ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್ಡೌನ್ನಿಂದ ಕಂಗಾಲು
ಚೆಂಡು ಹೂ ಉಷ್ಣಾಂಶ ಹೆಚ್ಚಿರುವ ಭಾಗದಲ್ಲಿ ಇಳುವರಿ ಬರುವುದು ಭಾರೀ ಕಡಿಮೆ. ಆದರೆ ಕಾರ್ಕಳದ 35 ಡಿಗ್ರಿ ಉಷ್ಣಾಂಶದಲ್ಲೂ ಒಳ್ಳೆಯ ಇಳುವರಿ ಪಡೆದಿದ್ದಾರೆ. ಸುಮಾರು ಒಂದುವರೆ ಎಕರೆ ಭೂಮಿಯಲ್ಲಿ ಸುಮಾರು 12 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ.
ಉಡುಪಿ: ಕರಾವಳಿ ಭಾಗದ ಕೃಷಿ ಎಂದ ಕ್ಷಣ ಕೂಡಲೇ ನೆನಪಿಗೆ ಬರುವುದು ಅಡಿಕೆ, ತೆಂಗು ಜತೆಗೆ ಭತ್ತದ ಗದ್ದೆಗಳೇ. ಆದರೆ ಬೆಳ್ಮಣ್ನ ಕೃಷಿಕರೊಬ್ಬರು ಮಲೆನಾಡು, ಬಯಲುಸೀಮೆಯಲ್ಲಿ ಹೆಚ್ಚಾಗಿ ಕಂಡುಬರುವ ಚೆಂಡು ಹೂವನ್ನು ಕರಾವಳಿಯ ಗದ್ದೆಯಲ್ಲಿ ಬೆಳೆದು ಉತ್ತಮ ಇಳುವರಿ ಪಡೆದು ಸೈ ಎನಿಸಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ಬೆಳ್ಮಣ್ ಪುನಾರು ನಿವಾಸಿ ರಘುನಾಥ್ ನಾಯಕರು ಮಂಗಗಳ ಹಾವಳಿಯಿಂದ ಭತ್ತದ ಬೆಳೆಯನ್ನು ಬೆಳೆದರೂ ಲಾಭವನ್ನು ಪಡೆಯಲು ಸಾಧ್ಯವಿಲ್ಲದ ಪರಿಣಾಮ ಈ ಭಾರಿ ಹೊಸತೇನಾದರೂ ಮಾಡಬೇಕು ಎಂದು ಯೋಚಿಸಿ ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಚೆಂಡು ಹೂವನ್ನು ಕರಾವಳಿಯ ನೆಲದಲ್ಲಿ ಬೆಳೆದು ಉತ್ತಮ ಇಳುವರಿಯನ್ನು ಪಡೆದಿದ್ದಾರೆ. ಆದರೆ ಲಾಕ್ಡೌನ್ ಮತ್ತು ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಬೆಳೆದ ಬೆಳೆಗೆ ನಷ್ಟ ಉಂಟಾಗಿದೆ.
ರಘುನಾಥ್ ನಾಯಕ್ ರವರು ತಮ್ಮ ನಿವಾಸದ ಬಳಿಯಲ್ಲಿ ಬೇರೊಬ್ಬ ಕೃಷಿಕರ ಹಡಿಲು ಬಿಟ್ಟಿದ್ದ ಗದ್ದೆಯನ್ನು ಪಡೆದು ಚೆಂಡು ಹೂವು ಬೆಳೆಗೆ ಕೈ ಹಾಕಿದ್ದು, ಉತ್ತಮ ಇಳುವರಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಲೆನಾಡಿನ ಶಿವಮೊಗ್ಗ, ಸಾಗರ, ಹಾಸನ , ಬಾಗಲಕೋಟೆ, ಮುಂಬೈನ ಕೆಲವೊಂದು ಭಾಗದಲ್ಲಿ ಈ ಚೆಂಡು ಹೂ ಹೆಚ್ಚಾಗಿ ಬೆಳೆಯುತ್ತಿದ್ದು, ಕರಾವಳಿ ಭಾಗದಲ್ಲಿ ಈ ಹೂವು ಬೆಳೆಯುವುದು ಭಾರೀ ಅಪರೂಪ. ಆದರೆ ಕರಾವಳಿ ಭಾಗದ ತುಳುನಾಡಿನ ನೆಲದಲ್ಲಿ ಏನಾದರೂ ವಿಶೇಷ ಕೃಷಿಯನ್ನು ಮಾಡಬೇಕೆಂಬ ಆಲೋಚನೆಯಿಂದ ಚೆಂಡು ಹೂ ಕೃಷಿಗೆ ಕೈ ಹಾಕಿದ್ದು, ಮೊದಲ ಪ್ರಯತ್ನದಲ್ಲೇ ಉತ್ತಮ ಇಳುವರಿಯನ್ನು ಪಡೆದಿದ್ದಾರೆ.
