ಅಮಿತ್ ಮಾಳವೀಯ ಪರ ಕರ್ನಾಟಕ ಹೈಕೋರ್ಟ್​​ನಲ್ಲಿ ವಾದ ಮಂಡಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

|

Updated on: Jul 19, 2023 | 7:41 PM

ಅಮಿತ್ ಮಾಳವೀಯ ವಿರುದ್ಧ ಕಾಂಗ್ರೆಸ್ ನಾಯಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ದೂರು ದಾಖಲಿಸಿದ್ದರು. ಇದರ ಅನ್ವಯ ಸೆಕ್ಷನ್ 153 ಎ ಅಡಿಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಅಮಿತ್ ಮಾಳವೀಯ ಪರ ಕರ್ನಾಟಕ ಹೈಕೋರ್ಟ್​​ನಲ್ಲಿ ವಾದ ಮಂಡಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
Image Credit source: ANI
Follow us on

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪಕ್ಷದ ಸಂಸದ, ವಕೀಲರೂ ಆಗಿರುವ ತೇಜಸ್ವಿ ಸೂರ್ಯ (Tejasvi Surya) ಅವರು ಕರ್ನಾಟಕ ಹೈಕೋರ್ಟ್​​ನಲ್ಲಿ ಬುಧವಾರ ವಿಚಾರಣೆಗೆ ಹಾಜರಾದರು. ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದು, ತೇಜಸ್ವಿ ಸೂರ್ಯ ವಾದ ಮಂಡಿಸಿದರು.

ದೇಶದ ಜನರ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವಂಥ ಟ್ವೀಟ್​​ ಅನ್ನು ಮಾಳವೀಯ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಮಾಳವಿಯಾ ವಿರುದ್ಧ ಆರೋಪಿಸಲಾದ ಅಂಶಗಳು ಭಾರತೀಯ ದಂಡಸಂಹಿತೆಯ 153(A) & 505(2) ರ ಅಡಿ ಪ್ರಕರಣ ದಾಖಲಿಸಿಕೊಳ್ಳುವ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್ ಪರಿಗಣಿಸಿದೆ. ಹೀಗಾಗಿ ಮುಂದಿನ ತನಿಖೆ ಮತ್ತು ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿದೆ. ಈ ವಿಚಾರವಾಗಿ ತೇಜಸ್ವಿ ಸೂರ್ಯ ‘ಎಎನ್​​ಐ’ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.


ಮಾಳವಿಯ ಅವರು ಜೂನ್ 17 ರಂದು ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯವರ ವೀಡಿಯೊವೊಂದನ್ನು ಟ್ವೀಟ್ ಮಾಡಿದ್ದರು. ಕೋಮು ಸೌಹಾರ್ದತೆ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಅವರ ಕುರಿತಾದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ನಾಯಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ದೂರು ದಾಖಲಿಸಿದ್ದರು. ಇದರ ಅನ್ವಯ ಸೆಕ್ಷನ್ 153 ಎ ಅಡಿಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬಿಜೆಪಿ ನಾಯಕ ಅಮಿತ್​ ಮಾಳವಿಯ ಟ್ವೀಟ್​ಗೆ manipulated media ಲೇಬಲ್ ಅಂಟಿಸಿದ ಟ್ವಿಟರ್!

ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸೂರ್ಯ, ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರಾಜಕೀಯ ಪ್ರೇರಿತವಾಗಿದೆ. ರಾಹುಲ್ ಗಾಂಧಿ ವಿರುದ್ಧ ಅವರು ಹೇಳಿಕೆ ನೀಡಿದ್ದಕ್ಕಾಗಿ ಐಪಿಸಿ 153 ಎ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇಲಿನ ಎರಡೂ ಸೆಕ್ಷನ್‌ಗಳು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಬಗ್ಗೆ ವ್ಯವಹರಿಸುತ್ತದೆ. ಹಾಗಾದರೆ, ರಾಹುಲ್ ಗಾಂಧಿ ಎಂದರೇನು? ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಅಥವಾ ಒಂದು ವರ್ಗವೇ? ನಾವು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಮತ್ತು ನಮಗೆ ನ್ಯಾಯ ದೊರೆಯಲಿದೆ ಎಂದು ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