ವ್ಯಾಪಾರದಲ್ಲಿ ಸ್ಪರ್ಧಾತ್ಮಕತೆಯ ಪರಿಗಣನೆ ಮುಖ್ಯ: ತಮನ್ನಾ ನೇಮಕಕ್ಕೆ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ತನ್ನ ವ್ಯಾಪಾರವನ್ನು ವಿಸ್ತರಿಸಲು ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಕೆಲವರ ಆಕ್ಷೇಪಗಳಿಗೆ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಕನ್ನಡ ನಟಿಯರನ್ನು ಸಂಪರ್ಕಿಸಿದರೂ ಸಾಧ್ಯವಾಗದ ಕಾರಣ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಬೆಂಗಳೂರು, ಮೇ 23: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ರಾಜ್ಯದ ಅಸ್ಮಿತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ವಚನ ಪರಂಪರೆಯಿಂದ ಬಂದಿರುವ ನನಗೆ ಕನ್ನಡ, ಕನ್ನಡಿಗ, ಕರ್ನಾಟಕದ ಮೇಲೆ ಅಪಾರ ಗೌರವ ಮತ್ತು ಎಲ್ಲರಿಗಿಂತ ಹೆಚ್ಚಿನ ಬದ್ಧತೆ ಇದೆ. ಇಲ್ಲಿಯ ಕಲಾವಿದರ ಬಗ್ಗೆ ಅಭಿಮಾನವೂ ಇದೆ. ಆದರೆ, ವ್ಯಾಪಾರದ ಪ್ರಶ್ನೆ ಬಂದಾಗ ಇಲ್ಲಿಯ ಸ್ಪರ್ಧಾತ್ಮಕತೆಯನ್ನು ನೋಡಬೇಕು. ಹೀಗಾಗಿ ಪರಿಣತರ ತಂಡದ ತೀರ್ಮಾನದಂತೆ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದನ್ನು ನಕಾರಾತ್ಮಕವಾಗಿ ನೋಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
ತಮನ್ನಾ ಭಾಟಿಯಾ ಅವರ ನೇಮಕಕ್ಕೆ ಕೆಲವರು ಕನ್ನಡದ ಹೆಸರು ಹೇಳಿಕೊಂಡು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಈ ಕುರಿತಾಗಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನಾನು ಈ ಖಾತೆಯನ್ನು ವಹಿಸಿಕೊಂಡ ಮೇಲೆ ಕೆಎಸ್ಡಿಎಲ್ನಲ್ಲಿ ಉತ್ಪಾದನೆ ಶೇಕಡ 40ರಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಾವೇನೂ ಹೊಸ ಯಂತ್ರೋಪಕರಣಗಳನ್ನು ಖರೀದಿಸಿಲ್ಲ. ಜತೆಗೆ ಎಫ್ ಎಂಸಿಜಿ ವಲಯದಲ್ಲಿ ಸಂಸ್ಥೆಯ ಬೆಳವಣಿಗೆ ಶೇಕಡ 15ರಷ್ಟಿದೆ. ಈ ವಿಚಾರದಲ್ಲಿ ಗೋದ್ರೇಜ್ (ಶೇ.11), ಹಿಂದೂಸ್ತಾನ್ ಲಿವರ್ಸ್ (ಶೇ 9), ಐಟಿಸಿ (ಶೇಕಡ 8), ವಿಪ್ರೋ (ಶೇಕಡ 7) ಮುಂತಾದ ಉದ್ದಿಮೆಗಳನ್ನೂ ಕೆಎಸ್ಡಿಎಲ್ ಹಿಂದಿಕ್ಕಿದೆ.
ಇದನ್ನೂ ಓದಿ: 2 ವರ್ಷ, 2 ದಿನಕ್ಕೆ ಮಿಲ್ಕಿ ಬ್ಯೂಟಿಗೆ ಬರೋಬ್ಬರಿ 6.20 ಕೋಟಿ ರೂ.: ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ
ನಾವು ಕೆಎಸ್ಡಿಎಲ್ ವಹಿವಾಟನ್ನು ಮುಂದಿನ ಮೂರು ವರ್ಷಗಳಲ್ಲಿ 5,000 ಕೋಟಿ ರೂ.ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದೇವೆ. ಆಗ ಹಾಲಿವುಡ್ ನಟಿಯೊಬ್ಬರನ್ನೇ ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬರಲೆಂದು ನಾನು ಆಶಿಸುತ್ತೇನೆ ಎಂದಿದ್ದಾರೆ.
ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಳ್ಳುವ ಮೊದಲು ನಾವು ಕನ್ನಡದವರೇ ಆದ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದೆವು. ಜೊತೆಗೆ ಶ್ರೀಲೀಲಾ, ಪೂಜಾ ಹೆಗಡೆ, ಕಿಯಾರ ಅಡ್ವಾಣಿ ಅವರನ್ನೂ ಕೇಳಲಾಗಿದೆ. ದೀಪಿಕಾ ಅವರು ಅವರದೇ ಉತ್ಪನ್ನಗಳ ಪ್ರಚಾರದಲ್ಲಿ ಇದ್ದಾರೆ. ಹೀಗಾಗಿ ಬರಲಿಲ್ಲ. ಉಳಿದವರು ಬೇರೆ ಬೇರೆ ಸೌಂದರ್ಯವರ್ಧಕಗಳು, ಕ್ರೀಮ್ಗಳು ಮತ್ತು ಸಾಬೂನುಗಳಿಗೆ ರೂಪದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ವರ್ಷ ಅವರು ಬಿಡುವಿಲ್ಲ ಎಂದು ತಿಳಿಸಿದರು. ಹೀಗಾಗಿ, ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ 28 ಮಿಲಿಯನ್ ಫಾಲೋಯರ್ಸ್ ಹೊಂದಿರುವ ಮನ್ನಾ ಭಾಟಿಯಾ ಅವರನ್ನು ಅವರ ಅಖಿಲ ಭಾರತೀಯ ಮಟ್ಟದ ವರ್ಚಸ್ಸನ್ನು ನೋಡಿ ನೇಮಿಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಎಸ್ಡಿಎಲ್ ಮೂಲಕ ಇತ್ತೀಚೆಗೆ 21 ಹೊಸ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ನಾವು ಪರ್ಫ್ಯೂಮ್ ಕ್ಷೇತ್ರಕ್ಕೂ ಕಾಲಿಡುತ್ತಿದ್ದೇವೆ. ಇದಕ್ಕಾಗಿ ನಮ್ಮ ಅಧಿಕಾರಿಗಳನ್ನು ಉತ್ತರಪ್ರದೇಶದ ಕನೌಜ್ಗೂ ಕಳಿಸಿಕೊಡಲಾಗಿತ್ತು. ವ್ಯಾಪಾರದ ಪ್ರಶ್ನೆ ಬಂದಾಗ ನಾವು ಅದಕ್ಕೆ ತಕ್ಕ ಕಾರ್ಯತಂತ್ರವನ್ನೇ ರೂಪಿಸಬೇಕಾಗುತ್ತದೆ. ಬ್ರ್ಯಾಂಡ್ ಅಂಬಾಸಿಡರ್ ನೇಮಕವನ್ನು ತಪ್ಪಾಗಿ ಭಾವಿಸಬಾರದು. ನಾವು ಅಧಿಕಾರಕ್ಕೆ ಬಂದ ಮೇಲೆ, ಕೆಎಸ್ಡಿಎಲ್ ವಹಿವಾಟು 1,700 ಕೋಟಿ ರೂ.ಗೂ ಹೆಚ್ಚಾಗಿದೆ. ಇದರ ಪೈಕಿ ರಾಜ್ಯದಲ್ಲಿ ನಡೆದಿರುವ ವಹಿವಾಟಿನ ಮೊತ್ತ 320 ಕೋಟಿ ರೂ. ಆಸುಪಾಸಿನಲ್ಲಿದೆಯಷ್ಟೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ರಾಯಭಾರಿ; ಕನ್ನಡದ ನಟಿಯರು ಸಿಗಲಿಲ್ಲವಾ ಎಂದು ನೆಟ್ಟಿಗರ ಪ್ರಶ್ನೆ
ಕೆಎಸ್ಡಿಎಲ್ ತರಹದಲ್ಲೇ ಎಂಎಸ್ಐಎಲ್ ಸಂಸ್ಥೆಗೂ ನಾವು ಹೊಸ ರೂಪ ನೀಡುತ್ತಿದ್ದು, ಸದ್ಯದಲ್ಲೇ ವಾರ್ಷಿಕ 10 ಸಾವಿರ ಕೋಟಿ ರೂ. ವಹಿವಾಟಿನ ಗುರಿಯುಳ್ಳ ಚಿಟ್ ಫಂಡ್ ಆರಂಭಿಸುತ್ತಿದ್ದೇವೆ. ಹುಬ್ಬಳ್ಳಿಯಲ್ಲಿರುವ ಎಂಜಿಎಫ್ ಅನ್ನು ಕೂಡ ಉಳಿಸಿಕೊಳ್ಳಬೇಕಾಗಿದೆ. ನಾವು ಅಖಿಲ ಭಾರತ ಮಟ್ಟವನ್ನು ಮೀರಿ ಜಾಗತಿಕ ಮಟ್ಟದಲ್ಲಿ ಯೋಚಿಸಬೇಕಾಗಿದೆ. ಕೆಎಸ್ಡಿಎಲ್ ಅನ್ನು ಕೇವಲ ಭಾರತವಲ್ಲ, ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿಸಬೇಕೆನ್ನುವುದು ನಮ್ಮ ಹೆಗ್ಗುರಿ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








