ಬೆಳಗಾವಿ: ಇಂದು ರೈತ ಮುಖಂಡರು, ಸಾರಿಗೆ ನೌಕರರ ಜತೆ ಸಭೆ ನಡೆಸಲಿದ್ದ ಕೋಡಿಹಳ್ಳಿ ಚಂದ್ರಶೇಖರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸಭೆಗೆ ನಿರ್ಧರಿಸಿದ್ದರು. ಆದರೆ ಸಭೆಗೂ ಮುನ್ನವೇ ಖಾಸಗಿ ಹೋಟೆಲ್‌ನಲ್ಲಿದ್ದ ಕೋಡಿಹಳ್ಳಿ ಚಂದ್ರಶೇಖರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬೆಳಗಾವಿಯ ಹಿರೇಬಾಗೇವಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಸತತ ನಾಲ್ಕನೇ ದಿನವೂ ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಸರ್ಕಾರಕ್ಕೆ ಮತ್ತಷ್ಟು ಬಿಸಿ ಮುಟ್ಟಿಸಲು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ತಯಾರಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 10 ಅಂದರೆ ಇಂದು ಬೆಳಗಾವಿಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಯಾಣ ಬೆಳೆಸಿದ್ದು ಬೆಳಗಾವಿ ಹಾಗೂ ಗುಲ್ಬರ್ಗದಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರ ಸಭೆ ನಡೆಸಲಿದ್ದರು. ಆದರೆ ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಾರದೆಂದು ಬೆಳಗಾವಿ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರನ್ನು ವಶಕ್ಕೆ ಪಡೆದಿದ್ದಾರೆ.
ಸರ್ಕಾರ ಚಳವಳಿಗಳನ್ನು ಹತ್ತಿಕ್ಕುವ ನೀತಿ ಅನುಸರಿಸುತ್ತಿದೆ
ಇನ್ನು ಬಂಧನಕ್ಕೊಳಗಾದ ಬಳಿಕ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನನ್ನು ವಶಕ್ಕೆ ಪಡೆದಿರುವುದು ತಪ್ಪು. ನನ್ನನ್ನು ಅಕ್ರಮವಾಗಿ ಬಂಧಿಸಿದ್ದಾರೆ. ಸರ್ಕಾರ ಚಳವಳಿಗಳನ್ನು ಹತ್ತಿಕ್ಕುವ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಸಾರಿಗೆ ನಿಗಮಗಳ ಯಾವ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬಾರದು: ಕೋಡಿಹಳ್ಳಿ ಚಂದ್ರಶೇಖರ್
(Bus Strike Kodihalli Chandrashekar Arrested in Belagavi)
Published On - 11:47 am, Sat, 10 April 21