ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ನಿರ್ಧರಿಸಿದ ಸರ್ಕಾರ: ಕಾರಣ ಇಲ್ಲಿದೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನ ಔಷಧಿ ಕೇಂದ್ರಗಳಲ್ಲಿ ಬಡವರು ಮತ್ತು ಮದ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ದೊರೆಯುತ್ತವೆ. ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲೂ ಜನ ಔಷಧಿ ಕೇಂದ್ರಗಳಿವೆ. ಈ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಮೇ 17: ಸರ್ಕಾರಿ ಆಸ್ಪತ್ರೆ (Government Hospital) ಆವರಣದಲ್ಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನ ಔಷಧಿ ಕೇಂದ್ರಗಳನ್ನು (Jan Aushadhi Kendra) ಬಂದ್ ಮಾಡಲು ಕರ್ನಾಟಕ ಸರ್ಕಾರ (Karnataka Government) ನಿರ್ಧರಿಸಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇರುವ ಜನ ಔಷಧ ಕೇಂದ್ರಗಳ ಒಪ್ಪಂದ ಸ್ಥಗಿತಗೊಳಿಸುವಂತೆ ಸರ್ಕಾರ, ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ಜನ ಔಷಧಿ ಕೇಂದ್ರ ಬಂದ್ ಮಾಡಲು ಕಾರಣವೇನು?
ರಾಜ್ಯ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರುಗಳು ಬ್ರಾಂಡೆಡ್ ಔಷಧಿಗಳನ್ನು ಹೊರಗಡೆಯಿಂದ ತರುವಂತೆ ರೋಗಿಗಳಿಗೆ ಸಲಹಾ ಚೀಟಿಗಳನ್ನು ನೀಡುವುದನ್ನು ಸರ್ಕಾರ ನಿಷೇಧಿಸಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ತರಹದ ಔಷಧಿಗಳನ್ನು ಹೊರಗೆ ಖರೀದಿಸುವಂತೆ ಶಿಫಾರಸ್ಸು ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ನೀತಿಯಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿನಲ್ಲಿನ ಜನ ಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ. ಈ ಕಾರಣದಿಂದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೊಸ ಜನ ಔಷಧಿ ಕೇಂದ್ರ ಆರಂಭಕ್ಕೆ ತಡೆ
ಪರಿಶೀಲನೆ ಹಂತದಲ್ಲಿ ಇರುವ 31 ಜನ ಔಷಧ ಕೇಂದ್ರಗಳ ಅರ್ಜಿಗಳಿಗೆ ಅನುಮತಿ ನೀಡದಂತೆ ಆರೋಗ್ಯ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ, ಜನ ಔಷಧಿ ಕೇಂದ್ರಗಳನ್ನು ಪ್ರಾರಂಭಿಸುವ ನೀತಿಯನ್ನು ಸಮಗ್ರವಾಗಿ ಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇತರೆ ಜನ ಔಷಧಿ ಕೇಂದ್ರಗಳು ಮುಚ್ಚುತ್ತವೆಯೇ?
ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ, ಸರ್ಕಾರಿ ಆಸ್ಪತ್ರೆಗಳ ಆವರಣದಿಂದ ಹೊರಗೆ ಇರುವ ಜನ ಔಷಧಿಕ ಕೇಂದ್ರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಜನ ಔಷಧಿ ಕೇಂದ್ರಗಳು ಮುಂದುವರೆಯುತ್ತವೆ.
ಇದನ್ನೂ ಓದಿ: ಮದ್ಯ ಬೆಲೆ ಏರಿಕೆ ಬೆನ್ನಲ್ಲೇ ಎಣ್ಣೆ ಮಾರಾಟಗಾರರಿಗೂ ಶಾಕ್ ನೀಡಿದ ಸರ್ಕಾರ: ಲೈಸೆನ್ಸ್ ಶುಲ್ಕ ಹೆಚ್ಚಳ
ಬಿಬಿಪಿಐನಿಂದಲೇ ಔಷಧಿ ಖರೀದಿಸಿ
ಜನೆರಿಕ್ ಔಷಧಿಗಳ ಖರೀದಿಗೆ ಸಾರ್ವಜನಿಕ ವಲಯದ ಔಷಧ ಉದ್ಯಮಗಳ ಬ್ಯೂರೋ (BPPI) ಯೊಂದಿಗೆ ಕೆಎಸ್ಎಂಎಸ್ಸಿಎಲ್ ವಿಶೇಷ ದರಗಳನ್ನು ರೂಪಿಸುತ್ತಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳು ಬಿಪಿಪಿಐನಿಂದ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸುವಂತೆ ಸರ್ಕಾರ ಆದೇಶಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:04 pm, Sat, 17 May 25








