ಶಾಂಗ್ರಿಲಾ ಹೋಟೆಲ್‌ನಲ್ಲಿ ATM ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ಫೋಟೋ ಸಮೇತ ಪ್ರಶ್ನಿಸಿದ ಬಿಜೆಪಿ

|

Updated on: Jun 13, 2023 | 6:17 PM

ಬಿಬಿಎಂಪಿ ಚುನಾವಣೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿರುವ ಬಗ್ಗೆ ಬಿಜೆಪಿ ಪ್ರಶ್ನಿಸಿದೆ.

ಶಾಂಗ್ರಿಲಾ ಹೋಟೆಲ್‌ನಲ್ಲಿ ATM ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ಫೋಟೋ ಸಮೇತ ಪ್ರಶ್ನಿಸಿದ ಬಿಜೆಪಿ
Follow us on

ಬೆಂಗಳೂರು: ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ(Lokasabha Elections 2024) 20 ಸ್ಥಾನಗಳನ್ನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್‌ (Congress) ಹಲವು ತಂತ್ರಗಾರಿಕೆಯ ಜೊತೆಗೆ ಸಚಿವರ ಹೆಗಲಿಗೆ ಲೋಕಸಭಾ ಚುನಾವಣಾ ಜವಾಬ್ಧಾರಿಯನ್ನ ನೀಡಿದೆ. ಅದಕ್ಕೂ ಮುನ್ನವೇ ಬಿಬಿಎಂಪಿ ಚುನಾವಣೆಯನ್ನ(BBMP Elections) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲಾ ನೇತೃತ್ವದಲ್ಲಿ ಚುನಾವಣಾ ಪೂರ್ವ ಸಿದ್ದತೆಗಳ ಕುರಿತಾಗಿ ಚರ್ಚೆ ನಡೆಯಿತು. ಇನ್ನು ಈ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸಹ ಪಾಲ್ಗೊಂಡಿರುವುದಕ್ಕೆ ಬಿಜೆಪಿ(BJP) ಕೆಂಡಾಮಂಡಲವಾಗಿದೆ.

ಹೌದು.. ಬಿಬಿಎಂಪಿ ಚುನಾವಣೆ ತಯಾರಿ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಉಪಸ್ಥಿತಿಗೆ ಬಿಜೆಪಿ ಕಿಡಿಕಾರಿದೆ. ಟ್ವೀಟ್​ ಮೂಲಕ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿರುವ ಬಿಜೆಪಿ, ಶಾಂಗ್ರಿಲಾ ಹೋಟೆಲ್‌ನಲ್ಲಿ ATM ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ಸರ್ಕಾರದೊಟ್ಟಿಗಾಗಲಿ, BBMP ಒಟ್ಟಿಗಾಗಲಿ ಸುರ್ಜೇವಾಲಗೆ ಸಂಬಂಧವಿಲ್ಲ. ರಣದೀಪ್​​ ಸುರ್ಜೇವಾಲಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ? ಎಂದು ಪ್ರಶ್ನಿಸಿದೆ.


ಯಾವುದೇ ಅಧಿಕೃತ ಸಂಬಂಧವಿಲ್ಲದ ಸುರ್ಜೇವಾಲರಿಗೆ ಏನು ಕೆಲಸ? ಇದು 85% ಡೀಲ್‌ ಫಿಕ್ಸಿಂಗ್ ಸಭೆಯೇ ಎಂದು ರಾಜ್ಯ ಬಿಜೆಪಿ ಟಾಂಗ್​​ ನೀಡಿದ್ದು, ಈ ಬಗ್ಗೆ ಉತ್ತರಿಸಿ ಮಾನ್ಯ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರವರೇ ಎಂದು ಬಿಜೆಪಿ ಟ್ವೀಟ್ ಮೂಲಕ ಆಗ್ರಹಿಸಿದೆ.