ಲಾಕ್ಡೌನ್ ಎಫೆಕ್ಟ್: ಸೇವಂತಿ ಹೂವಿನ ಬೆಳೆ ನಾಶ ಮಾಡಿದ ಹಾವೇರಿ ರೈತ
ರೈತ ಹೊಳಿಯಪ್ಪ ಒಂದು ಎಕರೆ ಸೇವಂತಿ ಹೂವು ಬೆಳೆಯಲು ಇಪ್ಪತ್ತರಿಂದ ಮೂವತ್ತು ಸಾವಿರ ರುಪಾಯಿ ಖರ್ಚು ಮಾಡಿದ್ದಾರೆ. ಭರಪೂರ ಬೆಳೆದು ನಿಂತಿರುವ ಹೂವನ್ನು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಒಯ್ಯಲು ನೂರರಿಂದ ಇನ್ನೂರು ರುಪಾಯಿ ವಾಹನಕ್ಕೆ ಬಾಡಿಗೆ ಕೊಡಬೇಕು.
ಹಾವೇರಿ: ಕೊರೊನಾ ಎರಡನೇ ಅಲೆಯ ಆರ್ಭಟ ರಾಜ್ಯದಲ್ಲಿ ಮುಂದುವರೆದಿದೆ. ಜಿಲ್ಲೆಯಲ್ಲಿನ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಲಾಕ್ಡೌನ್ನಿಂದಾಗಿ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ಹೂವು ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಜಿಲ್ಲೆಯ ನಾಗನೂರು ಗ್ರಾಮದ ರೈತನೋರ್ವ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ಬೇಸತ್ತು ಸೇವಂತಿಗೆ ಹೂವಿನ ಬೆಳೆಯನ್ನೆ ನಾಶ ಮಾಡಿದ್ದಾರೆ. ರೈತ ಹೊಳಿಯಪ್ಪ ಸಂಗಾಪುರ ಒಂದು ಎರಕೆಯಲ್ಲಿ ಸೇವಂತಿಗೆ ಹೂವು ಬೆಳೆದಿದ್ದರು. ಸುಮಾರು ಇಪ್ಪತ್ತರಿಂದ ಮೂವತ್ತು ಸಾವಿರ ರುಪಾಯಿ ಹಣವನ್ನು ಖರ್ಚು ಮಾಡಿದ್ದರು. ರೈತ ಹೊಳಿಯಪ್ಪನ ನಿರೀಕ್ಷೆ ಮೀರಿ ಹೂವಿನ ಬೆಳೆ ಬಂಪರ್ ಆಗಿ ಬೆಳೆದಿತ್ತು. ಇನ್ನೇನು ಹೂವುಗಳನ್ನು ಕಟಾವು ಮಾಡಿ ಮಾರಾಟ ಮಾಡಿದರಾಯಿತು ಎಂದು ಯೋಚಿಸುವ ಹೊತ್ತಿಗೆ ಕೊರೊನಾ ಲಾಕ್ಡೌನ್ ಜಾರಿಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ, ಹೂವನ್ನು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಹೊಳಿಯಪ್ಪ ಟ್ರ್ಯಾಕ್ಟರ್ನಿಂದ ರೂಟರ್ ಹೊಡೆದು ಸೇವಂತಿಗೆ ಹೂವಿನ ಬೆಳೆಯನ್ನು ಸಂಪೂರ್ಣ ನಾಶ ಮಾಡಿದ್ದಾರೆ.
