
ಬೆಂಗಳೂರು: ರಾಜ್ಯಸಭೆಗೆ ಸೀಟು ಗಿಟ್ಟಿಸಲು ಸಿಎಂ ಮನೆಯ ಬಾಗಿಲು ತಟ್ಟಿದ್ರು. ಬಂಡಾಯ ಎದ್ದರು. ಆದ್ರೆ, ಆಕಾಂಕ್ಷಿಗಳು ಮಾತ್ರ ಹೈಕಮಾಂಡ್ ಕಳಿಸಿದ ಲಿಸ್ಟ್ ನೋಡಿ ಬೇಸ್ತು ಬಿದ್ದಿದ್ರು. ತುಟಿ ಬಿಚ್ಚದಂತೆ ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಾಗಿಬಿಟ್ರು. ಈ ಬೆಂಕಿ ಇನ್ನೂ ಹೊಗೆಯಾಡುತ್ತಿರುವಾಗ್ಲೇ ಮತ್ತೊಂದು ಮೇಲ್ಮನೆ ಮೇಲಾಟ ಶುರುವಾಗಿದೆ.
ಸರ್ಕಾರ ಕೆಡವಿ ಅನರ್ಹ ಶಾಸಕರಾಗಿ ಉಪಚುನಾವಣೆಯಲ್ಲಿ ಸೋತವರಿಗೆ ಸಿಎಂ ಬಿಎಸ್‌ವೈ ಎಂಎಲ್‌ಸಿ ಮಾಡೋದಾಗಿ ಮಾತುಕೊಟ್ಟಿದ್ರು. ತಾವೇ ಹಲವು ಬಾರಿ ಕೊಟ್ಟ ಮಾತು ಉಳಿಸಿಕೊಳ್ತೀನಿ ಅಂದ್ರು. ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್, ಚುನಾವಣಾ ಕಣದಿಂದಲೇ ದೂರ ಉಳಿದ ಆರ್.ಶಂಕರ್, ಯಡಿಯೂರಪ್ಪನವ್ರ ಇದೇ ಮಾತನ್ನ ನಂಬಿ ಓಡಾಡುತ್ತಿದ್ದರು. ಆದ್ರೀಗ, ಅವರಲ್ಲೇ ಭೀತಿ ಶುರುವಾಗಿದೆ.
ಎಂಟಿಬಿ, ಶಂಕರ್, ವಿಶ್ವನಾಥ್‌ಗೆ ಶುರುವಾಯ್ತು ಡವಡವ!
ರಾಜ್ಯಸಭೆ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್ ಕೊಟ್ಟ ಶಾಕ್‌ನಿಂದ ಖುದ್ದು ಯಡಿಯೂರಪ್ಪನವ್ರೇ ಹೊರಬಂದಿಲ್ಲ. ಆದ್ರೆ, ಅಷ್ಟರಲ್ಲೇ ಸಿಎಂ ಗೃಹಕಚೇರಿ ಕೃಷ್ಣಾಗೆ ರಮೇಶ್ ಜಾರಕಿಹೊಳಿ ಜೊತೆ ದೌಡಾಯಿಸಿದ ಎಂಟಿಬಿ ನಾಗರಾಜ್, ಸಿಎಂ ಜೊತೆ ಕೆಲಕಾಲ ಚರ್ಚಿಸಿದ್ರು.
‘ಅನರ್ಹ’ ಶಾಸಕರಿಗೆ ಡವಡವ!
