- Kannada News Photo gallery Mysuru: Children of Civic Workers and Mahouts Successfully Climb Himalayan Mountain
ಹಿಮಾಲಯ ಪರ್ವತ ಹತ್ತಿದ ಮೈಸೂರಿನ ಪೌರ ಕಾರ್ಮಿಕರ ಮಕ್ಕಳು, ಮಾವುತರು: 24 ಜನರ ತಂಡದಿಂದ ಸಾಧನೆ
ಮೈಸೂರಿನ ಮಾವುತರು ಮತ್ತು ಪೌರಕಾರ್ಮಿಕರ ಮಕ್ಕಳು ಉತ್ತರಾಖಂಡದ 13,990 ಅಡಿ ಎತ್ತರದ ಮೌಂಟ್ ಕುವಾರಿ ಪಾಸ್ ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೈಗರ್ ಅಡ್ವೆಂಚರ್ ಫೌಂಡೇಷನ್ ನೆರವಿನೊಂದಿಗೆ 24 ಜನರ ತಂಡ ತ್ರಿವರ್ಣ ಧ್ವಜವನ್ನು ಹಿಮಾಲಯದ ಮೇಲೆ ಹಾರಿಸುವ ಮೂಲಕ ಯಶಸ್ಸು ಸಾಧಿಸಿದ್ದಾರೆ.
Updated on:May 15, 2025 | 7:53 AM

ಸಾಂಸ್ಕೃತಿಕ ನಗರಿ ಮೈಸೂರಿನ ಪೌರಕಾರ್ಮಿಕರು ಹಾಗೂ ಮಾವುತರ ಮಕ್ಕಳು ಹಿಮಾಲಯದ ಪರ್ವತಾರೋಹಣ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತದ ತ್ರಿವರ್ಣ ಧ್ವಜವನ್ನು ಹಿಮಾಲಯದ ಮೇಲೆ ಹಾರಿಸಿದ್ದಾರೆ. ಮೈಸೂರಿನ ಎಂಟು ಪೌರಕಾರ್ಮಿಕರ ಮಕ್ಕಳು, ಮಾವುತರು, ಅರಣ್ಯ ರಕ್ಷಕರು ಮತ್ತು ಇತರ ನಾಗರಿಕರು ಸೇರಿ ಒಟ್ಟು 24 ಜನರ ತಂಡದಿಂದ ಈ ಸಾಧನೆ ಮಾಡಲಾಗಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೈಸೂರು ನಗರದ ಟೈಗರ್ ಅಡ್ವೆಂಚರ್ ಫೌಂಡೇಷನ್ ಪೌರಕಾರ್ಮಿಕ ಮಕ್ಕಳು ಹಾಗೂ ಮಾವುತರ ಮಕ್ಕಳನ್ನು ಸಾಹಸಯಾತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಹಿಮಾಲಯದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಯಶಸ್ವಿಯಾಗಿ ಯಾತ್ರೆ ಮುಗಿಸಿದ್ದಾರೆ.

ಉತ್ತರಾಖಂಡದ 13,990 ಅಡಿ ಎತ್ತರದ ಮೌಂಟ್ ಕುವಾರಿ ಪಾಸ್ ಹತ್ತುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜೂನ್ 2025 ಹೆಸರಿನಲ್ಲಿ ಆರಂಭಿಸಿದ ಯಾತ್ರೆ ಯಶಸ್ವಿಯಾಗಿದೆ. ಹಿಮನದಿಗಳು ಮತ್ತು ಬಿರುಗಾಳಿಯ ಸವಾಲಿನ ಹಾದಿಯಲ್ಲಿ ಸಾಗಿ ಮೇ 1 ರಂದು ಹೊಸ ದಾಖಲೆ ಬರೆದಿದ್ದಾರೆ. ಭಾರತದ ಇತಿಹಾಸದಲ್ಲಿ ಪೌರಕಾರ್ಮಿಕರ ಮಕ್ಕಳು, ಅರಣ್ಯ ಕಾವಲುಗಾರರು ಮತ್ತು ಮಾವುತರ ಮೊದಲ ಪರ್ವತಾರೋಹಣ ಅನ್ನೋ ಹೆಗ್ಗಳಿಕೆಗೆ ಈ ಯಾತ್ರೆ ನಾಂದಿ ಆಗಿದೆ.

ಮರಿಮಲ್ಲಪ್ಪ ಪಿಯು ಕಾಲೇಜಿನ ಉಪನ್ಯಾಸಕ ಅನಿಲ್ ಕುಮಾರ್ ನೇತೃತ್ವದಲ್ಲಿ 24 ಜನರ ತಂಡದಲ್ಲಿ ಪೌರಕಾರ್ಮಿಕರ ಮಕ್ಕಳು, ಹುಣಸೂರು ಅರಣ್ಯ ವಿಭಾಗದ ಮಾವುತರು, ಅರಣ್ಯ ಬೀಟ್ ಗಾರ್ಡ್‌ಗಳು, ಗೃಹಿಣಿಯರು ಮತ್ತು ಶಾಶ್ವತ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿಗಳು ಪರ್ವತಾರೋಹಣಕ್ಕೆ ತೆರಳಿದ್ದರು.

ಪಿಪಲ್ಕೋಟಿಯಲ್ಲಿ ಕಡ್ಡಾಯ ವೈದ್ಯಕೀಯ ತಪಾಸಣೆಯ ನಂತರ, ತಂಡವು ಏಪ್ರಿಲ್ 27 ರಂದು ತುಗಾಸಿ ಬೇಸ್ ಕ್ಯಾಂಪ್ ತಲುಪಿ ನಂತರ ಗುಲಿಂಗ್ ಮತ್ತು ಖುಲ್ಲರ್ ಏರಿದರು. ಮೊದಲ ದಿನ ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳನ್ನು ಕೂಡ ಅನುಭವಿಸಿದ್ದಾರೆ.

ತದನಂತರ ಚೇತರಿಸಿಕೊಂಡ ಎಲ್ಲರೂ ತಮ್ಮ ಗುರಿಯನ್ನು ತಲುಪಿದ್ದಾರೆ. ಗುರಿ ತಲುಪಿದ ತಂಡ ಮೊದಲು ಮಾಡಿದ ಕೆಲಸವೆಂದರೆ ಭಾರತಾಂಬೆಯ ಧ್ವಜ ಹಾರಿಸಿದ್ದು. ಈ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ಮಕ್ಕಳು ಹೊಸ ಸಾಧನೆ ಮಾಡಿ ರಾಜ್ಯದ ಹಿರಿಮೆಗೆ ಮತ್ತಷ್ಟು ಗರಿ ಮೂಡಿಸಿದ್ದಾರೆ.
Published On - 7:52 am, Thu, 15 May 25









