ಅವರ ಜಮೀನುಗಳಿಗೆ ಬೆಲೆ ಏರಬಹುದು: ರಾಮನಗರ ಹೆಸರು ಬದಲಾವಣೆಗೆ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಯೋಜನೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರ ಭೂಮಿಗಳ ಬೆಲೆ ಏರಿಸುವ ಷಡ್ಯಂತ್ರ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕ್ರಮವು ಡಿಕೆಶಿ ಅವರ ಭೂಮಿಗಳ ಬೆಲೆ ಏರಿಸುವುದಕ್ಕಾಗಿ ಅಷ್ಟೆ. ಇವುಗಳ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನವದೆಹಲಿ, ಮೇ 23: ಅವರ ಜಮೀನುಗಳಿಗೆ ಬೆಲೆ ಏರಬಹುದು, ಇದಕ್ಕಾಗಿ ಬೆಂಗಳೂರು ದಕ್ಷಿಣ ಎಂದು ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡಲು ಮುಂದಾಗಿರಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನುದ್ದೇಶಿಸಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಟೀಕೆ ಮಾಡಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಗಿತ್ತು. ಇದೀಗ ಅವರ (ಡಿಕೆಶಿ) ಜಮೀನುಗಳಿಗೆ ಬೆಲೆ ಏರಿಸಿಕೊಳ್ಳಲು ಹಾಗೆ ಮಾಡಿರಬಹುದು. ಈ ರಾಜಕರಣಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ಕೇಂದ್ರ ಗೃಹ ಸಚಿವರಿಗೆ ಕಳುಹಿಸಿದ್ದು, ಅವರ ಬಳಿ ಪ್ರಸ್ತಾಪ ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಇವರು (ಡಿಕೆ ಶಿವಕುಮಾರ್) ಶಾಶ್ವತವಾಗಿ ಇರುತ್ತಾರಾ? ಮುಂದೆ ಬದಲಾಗಲಿದೆ, ಅದು ನನಗೆ ಗೊತ್ತಿದೆ. ಈಗ ಜಮೀನುಗಳಿಗೆ ಬೆಲ ಇಲ್ವಾ? ಅವರ ಜಮೀನುಗಳಿಗೆ ಬೆಲೆ ಏರಬಹುದು. 40 ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್ಐಟಿ ಏನೋ ಮಾಡಿದ್ದರಲ್ಲಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ನನ್ನ ಮೇಲೆ ಗದಾಪ್ರಹಾರ ಮಾಡ್ತಿದ್ದರಲ್ಲಾ, ಇವರು ಮಾಡಿಕೊಂಡದ್ದರಲ್ಲಿ ಶೇ 50 ಸರ್ಕಾರಿ ಜಮೀನುಗಳಿವೆ. ಇವರು ಮಾಡಿರುವುದು ನಮಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕೊಟ್ಟ ಜಾಗ ನುಂಗಿದ್ದು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ದಲಿತರ ಭೂಮಿ ಕಬಳಿಸಿದವರನ್ನು ಜತೆಯಲ್ಲಿಟ್ಟುಕೊಂಡ ಸಿದ್ದರಾಮಯ್ಯ: ಹೆಚ್ಡಿಕೆ
ಮುಖ್ಯಮಂತ್ರಿ ಸಿದ್ದಾರಾಮಯ್ಯ ತಾವು ಅಹಿಂದ ಎನ್ನುತ್ತಾರೆ. ದಲಿತರ ಭೂಮಿ ಕಬಳಿಸಿದವರನ್ನೇ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಈಗೇನೋ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಅಂತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಹಿಂದುಳಿದ ವರ್ಗಗದವರನ್ನು ಗುರಿಯಾಗಿಸಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂಬ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸಚಿವ ಪರಮೇಶ್ವರ ಸಂಕಷ್ಟಕ್ಕೆ ಒಳಗಾಗಲು ಕಾಂಗ್ರೆಸ್ನ ಪ್ರಭಾವಿ ನಾಯಕನೇ ಕಾರಣ ಎಂದರು.
ಚಿನ್ನ ತರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ನಾಯಕ: ಹೆಚ್ಡಿಕೆ
ಸಿಎಂ ಸಿದ್ದರಾಮಯ್ಯಗೆ ಇದೆಲ್ಲಾ ಗೊತ್ತಿದೆ. ಹೆಣ್ಣು ಮಗಳು ಚಿನ್ನ ತರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ಪ್ರಭಾವಿ ನಾಯಕ. ಪರಮೇಶ್ವರ್ ದಲಿತರ ಸಮಾವೇಶ ಮಾಡಲು ಹೊರಟರು. ತಾವೇ ಮುಂದಿನ ಸಿಎಂ ಆಗುತ್ತೇನೆ ಎಂದು ಸಮಾವೇಶಕ್ಕೆ ಮುಂದಾದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರಭಾವಿ ನಾಯಕನೇ ಅವರನ್ನು ಸಿಲುಕಿಸಿದ್ದಾರೆ. ಇದೆಲ್ಲಾ ಸಿಎಂ ಸಿದ್ದರಾಮಯ್ಯಗೆ ಗೊತ್ತಿಲ್ಲವೇ? ಮುಂದೆ ಸಿಎಂ ಆಗಲು ಟವಲ್ ಹಾಸಿಕೊಂಡು ಇರುವವರೇ ಸಂದೇಶ ನೀಡಿದ್ದಾರೆ. ಈ ಪ್ರಕರಣ ಹೊರಬರಲು ಸಂದೇಶ ನೀಡಿದ್ದೇ ಕಾಂಗ್ರೆಸ್ ಪ್ರಭಾವಿ ನಾಯಕ. ಸಿಎಂ ಹತ್ತಿರ ಗುಪ್ತಚರ ಇಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇದನ್ನೂ ಓದಿ: ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಇದೆಲ್ಲಾ ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕನಿಂದ ಇದೆಲ್ಲಾ ಆಗಿದೆ. ಅದೆನೋ ಎಷ್ಟು ಸಮಿತಿ ಮಾಡುತ್ತಿದ್ದೀರಲ್ಲವೇ, ಅದೆಲ್ಲಾ ಏನಾಯ್ತು. ಮಾತು ಎತ್ತಿದರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ನುಡಿದಂತೆ ನಡೆಯಲು ಎಷ್ಟು ಟ್ಯಾಕ್ಸ್ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Fri, 23 May 25