ಖಾಲಿಯಾಗುವ ಏಳು ಸ್ಥಾನಗಳಲ್ಲಿ ಬಿಜೆಪಿಯ 4 ಸ್ಥಾನಗಳಿಗೆ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇವರೆಲ್ಲರಿಗೂ ಈಗ ರಾಜ್ಯಸಭೆ ಆಯ್ಕೆ ಮಾದರಿ ನೋಡಿ ಆತಂಕ ಶುರುವಾಗಿದೆ. ಒಬ್ಬರು ಸವಿತಾ ಸಮಾಜ ಮತ್ತೊಬ್ಬರು ಲಿಂಗಾಯತ ಪಂಚಮಸಾಲಿ ಜಾತಿಗೆ ಟಿಕೆಟ್ ನೀಡಿತ್ತು. ಈ ಜಾತಿವಾರು ಲೆಕ್ಕಾಚಾರ ನೋಡಿದ್ರೆ ಅನರ್ಹ ಶಾಸಕರಿಗೆ ಟಿಕೆಟ್ ಸಿಗೋದು ಡೌಟು.
ಎಂಟಿಬಿ, ಆರ್.ಶಂಕರ್ ಮತ್ತು ವಿಶ್ವನಾಥ್ ಮೂವರು ಒಂದೇ ಸಮುದಾಯದವರು. ಹೀಗಾಗಿ, ಒಂದೇ ಸಮುದಾಯಕ್ಕೆ ಟಿಕೆಟ್ ನೀಡ್ತಾರಾ ಅನ್ನೋ ಭಯ ಶುರುವಾಗಿದೆ. ಇನ್ನು, ರಾಜ್ಯಸಭೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನ ಪರಿಗಣಿಸಿರೋದ್ರಿಂದ ಪರಿಷತ್‌ನಲ್ಲೂ ಬಿಜೆಪಿ ಜಿಲ್ಲಾ ನಾಯಕರಿಗೆ ಆಸೆ ಚಿಗುರೊಡೆದಿದೆ. ಆದ್ರೂ, ಬಹಿರಂಗವಾಗಿ ಲಾಬಿ ಮಾಡಿದ್ರೆ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಭಯವಿದೆ.
ಈಗಾಗ್ಲೇ, ಕತ್ತಿ ಬ್ರದರ್ಸ್ ಊಟದ ಕೂಟ ಸೇರಿಸಿದ್ದೇ ಮುಳುವಾಯ್ತು ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರ್ತಿದೆ. ಹೀಗಾಗಿ, ಯಾರೂ ಬಹಿರಂಗವಾಗಿ ಆಕಾಂಕ್ಷೆ ಹೇಳಿಕೊಳ್ಳುವ ಗೋಜಿಗೆ ಮುಂದಾಗಿಲ್ಲ. ಹೆಚ್ಚು ಪ್ರಚಾರ ತಗೆದುಕೊಳ್ಳದೇ ಒಳಗೊಳಗೆ ಯಾವ್ಯಾವ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಬೇಕೋ ಆ ಕೆಲಸವನ್ನು ಆಕಾಂಕ್ಷಿಗಳು ಅಚ್ಚುಕಟ್ಟಾಗಿ ಮಾಡ್ತಿದ್ದಾರೆ. ಲಿಂಗಾಯತ ಮುಖಂಡ ಪರಮಶಿವಯ್ಯ, ಸ್ವಾಮೀಜಿಗಳನ್ನ ಕರೆತಂದು ಸಿಎಂ ಬಳಿ ಲಾಬಿ ಮಾಡುವ ಯತ್ನ ಮಾಡಿದ್ರು.
ಒಟ್ಟಿನಲ್ಲಿ, ರಾಜ್ಯಸಭೆಯಂತೆಯೇ ವಿಧಾನಪರಿಷತ್‌ನಲ್ಲೂ ಮತ್ತೊಮ್ಮೆ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತಾ. ನಮ್ಮದು ಕಾರ್ಯಕರ್ತರ ಕೇಂದ್ರಿತ ಪಕ್ಷ ಅಂತ ಬಿಜೆಪಿ ಸಂದೇಶ ನೀಡುತ್ತಾ ಅನ್ನೋದು ಸದ್ಯದ ಕುತೂಹಲ.
Published On - 7:29 am, Thu, 11 June 20