Bidar News: ಮನೆಗೆ ಕರೆಸಿಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಪ್ರಿನ್ಸಿಪಾಲ್ ಅರೆಸ್ಟ್

|

Updated on: Jul 24, 2023 | 8:11 AM

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಬೀದರ್ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

Bidar News: ಮನೆಗೆ ಕರೆಸಿಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಪ್ರಿನ್ಸಿಪಾಲ್ ಅರೆಸ್ಟ್
ಪ್ರಿನ್ಸಿಪಾಲ್​ ನಾಗಶೆಟ್ಟಿ ಕುಲಕರ್ಣಿ
Follow us on

ಬೀದರ್, (ಜುಲೈ 24): ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ(sexual harassment) ನೀಡಿದ ಆರೋಪದ ಮೇಲೆ ಬೀದರ್(Bidar)  ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಕೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (morarji desai school) ಪ್ರಿನ್ಸಿಪಾಲ್​ನನ್ನು ಪೊಲೀಸರು ಬಂಧಿಸಿದ್ದಾರೆ. 13 ರಿಂದ 15 ವರ್ಷದ ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ(sexual harassment) ನೀಡಿದ ಆರೋಪದ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರು ತಿಂಗಳ ಹಿಂದೆ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದ ವಸತಿ ಶಾಲೆ ಪ್ರಿನ್ಸಿಪಾಲ್​ ನಾಗಶೆಟ್ಟಿ ಕುಲಕರ್ಣಿ, ಜುಲೈ 7 ರಂದು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಾಲ್ವರು ವಿದ್ಯಾರ್ಥಿನಿಯರು ಜುಲೈ 20ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಚಿಟಗುಪ್ಪ ಪೊಲೀಸರು ಪೋಕ್ಸೊ ಪ್ರಕರಣದಡಿ ನಾಗಶೆಟ್ಟಿ ಕುಲಕರ್ಣಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bidar: ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ, ವಿದ್ಯಾರ್ಥಿನಿಯರಿಂದ ದೂರು.

ಜುಲೈ 7 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಬಾಲಕಿಗೆ ಸ್ವೀಟ್ ಕೊಡುವ ನೆಪದಲ್ಲಿ ನಾಲ್ವರು ವಿದ್ಯಾರ್ಥಿನಿಯರನ್ನು ನಾಗಶೆಟ್ಟಿ ಕುಲಕರ್ಣಿ ತನ್ನ ಮನೆಗೆ ಕರೆಯಿಸಿಕೊಂಡು ಅನುಚಿತವಾಗಿ ವರ್ತಿಸಿದ್ದಾನೆ. ಇನ್ನು ಹುಡುಗಿಯೊಬ್ಬಳ ಕೈ ಹಿಡಿದುಕೊಂಡು ಅವಳನ್ನು ಚುಂಬಿಸಿದ್ದಾನೆ ಎಂದು ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಟಗುಪ್ಪ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ ಜಿ ಪಾಟೀಲ್, ವಿದ್ಯಾರ್ಥಿನಿಯರ ದೂರಿನ ಮೇರೆಗೆ ಪ್ರಿನ್ಸಿಪಾಲ್​ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಶುಕ್ರವಾರ ಚಿಟಗುಪ್ಪದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ಹೇಳಿದರು.

ಇನ್ನು ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸಮಗ್ರ ತನಿಖೆ ನಡೆಸಲು ಐವರು ಮಹಿಳಾ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದರು. ಅದರಂತೆ ಪೊಲೀಸ್ ತಂಡವು ಜುಲೈ 20 ರಂದು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡು ಸಮಗ್ರ ವರದಿಯನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನಷ್ಟು ಬೀದರ್ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