ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಪ್ರದಾನ ಮಾಡಿದ ಬಸವಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಪತ್ರಕರ್ತ ಪಿ.ಸಾಯಿನಾಥ್ ಅವರು ನಿರ್ಧರಿಸಿದ್ದಾರೆ. ಡಾ.ಶಿವಮೂರ್ತಿ ಸ್ವಾಮೀಜಿ ಅವರು ಬಂಧಿತರಾಗಿರುವ ಹಿನ್ನೆಲೆ ಪ್ರಶಸ್ತಿಯನ್ನು ಹಿಂದಿರುಗಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸಾಯಿನಾಥ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಪ್ರತಿವರ್ಷ ಮಠದದಿಂದ ಕೊಡಮಾಡಲ್ಪಡುವ ಬಸವಶ್ರೀ ಪ್ರಶಸ್ತಿಗೆ 2017ರಲ್ಲಿ ಸಾಯಿನಾಥ್ ಅವರು ಆಯ್ಕೆಗೊಂಡಿದ್ದರು. ಅದರಂತೆ ಅಕ್ಟೋಬರ್ 25ರಂದು ಶ್ರೀಗಳು ಪ್ರಶಸ್ತಿ ಪ್ರದಾನ ಮಾಡಿದ್ದರು. ಪ್ರಶಸ್ತಿಯೊಂದಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿತ್ತು. ಸದ್ಯ ಶ್ರೀಗಳು ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಹಿನ್ನೆಲೆ ಅವರಿಂದ ಪಡೆದ ಬಸವಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ನೀಡಿದ್ದ 5 ಲಕ್ಷ ರೂಪಾಯಿ ನಗದು ಕೂಡ ವಾಪಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಶ್ರೀ ಬೆಲ್ದಾಳ ಶರಣರು, ಹಿರೇಮಲ್ಲೂರ ಈಶ್ವರನ್, ಡಾ.ಎಚ್.ಸುದರ್ಶನ, ಡಾ.ವಂದನಾ ಶಿವ, ಸುಭಾಷ ಪಾಳೇಕಾರ, ಎ.ಟಿ.ಆರ್ಯರತ್ನ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಶಂಕರ ಬಿದರಿ, ನಾರಾಯಣಮೂರ್ತಿ, ಮಲಾಲಾ ಯುಸೂಫ್ ಝ, ಜಿ.ವೆಂಕಟಸುಬ್ಬಯ್ಯ, ಪಿ.ಸಾಯಿನಾಥ, ಕಾಮೇಗೌಡ, ಚಂದ್ರಶೇಖರ ಪಾಟೀಲ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಬಾನಾ ಆಜ್ಮಿ, ದಲೈಲಾಮಾ, ಬಲ್ಲಾದೀರ್ ಗದ್ದರ್, ಪಿ.ಟಿ ಉಷಾ ಅವರಿಗೆ ಬಸವಶ್ರೀ ಪ್ರಶಸ್ತಿ ಸಂದಿದೆ. 2021ರಲ್ಲಿ ನಟ ಡಾ.ಪುನೀತ್ ರಾಜ್ಕುಮಾರ್ ಅವರಿಗೂ ನೀಡಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Fri, 2 September 22