ಮಾರ್ಚ್ 8ರಂದು ರಾಜ್ಯದ ಬಜೆಟ್ ಮಂಡನೆ.. ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

|

Updated on: Mar 04, 2021 | 6:49 AM

Karnataka Budget 2021| ಮಾರ್ಚ್‌ 8ರಂದು ರಾಜ್ಯದ ಬಜೆಟ್‌ ಮಂಡನೆಯಾಗಲಿದೆ. ನಾಲ್ಕು ದಿನಗಳಷ್ಟೇ ಬಾಕಿ ಇರೋ ಕಾರಣ ಸಿಎಂ ಯಡಿಯೂರಪ್ಪ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಮಾರ್ಚ್ 8ರಂದು ರಾಜ್ಯದ ಬಜೆಟ್ ಮಂಡನೆ.. ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ವಿಧಾನಸೌಧ
Follow us on

ಬೆಂಗಳೂರು: ಮಾರ್ಚ್ 8ರಂದು ರಾಜ್ಯದ ಬಜೆಟ್‌ ಮಂಡನೆಯಾಗಲಿದೆ. ಹೀಗಾಗಿ ಇಂದಿನಿಂದ ಬಜೆಟ್ ಅಧಿವೇಶನ ಕೂಡ ಆರಂಭವಾಗ್ತಿದೆ. ಆದ್ರೆ, ಬಜೆಟ್‌ ಮಂಡಿಸಲು ಹೊರಟಿರೋ ಸಿಎಂ ಯಡಿಯೂರಪ್ಪ ಕಳೆದೊಂದು ತಿಂಗಳಿನಿಂದ ಪೂರ್ವ ಸಿದ್ಧತಾ ಸಭೆಗಳಲ್ಲಿ ತೊಡಗಿಕೊಂಡಿದ್ರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂದಷ್ಟ ಎದುರಾಗಿದೆ. ಹೀಗಾಗಿ ಬಜೆಟ್‌ ಗಾತ್ರದಲ್ಲಿ ಕಡಿತ ಮಾಡೋದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಫೆಬ್ರವರಿ 8ರಿಂದು ಆರಂಭವಾದ ಪೂರ್ವ ಸಿದ್ಧತಾ ಸಭೆಗಳು ಮುಕ್ತಾಯಗೊಂಡಿದ್ದು, ಈಗ ಅಂತಿಮ ಹಂತದ ಸಿದ್ಧತೆಯಷ್ಟೇ ನಡೆಯುತ್ತಿದೆ. ಇನ್ನು 2 ಸಭೆಗಳಷ್ಟೇ ಬಾಕಿ ಉಳಿದಿದ್ದು, ಬಜೆಟ್ ಮಂಡನೆಗೆ ಕೇವಲ 4 ದಿನಗಳಷ್ಟೇ ಬಾಕಿ ಉಳಿದಿವೆ.

ಹಿಂದಿನ ಸರ್ಕಾರದ ಯೋಜನೆಗಳ ಮುಂದುವರಿಕೆ ಇಲ್ಲ
ಇನ್ನು, ಹಿಂದಿನ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನ ಮುಂದುವರಿಸೋ ಸಂಪ್ರದಾಯಕ್ಕೆ ಈ ಬಾರಿ ಯಡಿಯೂರಪ್ಪ ಬ್ರೇಕ್ ಹಾಕೋ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ಕೆಲ ಯೋಜನೆಗಳಿಗೆ ಕೊಕ್ ನೀಡೋ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಬಿಎಸ್‌ವೈ ಸುಳಿವನ್ನೂ ಕೊಟ್ಟಿದ್ದಾರೆ.

