ನಟಿ ಪ್ರೀತಿ ಜಿಂಟಾ ಮಾಡಿದರು ಜಗ ಮೆಚ್ಚುವ ಕಾರ್ಯ, ಭೇಷ್ ಎಂದ ಅಭಿಮಾನಿಗಳು
Preity Zinta: ನಟಿ ಪ್ರೀತಿ ಜಿಂಟಾ ವಿರುದ್ಧ ಕೆಲ ವಾರಗಳ ಹಿಂದಷ್ಟೆ ಆರ್ಥಿಕ ಅಪರಾಧದ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಅದಕ್ಕೆ ದಿಟ್ಟ ಉತ್ತರವನ್ನೇ ನಟಿ ಪ್ರೀತಿ ಜಿಂಟಾ ನೀಡಿದ್ದರು. ಆ ಸಮಯದಲ್ಲಿ ಪ್ರೀತಿ ಜಿಂಟಾ ಬಗ್ಗೆ ಪರ ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದವು. ಇದೀಗ ಪ್ರೀತಿ ಜಿಂಟಾ ಮಾಡಿರುವ ಕಾರ್ಯವನ್ನು ದೇಶವೇ ಮೆಚ್ಚಿಕೊಂಡಿದೆ.

ನಟಿ ಪ್ರೀತಿ ಜಿಂಟಾ (Preity Zinta) ಕೆಲ ದಿನಗಳ ಹಿಂದೆ ನೆಗೆಟಿವ್ ಕಾರಣಕ್ಕೆ ಸುದ್ದಿಯಲ್ಲಿದ್ದರು. ಕೇರಳ ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಿಂದ ಪ್ರಕಟವಾಗಿದ್ದ ಟ್ವೀಟ್ನಲ್ಲಿ ಪ್ರೀತಿ ಜಿಂಟಾ ವಿರುದ್ಧ ಆರೋಪ ಮಾಡಲಾಗಿತ್ತು. ಪ್ರೀತಿ ಜಿಂಟಾ ನ್ಯೂ ಇಂಡಿಯಾ ಕೋಪರೇಟಿವ್ ಬ್ಯಾಂಕ್ನಲ್ಲಿ 18 ಕೋಟಿ ಸಾಲ ಪಡೆದಿದ್ದು ಆ ಸಾಲ ಮನ್ನಾ ಆಗಿದೆ ಎಂದು ಆರೋಪಿಸಲಾಗಿತ್ತು. ಆರೋಪದ ಬಳಿಕ ಪ್ರೀತಿ ಜಿಂಟಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳು ಹರಿದಾಡಿದ್ದವು. ಆದರೆ ಇದೀಗ ನಟಿ ಪ್ರೀತಿ ಜಿಂಟಾ ಮಾಡಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಎಲ್ಲ ನಟಿಯರು ಪ್ರೀತಿ ಜಿಂಟಾ ಅವರನ್ನು ಮಾದರಿಯಾಗಿ ಪರಿಗಣಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
ಪ್ರೀತಿ ಜಿಂಟಾ, 1.10 ಕೋಟಿ ರೂಪಾಯಿಗಳನ್ನು ಭಾರತೀಯ ಸೈನಿಕರ ವಿಧವೆ ಪತ್ನಿಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ನ ಸಹ ಮಾಲಕಿಯೂ ಆಗಿರುವ ಪ್ರೀತಿ ಜಿಂಟಾ, ಪಂಜಾಬ್ ಕಿಂಗ್ಸ್ನ ಸಿಎಸ್ಆರ್ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಫಂಡ್ ಮೂಲಕ 1.10 ಕೋಟಿ ರೂಪಾಯಿ ಹಣವನ್ನು ಸೈನಿಕರ ವಿಧವೆ ಮತ್ತು ಮಕ್ಕಳ ಕಲ್ಯಾಣಕ್ಕೆಂದು ನೀಡಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಆರ್ಮಿಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಪ್ರೀತಿ ಜಿಂಟಾ ನಮ್ಮ ಸೈನಿಕರ ಧೈರ್ಯಶಾಲಿ ಕುಟುಂಬಗಳನ್ನು ಬೆಂಬಲಿಸುವುದು ಗೌರವ ಮತ್ತು ಜವಾಬ್ದಾರಿ ಎರಡೂ ಆಗಿದೆ. ನಮ್ಮ ಸಶಸ್ತ್ರ ಪಡೆಗಳು ಮಾಡಿದ ತ್ಯಾಗಗಳನ್ನು ನಾವು ಎಂದಿಗೂ ಸಂಪೂರ್ಣವಾಗಿ ಮರುಪಾವತಿಸಲು ಸಾಧ್ಯವಾಗದಿದ್ದರೂ, ನಾವು ಅವರ ಕುಟುಂಬಗಳ ಜೊತೆಗೆ ನಿಂತು ಅವರ ಪ್ರಗತಿಗೆ ಸಹಾಯ ಮಾಡಬಹುದು ಅಷ್ಟೆ, ಆ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ’ ಎಂದಿದ್ದಾರೆ.
