ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ತಿರಸ್ಕರಿಸಿದ ವಧುವಿನ ಬಗ್ಗೆ ಸಂಬಂಧಿಕರು ಹೇಳಿದ್ದೇನು ನೋಡಿ
ಹಾಸನ ನಗರದ ಶ್ರೀಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಸಂಭ್ರಮ ಮನೆಮಾಡಿತ್ತು. ಮದುವೆಗೆ ಬಂದವರೆಲ್ಲ ಖುಷಿ ಖುಷಿಯಿಂದ ಓಡಾಡಿಕೊಂಡಿದ್ದರು. ಪುರೋಹಿತರು, ‘‘ಮಾಂಗಲ್ಯಂ ತಂತುನಾನೇನಾ’’ ಎನ್ನಲು ಸಿದ್ಧವಾಗಿದ್ದರು. ವರ ಇನ್ನೇನು ತಾಳಿ ಕಟ್ಟಬೇಕಷ್ಟೇ, ಹುಡುಗಿಗೆ ಅದೇನಾಯ್ತೋ ಗೊತ್ತಿಲ್ಲ. ನನಗೆ ಈ ಮದುವೆ ಬೇಡ ಅಂತ ಕಡ್ಡಿಮುರಿದಂತೆ ತಲೆ ಅಲ್ಲಾಡಿಸಿದಳು. ಈ ಬಗ್ಗೆ ಸಂಬಂಧಿಕರು ಹೇಳಿದ್ದೇನು ನೋಡಿ.
ಹಾಸನ, ಮೇ 23: ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ವರ ಸರ್ಕಾರಿ ಶಿಕ್ಷಕನಾಗಿದ್ದು, ಯುವತಿ ಸ್ನಾತಕೋತ್ತರ ಪದವಿ ಓದಿದಿದ್ದಾಳೆ. ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಯುವತಿ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ. ತಾಳಿ ಕೈಲಿ ಹಿಡಿದಿದ್ದ ಯುವಕ ಪದೇ ಪದೇ ಯುವತಿಗೆ ಮದುವೆ ಇಷ್ಟ ಇದೆಯೋ ಇಲ್ವೋ ಅಂತಾ ಕೇಳಿದ್ದಾನೆ. ಸುತಾರಾಂ ಒಪ್ಪದ ಹುಡುಗಿ ಮದುವೆ ಬೇಡ ಅಂತಲೇ ಹಠ ಹಿಡಿದಿದ್ದಾಳೆ. ಈ ವೇಳೆ ಪೋಷಕರು ಸಹ ಯುವತಿ ಮನವೊಲಿಸಲು ಶತಾಯಗತಾಯ ಪ್ರಯತ್ನಪಟ್ಟರು. ಆದರೆ, ಯುವತಿ ಮಾತ್ರ ಯಾವುದಕ್ಕೂ ಕ್ಯಾರೆ ಅಂದಿಲ್ಲ. ಬಳಿಕ ಯುವತಿ ಹಠ ಮಾಡಿದ್ದಕ್ಕೆ ನನಗೂ ಈ ಮದುವೆ ಬೇಡ ಎಂದು ವರ ಹೇಳಿದ್ದಾನೆ.
ಇನ್ನು ಮದುವೆ ಬೇಡ ಎಂದ ಯುವತಿ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ವಿಷ್ಯ ತಿಳಿದು ಸ್ಥಳಕ್ಕಾಗಮಿಸಿದ ಬಡಾವಣೆ ಹಾಗೂ ನಗರ ಠಾಣೆ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಯುವತಿ ಬೇರೊಬ್ಬ ಹುಡುಗನನ್ನು ಪ್ರೀತಿಸಿದ್ದ ಕಾರಣಕ್ಕೆ ಮದುವೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಮದುವೆಗೆ ಬಂದಿದ್ದ ನೂರಾರು ಜನ ಘಟನೆಯಿಂದ ಆಘಾತಕ್ಕೆ ಒಳಗಾದ್ರು. ಸಂಭ್ರಮದಲ್ಲಿ ಕಲ್ಯಾಣ ಮಂಟಪ ಹುಡುಗಿಯ ಒಂದೇ ಒಂದು ನಿರ್ಧಾರದಿಂದ ಗೊಂದಲಕ್ಕಿಡಾಯಿತು. ಈ ಬಗ್ಗೆ ಅಲ್ಲಿ ಇದ್ದ ಸಂಬಂಧಿಕರು ಹೇಳಿದ್ದೇನೆಂಬ ವಿಡಿಯೋ ಇಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