ಅನ್ನದಾತರ ಜೊತೆ ಮೀಟಿಂಗ್ ಮಾಡದ ಸಿಎಂ
ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಪ್ರತಿ ವರ್ಷವೂ ಬಜೆಟ್‌ ಪೂರ್ವ ಸಿದ್ಧತಾ ಸಭೆಗಳಲ್ಲಿ ರೈತ ಮುಖಂಡರ ಜತೆ ಪ್ರತ್ಯೇಕ ಸಭೆಗಳನ್ನ ಮಾಡೋದು ಸಂಪ್ರದಾಯ. ಆದ್ರೆ ಈ ಬಾರಿ ಸಮಯಾವಕಾಶದ ಕಾರಣ ಮುಂದಿಟ್ಟು ಸಿಎಂ, ರೈತ ಪ್ರತಿನಿಧಿಗಳ ಜೊತೆಗಿನ ಸಭೆಯನ್ನೇ ಕೈಬಿಟ್ಟಿದ್ದಾರೆ. ಬದಲಾಗಿ ರೈತರ ಹಿತಾಸಕ್ತಿಗಳನ್ನ ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಪೂರಕ ಆಯವ್ಯಯದ ಭರವಸೆ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿದೆ.

ಈ ಮಧ್ಯೆ ಎಲ್ಲಾ ಇಲಾಖೆಗಳ ಜೊತೆಗೂ ಸಿಎಂ ಬಜೆಟ್‌ ಮೀಟಿಂಗ್‌ ಮಾಡಿದ್ದಾರೆ. ಆದ್ರೆ ಇಲಾಖಾವಾರು ಅನುದಾನ ಹಂಚಿಕೆ ಮಾಡೋದು ಮಾತ್ರ ದೌಟ್. ಕೊವಿಡ್ ಸಂಕಷ್ಟದ ಕಾರಣದಿಂದಾಗಿ ಬಜೆಟ್‌ ಗಾತ್ರವನ್ನ ಕಡಿಮೆ ಮಾಡೋದು ನಿಶ್ಚಿತವಾಗಿದೆ ಅಂತ ಹೇಳಲಾಗ್ತಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆ.

ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಇನ್ನು ಇಂದಿನಿಂದ ಮಾ.31ರವರೆಗೆ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ಅಧಿವೇಶನ ನಡೆಯುವ ದಿನಗಳಂದು ನಿಷೇಧಾಜ್ಞೆ ಜಾರಿಯಾಗಲಿದೆ. ಪ್ರತಿಭಟನೆ, ಮುತ್ತಿಗೆ, ಮೆರವಣಿಗೆ ನಡೆಯುವ ಸಾಧ್ಯತೆ ಇರುವುದರಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ.

ಇಂದಿನಿಂದ ಮಾರ್ಚ್ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು ಇಂದು, ನಾಳೆ ‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ ಚರ್ಚೆ ನಡೆಯಲಿದೆ. ಹಾಗೂ ಸ್ಪೀಕರ್ ಕಾಗೇರಿ ಚರ್ಚೆಗೆ ಸಮಯವನ್ನು ನಿಗದಿಪಡಿಸಿದ್ದಾರೆ. ಆದರೆ ಸದನದಲ್ಲಿಂದು ಹಲವು ವಿಚಾರಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣ, ಗಣಿಗಾರಿಕೆ ಸ್ಥಳದಲ್ಲಿ ಸ್ಫೋಟ ಕೇಸ್, ಮೀಸಲಾತಿ ಹೋರಾಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಸಾಧ್ಯತೆ ಇದೆ.

ಈ ಎಲ್ಲಾ ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ರಣತಂತ್ರ ಮಾಡಿದೆ. ಮಾರ್ಚ್ 8ರಂದು ಸಿಎಂ ಬಿಎಸ್‌ವೈರಿಂದ ಬಜೆಟ್ ಮಂಡನೆಯಾಗಲಿದೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021ರಲ್ಲಿ ಕೃಷಿ ಕ್ಷೇತ್ರದ ನಿರೀಕ್ಷೆ ಬಗ್ಗೆ ಪ್ರಕಾಶ್ ಕಮ್ಮರಡಿ ಹೇಳೋದೇನು?