ಇದನ್ನೂ ಓದಿ:ಮೊದಲ ಪ್ರೀತಿ ಕಾರು ಅಪಘಾತದಲ್ಲಿ ಸತ್ತು ಹೋಯಿತು; ಪ್ರೀತಿ ಜಿಂಟಾ ಭಾವುಕ ಪೋಸ್ಟ್
2009 ರ ವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಪ್ರೀತಿ ಜಿಂಟಾ ಆ ಬಳಿಕ ಚಿತ್ರರಂಗದಿಂದ ಮರೆ ಆದರು. ಬಳಿಕ 2014 ರಲ್ಲಿ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿ ಮಾತ್ರ ನಟಿಸಿದರು. 2018 ರಲ್ಲಿ ಎರಡು ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ಬಾಲಿವುಡ್ಗೆ ಕಮ್ ಬ್ಯಾಕ್ ಮಾಡುವ ಸಿದ್ಧತೆಯಲ್ಲಿರುವ ನಟಿ ‘ಲಾಹೋರ್ 1947’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಸಿನಿಮಾನಲ್ಲಿ ಸನ್ನಿ ಡಿಯೋಲ್ ನಾಯಕ, ಆಮಿರ್ ಖಾನ್ ನಿರ್ಮಾಪಕ.
ಕೆಲ ವಾರಗಳ ಹಿಂದೆ ಸಹ ನಟಿಯ ಬಗ್ಗೆ ಹಣಕಾಸು ವಂಚನೆ ಆರೋಪ ಮಾಡಲಾಗಿತ್ತು. ನ್ಯೂ ಇಂಡಿಯನ್ ಕಾರ್ಪೊರೇಷನ್ ಬ್ಯಾಂಕಿನಲ್ಲಿ ಪ್ರೀತಿ ಜಿಂಟಾ ಪಡೆದಿದ್ದ 18 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಕೇರಳ ಕಾಂಗ್ರೆಸ್ ಆರೋಪಿಸಿತ್ತು. ಆದರೆ ಆರೋಪಕ್ಕೆ ದಿಟ್ಟ ಉತ್ತರ ನೀಡಿದ್ದ ಪ್ರೀತಿ ಜಿಂಟಾ, ತಾವು ಆ ಸಾಲವನ್ನು ಸ್ವಂತ ದುಡಿಮೆಯಿಂದ ಬಡ್ಡಿ ಸಮೇತ ತೀರಿಸಿರುವುದಾಗಿ ಹೇಳಿದ್ದರು. ಅದೂ ಹತ್ತು ವರ್ಷಗಳ ಹಿಂದೆ. ಪ್ರೀತಿ ಜಿಂಟಾ ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಸಮಯದಲ್ಲಿಯೂ ಸೈನಿಕರ ಪರಾಕ್ರಮದ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




