ಮೈಸೂರು: ದಕ್ಷಿಣ ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ವಿಘ್ನ, ದೇವಸ್ಥಾನ ನಿರ್ಮಿಸಲು ಬಿಡಲ್ಲವೆಂದ ದಸಂಸ ಮುಖಂಡರು
ಮೈಸೂರು ತಾಲೂಕಿನ ಗುಜ್ಜೇಗೌಡನಪುರದಲ್ಲಿ ದಕ್ಷಿಣ ಅಯೋಧ್ಯೆ ಎಂದು ಕರೆಯಲ್ಪಡುವ ಬಾಲರಾಮ ದೇವಾಲಯ ನಿರ್ಮಾಣಕ್ಕೆ ದಲಿತ ಸಂಘರ್ಷ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ದೇವಾಲಯ ನಿರ್ಮಾಣಕ್ಕೆ ಬದಲಾಗಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ. ಪೂಜಾ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿ ದಸಂಸ ಮುಖಂಡರು ಫ್ಲೆಕ್ಸ್‌ಗಳನ್ನು ಹರಿದು ಹಾಕಲಾಗಿದೆ.

ಮೈಸೂರು, ಮೇ 23: ಮೈಸೂರು ತಾಲೂಕಿನ ಗುಜ್ಜೇಗೌಡನಪುರದಲ್ಲಿ ಅಯೋಧ್ಯೆಯ (Ayodhya) ಮೂಲ ಶಿಲೆ ಸಿಕ್ಕಿತ್ತು. ಸದ್ಯ ಈ ಸ್ಥಳದಲ್ಲಿ ಗಲಾಟೆ ಉಂಟಾಗಿದೆ. ಆ ಮೂಲಕ ದಕ್ಷಿಣ ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ವಿಘ್ನ ಎದುರಾಗಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ ನಿರ್ಮಿಸಲು ಬಿಡಲ್ಲ, ದೇವಸ್ಥಾನದ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವಂತೆ ದಲಿತ ಸಂಘರ್ಷ ಸಮಿತಿ (Dalit Sangharsh Samiti) ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯ ಮೂಲ ಶಿಲೆ ಸಿಕ್ಕ ಸ್ಥಳದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದರು. ಆದರೆ ಇದಕ್ಕೆ ದಲಿತ ಸಂಘರ್ಷ ಸಮಿತಿ ವತಿಯಿಂದ ಆಕ್ರೋಶ ವ್ಯಕ್ತವಾಗಿದೆ. ಏಕಾಏಕಿ ಫ್ಲೆಕ್ಸ್‌ಗಳನ್ನು ಹರಿದು ಹಾಕಿ, ಪೂಜಾ ಕೈಂಕರ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಇದನ್ನೂ ಓದಿ: ಹಿಮಾಲಯ ಪರ್ವತ ಹತ್ತಿದ ಮೈಸೂರಿನ ಪೌರ ಕಾರ್ಮಿಕರ ಮಕ್ಕಳು, ಮಾವುತರು: 24 ಜನರ ತಂಡದಿಂದ ಸಾಧನೆ
ಇಂದು ಬಾಲರಾಮ ಶಿಲ್ಪ ಉದ್ಭವಕ್ಕೆ ಪೇಜಾವರ ಶ್ರೀ ಚಾಲನೆ ನೀಡಬೇಕಿತ್ತು. ಮುಖ್ಯ ಅತಿಥಿಗಳಾಗಿ ರಾಜವಂಶಸ್ಥ, ಸಂಸದ ಯದುವೀರ್ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಆರ್ಎಸ್ಎಸ್ ಮುಖಂಡ ಮಾ.ವೆಂಕಟೇಶ್, ಶಿಲ್ಪಿ ಅರುಣ್ ಯೋಗಿರಾಜ್ ಮತ್ತು ಇತಿಹಾಸತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್ ಭಾಗಿಯಾಗಬೇಕಿತ್ತು. ಆದರೆ ಅಷ್ಟರಲ್ಲೇ ವಿಘ್ನ ಎದುರಾಗಿದೆ.
ಸದ್ಯ ದಕ್ಷಿಣ ಅಯೋಧ್ಯೆ ನಿರ್ಮಾಣ ಕುರಿತು ಪರ- ವಿರೋಧ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ ನಿರ್ಮಾಣಕ್ಕೆ ಅವಕಾಶವಿಲ್ಲವೆಂದು ದಸಂಸ ಮುಖಂಡರು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಪೂಜೆ ಮಾಡಿದರೆ ಪರಿಣಾಮ ಸರಿಯಿರಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಂದು ನಡೆಯಬೇಕಿದ್ದ ಬಾಲರಾಮ ಶಿಲ್ಪ ಉದ್ಭವ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ: Mysuru Cricket Stadium: ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಇನ್ನು ಬಾಲರಾಮನ ಕಲ್ಲು ಸಿಕ್ಕ ಜಾಗದಲ್ಲಿ ಕಾರ್ಯಕರ್ತರು ದಲಿತ ಹೋರಾಟದ ಬಾವುಟಗಳನ್ನು ನೆಟ್ಟಿದ್ದಾರೆ. ಶಂಕುಸ್ಥಾಪನೆಗೆ ಹಾಕಿದ ಚಪ್ಪರದ ಸುತ್ತ ಬಾವುಟಗಳನ್ನ ಕಟ್ಟಿದ್ದಾರೆ. ಕಲ್ಲು ಸಿಕ್ಕ ಜಾಗದ ಕಲ್ಲಿನ ಮೇಲೆ ಚಪ್ಪಲಿ ತೆಗೆಯದೆ ಪೂಜಾ ಸ್ಥಳಕ್ಕೆ ಹೋಗಿ ಕಾರ್ಯಕರ್ತರು ಬಾವುಟಯಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.