂಧ ಎಲ್ಲೆಡೆ ಪಸರಿಸಿದೆ.
ದೀಪಾವಳಿ ಹಬ್ಬದಲ್ಲಿ ಅಂಗಡಿ, ಕಾರ್ಖಾನೆ, ಲಕ್ಷ್ಮೀ ಪೂಜೆ, ವಾಹನ ಅಲಂಕಾರಕ್ಕೆ ಚೆಂಡು ಹೂ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ಹಿಂದೆಯು, ಗುಲಾಬಿ, ಸೇವಂತಿಯೂ ನಾವೇನು ಕಮ್ಮಿಯಿಲ್ಲ ಎನ್ನುವಂತೆ ವಿಶೇಷ ಸ್ಥಾನದಲ್ಲಿದೆ. ಈ ಹೂವುಗಳನ್ನು ಮಾಲೆಗಳನ್ನಾಗಿ ವಾಹನ, ಅಂಗಡಿ ಮುಂಗಟ್ಟುಗಳಿಗೆ ಬಳಸುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈ ವರ್ಷ ಅತೀವೃಷ್ಟಿಯಿಂದಾಗಿ ಸಾಲ ಮಾಡಿ ಬಿತ್ತಿದ ಮಳೆಯಿಂದಾಗಿ ಬೆಳೆ ಹಾಳಾಗಿ ಸಾಲದ ಕೂಪಕ್ಕೆ ಸಿಲುಕಿದ್ದ ರೈತರಿಗೆ ಪುಷ್ಪ ಕೃಷಿ ವರದಾನವಾಗುವ ಆಸೆ ಮೂಡಿಸಿದೆ.
ಕೊಳವೆ ಬಾವಿ ಆಶ್ರಿತ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದ ಚೆಂಡು ಹೂ ಅರಳಿವೆ. ಬೆಳಕಿನ ಹಬ್ಬ ಆಚರಣೆ ಸಂದರ್ಭದಲ್ಲಿ ಅಂಗಡಿಗಳ ಅಲಂಕಾರಕ್ಕೆ ಅಗತ್ಯವಿರುವ ಚೆಂಡು ಹೂವು ಬೆಳೆಸಿದ್ದು ಲಾಭದ ನಿರಿಕ್ಷೆಯಿದೆ ಎಂದು ಚೆಂಡು ಹೂ ಬೆಳೆದ ರೈತ ಮುಕುಂದ್ ಅಹಮದಾಬಾದ್ ಹೇಳಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬರ ರೈತರು ತಮ್ಮ ಹೊಲದಲ್ಲಿ ಒಂದು ಗುಂಟೆಯಷ್ಟಾದರೂ ಚೆಂಡು ಹೂವುಗಳನ್ನು ಬೆಳೆಸಿದ್ದು, ಇಡೀ ಹೊಲವೇ ಕಲರ್ ಪುಲ್ ಆಗಿ ಕಾಣುತ್ತಿದೆ. ಸೆವಂತಿ, ಗುಲಾಬಿ ಹೂವುಗಳ ಪರಿಮಳದ ಕಂಪು ಎಲ್ಲೇಡೆಯೂ ಸೂಸುತ್ತಿವೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಪುಷ್ಪ ಬೆಳೆ ಎಂದೆ ಪರಿಗಣಿಸಲ್ಪಟ್ಟ ಚೆಂಡು ಹೂ ಅತಿವೃಷ್ಟಿಯ ಮಧ್ಯೆಯೂ ಸಮೃದ್ಧವಾಗಿ ಬೆಳೆದು ನಿಂತು ಈ ಬಾರಿಯ ದೀಪಾವಳಿಗೆ ಕಂಗೊಳಿಸುತ್ತಿದೆ. ಹೀಗಾಗಿ ಪಟ್ಟಣ ಹೊರವಲಯದ ವಿವಿಧೆಡೆ ಬೆಳೆದ ಚೆಂಡು ಹೂ ಬೆಳೆಗಾರರ ಬಳಿ ತೆರಳಿ ಎಕರೆ ಹೂ ಬೆಳೆಗೆ ಸಾವಿರಾರು ದರಕ್ಕೆ ಬೆಳೆಯನ್ನು ಗುತ್ತಿಗೆ ಪಡೆಯಲು ಮಾರಾಟಗಾರರು ಮುಗಿ ಬೀಳುತ್ತಿದ್ದಾರೆ.
ದೀಪಾವಳಿ, ದಸರಾ ಸಮಯದಲ್ಲಿ ಜಿಲ್ಲೆಯ ಶೇಕಡಾ 40 ರಷ್ಟು ರೈತರು ಬಗೆ ಬಗೆಯ ಹೂಗಳನ್ನು ತಮ್ಮ ಹೊಲದಲ್ಲಿ ಬೆಳೇಯುತ್ತಾರೆ. ಅತಿವೃಷ್ಠಿ, ಅನಾವೃಷ್ಠಿಯಿಂದ ಬಿತ್ತಿದ ಬೆಳೆ ಕೈ ಕೊಟ್ಟರೂ ಹೂವಿನ ಬೆಳೆಯಾವಾಗಲು ಕೈಕೊಟ್ಟಿಲ್ಲ. ಹೀಗಾಗಿ ಹಬ್ಬದ ಸಮಯದಲ್ಲಿ ಹೂ ಬೆಳೆದು ಹಿಂಗಾರು, ಮುಂಗಾರು ಬೆಳೆ ಹಾನಿಯಾದರೂ, ರೈತರು ಚಿಂತೆ ಮಾಡದೆ ಹೂವಿನಲ್ಲಿ ಅದರ ಲಾಭವನ್ನು ಮಾಡಿಕೊಳ್ಳುತ್ತಾರೆ. ಹೀಗಾಗಿ ಜಿಲ್ಲೆಯ ರೈತರು ಹೆಚ್ಚು ಹೂವು ಬೆಳೆಯನ್ನು ಬೆಳೆಯುತ್ತಾರೆ. ಇಲ್ಲಿನ ರೈತರು ಬೆಳೆಯುತ್ತಿರುವ ಹೂವುಗಳು ರಾಜ್ಯದಲ್ಲೇಡೆ ಅಷ್ಟೇ ಅಲ್ಲ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣಕ್ಕೂ ರವಾನೆ ಆಗುತ್ತಿರುವುದು ಇಲ್ಲಿನ ಹೂವುಗಳಿಗೆ ಭಾರೀ ಬೇಡಿಕೆ ಬಂದಿದೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ಇಂಜಿನಿಯರಿಂಗ್ ಹುದ್ದೆ ತೊರೆದು ಕೃಷಿಯತ್ತ ಮುಖ ಮಾಡಿದ ಯುವಕ; ಜರ್ಬೆರಾ ಹೂ ಬೆಳೆದು ತಿಂಗಳಿಗೆ ಲಕ್ಷ ರೂ. ಸಂಪಾದನೆ
ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್ಡೌನ್ನಿಂದ ಕಂಗಾಲು