ಚೆಂಡು ಹೂ ಉಷ್ಣಾಂಶ ಹೆಚ್ಚಿರುವ ಭಾಗದಲ್ಲಿ ಇಳುವರಿ ಬರುವುದು ಭಾರೀ ಕಡಿಮೆ. ಆದರೆ ಕಾರ್ಕಳದ 35 ಡಿಗ್ರಿ ಉಷ್ಣಾಂಶದಲ್ಲೂ ಒಳ್ಳೆಯ ಇಳುವರಿ ಪಡೆದಿದ್ದಾರೆ. ಸುಮಾರು ಒಂದುವರೆ ಎಕರೆ ಭೂಮಿಯಲ್ಲಿ ಸುಮಾರು 12 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಗಿಡಗಳನ್ನು ಬಾಗಲಕೋಟೆಯ ನರ್ಸರಿಯೊಂದರಿಂದ ತರಿಸಿಕೊಂಡಿದ್ದು, ಹಟ್ಟಿ ಗೊಬ್ಬರದ ಕೊರತೆಯಿಂದ ಕೋಳಿ ಗೊಬ್ಬರ ಹಾಗೂ ತೋಟಗಾರಿಕೆ ಇಲಾಖೆ ಸೂಚಿಸಿದ ಗೊಬ್ಬರವನ್ನು ಬಳಸಿಕೊಂಡು ಉತ್ತಮ ಇಳುವರಿಯನ್ನು ಪಡೆದಿದ್ದಾರೆ.
ಒಂದೂವರೆ ಎಕರೆ ಭೂಮಿಯಲ್ಲಿ ಬೆಳೆಯಲಾದ ಚೆಂಡು ಹೂವಿನಿಂದ ಉತ್ತಮ ಇಳುವರಿಯನ್ನು ಪಡೆದರೂ ಲಾಕ್ಡೌನ್ ನಿಂದ ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಗಾಳಿಯ ರಭಸಕ್ಕೆ ಹಲವು ಗಿಡಗಳು ಧರೆಗೆ ಉರುಳಿದ್ದು, ಭಾರೀ ನಷ್ಟ ಸಂಭವಿಸಿದೆ. ಇದೀಗ ಉತ್ತಮ ಇಳುವರಿ ಬಂದ ಚೆಂಡು ಹೂವು ಮಾರುಕಟ್ಟೆಯಲ್ಲಿ ಮಾರಾಟವಾಗದೆ ಗಿಡದಲ್ಲೇ ಉಳಿಯುವಂತಾಗಿದೆ. ಈಗ ಸದ್ಯ ಅನ್ಲಾಕ್ ಆಗಿದ್ದು, ಲಾಭದ ನಿರೀಕ್ಷೆ ಇದೆ ಎಂದು ಚೆಂಡು ಹೂವು ಬೆಳೆಗಾರ ರಘುನಾಥ್ ನಾಯಕ್ ಪುನಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಭತ್ತದ ಕೃಷಿಯೇ ಹೆಚ್ಚಾಗಿ ಕಂಡು ಬರುತ್ತಿದ್ದ ಉಡುಪಿಯಲ್ಲಿ ಮಂಗಗಳ ಹಾಗೂ ನವೀಲಿನ ಹಾವಳಿಯಿಂದ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಏನಾದರೂ ಹೊಸ ಕೃಷಿಯನ್ನು ಮಾಡಬೇಕು ಎಂಬ ಆಲೋಚನೆಯಲ್ಲಿ ಚೆಂಡು ಹೂವುನ್ನು ಬೆಳೆಯಲಾಗಿದೆ. ಅದರಂತೆ ಉತ್ತಮ ಇಳುವರಿಯೂ ಬಂದಿದೆ. ಯುವ ಕೃಷಿಕರು ಇಂತಹ ಕೃಷಿಗೆ ಮನಸ್ಸು ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಆದರೆ ಲಾಕ್ಡೌನ್ನಿಂದ ಸ್ವಲ್ಪಮಟ್ಟಿಗೆ ಸಮಸ್ಯೆ ಉಂಟಾಗಿದೆ. ಏನೇ ಆಗಲಿ ಕರವಾಳಿಯ ನೆಲದಲ್ಲಿ ಹೊಸ ಕೃಷಿಯನ್ನು ಮಾಡುವುದರ ಮೂಲಕ ಉತ್ತಮ ಇಳುವರಿಯನ್ನು ಪಡೆದು ಇಲ್ಲಿಯೂ ಚೆಂಡು ಹೂವು ಬೆಳೆಯಬಹುದು ಎನ್ನುವುದನ್ನು ತೋರಿಸಿ, ಕೃಷಿಕರಲ್ಲಿ ಹೊಸ ಭರವಸೆಯನ್ನು ಮೂಡಿಸಿದ ರೈತನ ಶ್ರಮ ಶ್ಲಾಘನೀಯ.
ಇದನ್ನೂ ಓದಿ:
ಲಾಕ್ಡೌನ್ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್ನಿಂದ 80 ರೂ. ಲಾಭವಿಲ್ಲ