2 ವರ್ಷ, 2 ದಿನಕ್ಕೆ ಮಿಲ್ಕಿ ಬ್ಯೂಟಿಗೆ ಬರೋಬ್ಬರಿ 6.20 ಕೋಟಿ ರೂ.: ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ
ತಮನ್ನಾ ಭಾಟಿಯಾ.. ಪಡ್ಡೆ ಹುಡುಗರ ನೆದ್ದೆಗೇಡಿಸೋ ಸುರಸುಂದ್ರಿ.. ಮಿಲ್ಕಿ ಬ್ಯೂಟಿ ಅಂತಲೇ ಫೇಮಸ್ ಆಗಿರೋ ತಮನ್ನಾ ಮತ್ತು ಆಕೆ ಡ್ಯಾನ್ಸ್ ನೋಡ್ತಿದ್ರೆ ಎಷ್ಟೇ ನೋವು, ಬೇಜಾರ್ ಇದ್ರೂ ಒಂದು ಕ್ಷಣ ಮರೆತು ಹೋಗುತ್ತದೆ.. ಬಾಹುಬಲಿಯ ಅವಂತಿಕಾ ಪಾತ್ರ.. ರಜನಿ ಜೊತೆ ಕಾವಾಲಯ್ಯಾ ಅಂತ ಸೊಂಟ ಬಳಕಿಸಿದ್ದ ಮಿಲ್ಕಿ ಬ್ಯೂಟಿ ಕರ್ನಾಟಕದಲ್ಲಿ ಜೋರು ಸದ್ದು ಮಾಡಿದ್ದಾರೆ. ಅದಕ್ಕೆ ಕಾರಣ ರಾಜ್ಯ ಸರ್ಕಾರ ಕೈಗೊಂಡ ಒಂದೇ ಒಂದು ನಿರ್ಧಾರ. ಇನ್ನು ಈ ನಿರ್ಧಾರಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಸಚಿವರೊಬ್ಬರು ಸ್ಪಷ್ಟನೆ ನೀಡಿದ್ದಾರೆ,

ಬೆಂಗಳೂರು, (ಮೇ 22) : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಅವರನ್ನ ಮೈಸೂರು ಸ್ಯಾಂಡಲ್ ಸೋಪ್ ((Mysore Sandal Soap) ) ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಫೇಮಸ್ ಆಗಿರೋ ತಮನ್ನಾ ಭಾಟಿಯಾ ಅವರನ್ನ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್ ) ತನ್ನ ಬ್ರಾಂಡ್ ರಾಯಭಾರಿಯಾಗಿ ನೇಮಿಸಿದೆ. ಎರಡು ವರ್ಷ 2 ದಿನಕ್ಕೆ ತಮ್ಮನ್ನಾ ಜೊತೆ ಬರೋಬ್ಬರಿ 6.20 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದ್ರೆ, ಇದಕ್ಕೆ ಕರ್ನಾಟಕದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಕರ್ನಾಟಕದ ಪ್ರಾಡಕ್ಟ್ಗೆ ಕನ್ನಡ ನಟ ನಟಿಯರನ್ನೇ ಆಯ್ಕೆ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ. ಈ ವಿರೋಧ ತೀವ್ರಗೊಳ್ಳುತ್ತಿದ್ದಂತೆಯೇ ಸಚಿವ ಎಂಪಿ ಪಾಟೀಲ್, ತಮ್ಮನ್ನಾ ಅವರನ್ನ ರಾಯಭಾರಿಯನ್ನಾಗಿ ಮಾಡಿರುವುದಕ್ಕೆ ಕಾರಣಗಳೊಂದಿಗೆ ಸ್ಪಷ್ಟನೆ ನೀಡಿದ್ದಾರೆ.
ತಮ್ಮನ್ನಾ ಆಯ್ಕೆಗೆ ನಾರಾಯಣ ಗೌಡ ಆಕ್ರೋಶ
ಮೈಸೂರು ಸ್ಯಾಂಡಲ್ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ. ಮೈಸೂರು ಸ್ಯಾಂಡಲ್ ಸೋಪ್ ಕಂಪನಿ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂ. ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ (Narayan Gowda) ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ರಾಯಭಾರಿ; ಕನ್ನಡದ ನಟಿಯರು ಸಿಗಲಿಲ್ಲವಾ ಎಂದು ನೆಟ್ಟಿಗರ ಪ್ರಶ್ನೆ
ಇದು ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿ. 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದಾರೆ. ಈ ಕಂಪನಿಯು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಚರ್ಚೆ
ಇನ್ನು ಮೈಸೂರು ಸ್ಯಾಂಡಲ್ ಸೋಪ್ಸ್ ರಾಯಭಾರಿಯಾಗಿ ತಮನ್ನಾ ಆಯ್ಕೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಲ್ಲೂ ಭಾರೀ ಚರ್ಚೆಯಾಗುತ್ತಿದೆ. ಕೆಲವರು ಕರ್ನಾಟಕದಲ್ಲಿ ಇಂತಹ ಬ್ಯೂಟಿ ಯಾರು ಇಲ್ವಾ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಕೆಲವರಂತೂ ಭಾರೀ ಟ್ರೋಲ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಹಣ ಅನ್ಯರ ಪಾಲು ಎಂದು ಪ್ರಶ್ನಿಸಿದ್ದಾರೆ.
