ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧ ಕೇಂದ್ರ ನಿರ್ಬಂಧಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರಗಳಿಗೆ ನಿರ್ಬಂಧ ವಿಧಿಸಲು ಕರ್ನಾಟಕ ಆರೋಗ್ಯ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸೂರ್ಯ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಪಕ್ಷದ ಇತರ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು, ಮೇ 23: ಕೇಂದ್ರ ಸರ್ಕಾರದ ಯೋಜನೆಯಾದ ಜನೌಷಧ (Jan Aushadhi) ಕೇಂದ್ರಗಳಿಗೆ ಕರ್ನಾಟಕ ಸರ್ಕಾರಿ ಆಸ್ಪತ್ರೆಗಳಲ್ಲಿ (govt Hospitals) ನಿರ್ಬಂಧ ಹೇರಲಾಗಿದೆ. ಈಗಿರುವ ಜನ ಔಷಧಿಗಳ ಟೆಂಡರ್ ಮುಗಿಯುವವರೆಗೂ ಕಾರ್ಯ ನಿರ್ವಹಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಸರ್ಕಾರದ ನಿರ್ಧಾರ ಈಗ ರಾಜಕೀಯ ಸ್ವರೂಪ ಪಡೆದು ಕಿಚ್ಚು ಹಚ್ಚಿದೆ. ಜನೌಷಧಿ ಕೇಂದ್ರಗಳ ರದ್ದತಿ ವಾಪಸ್ ಪಡೆಯುವಂತೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದು, ಜನೌಷಧ ಕೇಂದ್ರಗಳನ್ನು ರದ್ದುಪಡಿಸಿದ ಆದೇಶ ಮರುಪರಿಶೀಲಿಸಿ ಎಂದು ಮನವಿ ಮಾಡಿದ್ದಾರೆ.
ಬಡ ಜನರಿಗೆ ಕಡಿಮೆ ದರದಲ್ಲಿ ಔಷಧ ನೀಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ಅದಕ್ಕೂ ಮಣ್ಣು ಹಾಕುತ್ತಿದೆ. ಇದೇನಾ ನಿಮ್ಮ ಸಾಧನೆ ಎಂದು ಶಾಸಕ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಕಮಿಷನ್ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಜನೌಷಧಿ ಕೇಂದ್ರಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಾವೇ ಉಚಿತವಾಗಿ ಕೊಡುತ್ತಿದ್ದೇವೆ: ಗುಂಡೂರಾವ್
ವಿಪಕ್ಷ ಬಿಜೆಪಿ ನಾಯಕರ ಆರೋಪ, ಪ್ರಶ್ನೆಗಳಿಗೆ ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಕೇವಲ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಾತ್ರ ಜನೌಷಧ ಕೇಂದ್ರಗಳಿಗೆ ನಿರ್ಬಂಧ ಹೇರಲಾಗಿದೆ. ನಾವೇ ಉಚಿತವಾಗಿ ಔಷಧ ಕೊಡುತ್ತಿದ್ದೇವೆ. ಹೀಗಿರುವಾಗ ಜನ ಯಾಕೆ ಹಣ ಕೊಟ್ಟು ಔಷಧ ತೆಗೆದುಕೊಳ್ಳಬೇಕು ಎಂದು ಅವರು ಮರು ಪ್ರಶ್ನೆ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ
ಜನೌಷಧ ಕೇಂದ್ರ ಸಂಘರ್ಷ ವಿಚಾರ ಒಂದೆಡೆಯಾದ್ದರೆ, ಆರೋಗ್ಯ ಇಲಾಖೆಯ ಸುತ್ತೋಲೆ ಪ್ರಕಾರ ಸರ್ಕಾರಿ ಆಸ್ಪತ್ರೆ ವೈದ್ಯರು ಹೊರಗಡೆಗೆ ಔಷಧ ಚೀಟಿ ಬರೆದು ಕೊಡುವಂತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ನೀಡಬೇಕು. ಆದರೆ, ನಗರದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇದೆ. ರೋಗಿಗಳು ಹೊರಗಡೆ ಔಷಧ ಖರೀದಿಸುವುದು ಅನಿವಾರ್ಯವಾಗಿದೆ ಎಂದು ರೋಗಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ನಿರ್ಧರಿಸಿದ ಸರ್ಕಾರ: ಕಾರಣ ಇಲ್ಲಿದೆ
ಸರ್ಕಾರಿ ಆಸ್ಪತ್ರೆಯಲ್ಲೇ ಎಲ್ಲ ರೀತಿ ಔಷಧ ಸಿಗುತ್ತದೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ರೋಗಿಗಳು ಔಷಧ ಸಿಗದೆ ಪರದಾಡುತ್ತಿದ್ದಾರೆ. ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇನ್ನಾದರೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.