ಕೈ ಸೇರದ ಖರ್ಚು ರೈತ ಹೊಳಿಯಪ್ಪ ಒಂದು ಎಕರೆ ಸೇವಂತಿ ಹೂವು ಬೆಳೆಯಲು ಇಪ್ಪತ್ತರಿಂದ ಮೂವತ್ತು ಸಾವಿರ ರುಪಾಯಿ ಖರ್ಚು ಮಾಡಿದ್ದಾರೆ. ಭರಪೂರ ಬೆಳೆದು ನಿಂತಿರುವ ಹೂವನ್ನು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಒಯ್ಯಲು ನೂರರಿಂದ ಇನ್ನೂರು ರುಪಾಯಿ ವಾಹನಕ್ಕೆ ಬಾಡಿಗೆ ಕೊಡಬೇಕು. ಹೂವು ಕಟಾವು ಮಾಡಿ, ಬಾಡಿಗೆ ಕೊಟ್ಟು ಮಾರುಕಟ್ಟೆಗೆ ಹೂವು ತೆಗೆದುಕೊಂಡು ಹೋದರೆ ಅಲ್ಲಿ ಹತ್ತು ಕೆಜಿಗೆ 100 ರಿಂದ 200 ರೂ. ಸಿಗುತ್ತಿದೆ. ಇದರಿಂದ ಮಾಡಿದ ಖರ್ಚು ಕೈ ಸೇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 20 ರಿಂದ 30 ಸಾವಿರ ಖರ್ಚು ಮಾಡಿ ಸೇವಂತಿಗೆ ಹೂವು ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗುತ್ತಿಲ್ಲ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಒಂದೆರಡು ಬಾರಿ ಸರಿಯಾದ ಬೆಲೆ ಸಿಗದೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದ ಸೇವಂತಿಗೆ ಹೂವನ್ನು ಹಾಗೆ ಮಾರುಕಟ್ಟೆಯಲ್ಲಿ ಸುರಿದು ಬಂದಿದ್ದೇನೆ. ಪದೇ ಪದೇ ಆ ರೀತಿಯ ಪರಿಸ್ಥಿತಿ ಎದುರಾಗುವುದು ಬೇಡವೆಂದು ಬೇಸರದಿಂದಲೆ ಟ್ಯಾಕ್ಟರ್ನಿಂದ ರೂಟರ್ ಹೊಡೆದು ಬೆಳೆ ನಾಶ ಮಾಡುತ್ತಿದ್ದೇನೆ ಎಂದು ರೈತ ಹೊಳಿಯಪ್ಪ ಅಳಲು ತೋಡಿಕೊಂಡಿದ್ದಾರೆ.
ಈರುಳ್ಳಿ ಬೆಳೆಗಾರರಿಗೆ ಕಂಗಾಲು ಚಿತ್ರದುರ್ಗ: ರಾಜ್ಯದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಯಲ್ಲಿ ಲಾಕ್ಡೌನ್ನಿಂದ ತೀವ್ರ ನಷ್ಟವಾಗಿದೆ. ದೂರದ ನಗರ ಪ್ರದೇಶಗಳಿಗೆ ಈರುಳ್ಳಿ ಸರಬರಾಜು ಸಾಧ್ಯವಾಗುತ್ತಿಲ್ಲ. ಈರುಳ್ಳಿ ಖರೀದಿದಾರರು ಸ್ಥಳಕ್ಕೆ ಬಂದು ಖರೀದಿ ಮಾಡಲು ಆಗುತ್ತಿಲ್ಲ. ಹೀಗಾಗಿ ಬಹುತೇಕ ಕಡೆ ರೈತರು ಬೆವರು ಸುರಿಸಿ ಬೆಳೆದ ಈರುಳ್ಳಿ ಜಮೀನುಗಳಲ್ಲೇ ಕೊಳೆಯುವಂತಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಈರುಳ್ಳಿ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂಬುದು ರೈತರು ಆಗ್ರಹಿಸುತ್ತಿದ್ದಾರೆ.
ರೈತರು ಈರುಳ್ಳಿ ಬೆಳೆಯಲು ಎಕರೆಗೆ ಸುಮಾರು 45-50 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಎಕರೆಗೆ ಸುಮಾರು 150 ಕ್ವಿಂಟಲ್ ಈರುಳ್ಳಿ ಬೆಳೆಯುತ್ತಾರೆ. ಈವರೆಗೆ ಕ್ವಿಂಟಲ್ ಈರುಳ್ಳಿಗೆ 2,000 ರಿಂದ 2,500 ಇದ್ದ ಈರುಳ್ಳಿ ಬೆಲೆ ಕೊರೊನಾ ಲಾಕ್ಡೌನ್ ಪರಿಣಾಮ 1,000 ರೂಪಾಯಿಗೆ ಇಳಿದಿದೆ. ಅಂತೆಯೇ ಕೊಳ್ಳುವವರಿಲ್ಲದೆ ಈರುಳ್ಳಿ ಜಮೀನಿನಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣ ಆಗಿದೆ. ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಗ್ರಾಮಕ್ಕೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ ರೇಣುಕಾಚಾರ್ಯ
ದಾವಣಗೆರೆಯಲ್ಲಿ ಕೊರೊನಾ ಸೋಂಕಿತೆಯರಿಬ್ಬರು ಕೊವಿಡ್ ಕೇಂದ್ರದಿಂದ ಪರಾರಿ; ಪ್ರೀತಿಸಿದವರ ಜೊತೆ ಓಡಿ ಹೋಗಿರುವ ಶಂಕೆ
(farmer destroyed chrysanthemum crop without a good price from corona lockdown at haveri)