ಇನ್ನು ತಮ್ಮನ್ನಾ ಭಾಟಿಯಾ ನೀಡುತ್ತಿರೋ ಹಣದ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಅದೇನಂದ್ರೆ 6 ಕೋಟಿ 20 ಲಕ್ಷಕ್ಕೆ ತಮ್ಮನ್ನಾ ಜೊತೆ 2 ವರ್ಷ ಮತ್ತು 2 ದಿನಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದ್ರೆ ಒಂದು ದಿನಕ್ಕೆ 85 ಸಾವಿರ ರೂಪಾಯಿ ತಮ್ಮನ್ನಾಗೆ ನೀಡಬೇಕಾಗುತ್ತಿದೆ. ಇದೇ ಈಗ ವಿವಾದದ ಕೇಂದ್ರ ಬಿಂದುವಾಗಿದೆ.
ತಮ್ಮನ್ನಾ ಆಯ್ಕೆಗೆ ಸ್ಪಷ್ಟನೆ ಕೊಟ್ಟ ಸಚಿವ
ಇನ್ನು ತಮ್ಮನ್ನಾ ಆಯ್ಕೆಗೆ ಅಪರಸ್ವರ ಕೇಳಿಬಂದಿರುವುದಕ್ಕೆ ಸಚಿವ ಎಂಪಿ ಪಾಟೀಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ನಟಿ ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿರುವುದರ ಹಿಂದೆ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ಮಾನದಂಡಗಳನ್ನು ಅನುಸರಿಸಲಾಗಿದೆ. ಪ್ಯಾನ್ ಇಂಡಿಯಾ ಖ್ಯಾತಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ, ಯುವ ಸಮೂಹದ ಫಾಲೋವರ್ಸ್ ಒಳಗೊಂಡಂತೆ ನಾನಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ಮಾರ್ಗದರ್ಶನದಡಿ, ಕೆಎಸ್ಡಿಎಲ್ನ ಅಧ್ಯಕ್ಷರಾದ ಶ್ರೀ @CSNadagoudaINC ಮತ್ತು ನಾನು, ಕರ್ನಾಟಕದ ಹೆಮ್ಮೆಯಾದ ಮೈಸೂರ್ ಸ್ಯಾಂಡಲ್ ಬ್ರಾಂಡ್ ಅನ್ನು ಭಾರತದ ಅಮೂಲ್ಯ ರತ್ನವಾಗಿಸಲು ಇಚ್ಚಾಶಕ್ತಿಯಿಂದ ಶ್ರಮಿಸುತ್ತಿದ್ದೇವೆ.
ಕೆ.ಎಸ್.ಡಿ.ಎಲ್. ವಹಿವಾಟನ್ನು 2028ರ ವೇಳೆಗೆ ರೂ.5,000… pic.twitter.com/bR7m4sjjfc
— M B Patil (@MBPatil) May 22, 2025
ನಮ್ಮ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ವಿಜೃಂಭಿಸುವಂತೆ ಮಾಡುವ ಕಾಯಕದಲ್ಲಿ ಇದು ಒಂದು ಭಾಗವಷ್ಟೆ. ಈ ಕಾರ್ಯವು ಕೇವಲ ಒಂದು ತಂತ್ರದ ಮೇಲೆ ಅವಲಂಬಿತವಾಗಿಲ್ಲ. ಅದಕ್ಕಾಗಿಯೇ ಕೆ.ಎಸ್.ಡಿ.ಎಲ್. ಸಂಸ್ಥೆಯಲ್ಲಿ ಸಂಪೂರ್ಣ ಹೊಸ ಆಯಾಮಗಳ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯದ ಮಟ್ಟಿಗೇನೋ ಎಂಬಿ ಪಾಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೆ ಇದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದು, ಹೋರಾಟಕ್ಕೂ ಎಚ್ಚರಿಕೆ ನೀಡಿದ್ದಾರೆ. ಇದನ್ನ ಯಾವ ರೀತಿ ಎಂ ಬಿ ಪಾಟೀಲ್ ಟ್ಯಾಕಲ್ ಮಾಡ್ತಾರೆ ಅನ್ನೋದು ನೋಡಬೇಕಾಗಿದೆ




