ರಾಜೌರಿಯಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್, ನಂದನವನದಲ್ಲಿ ನೀರವ ಮೌನ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಕರ್ನಾಟಕದ ಯೋಧ ಸೇರಿದಂತೆ ನಾಲ್ವರು ಹುತಾತ್ಮರಾಗಿದ್ದಾರೆ. ಬೆಂಗಳೂರು ಹೊರವಲಯ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿರುವ ಕನ್ನಡಿಗ ಯೋಧನ ನಿವಾಸದಲ್ಲಿ ನೀರವ ಮೌನ ಆವರಿಸಿದೆ.
ಆನೇಕಲ್, ನ.23: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ (Rajouri, Jammu and Kashmir) ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ನಂದನವನದಲ್ಲಿರುವ ನಿವಾಸದಲ್ಲಿ ನೀರವ ಮೌನ ಆವರಿಸಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ 66RR ಬೆಟಾಲಿಯನ್ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರು ಹುತಾತ್ಮರಾಗಿದ್ದಾರೆ. ಸದ್ಯ, ಮಗನ ಸಾವಿನಿಂದಾಗಿ ಮನೆಯಲ್ಲಿ ಮಗನನ್ನು ಕಳೆದುಕೊಂಡು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ನೋವಿನಲ್ಲಿದ್ದು, ಅವರನ್ನು ಸಂಬಂಧಿಗಳು ಸಂತೈಸುತ್ತಿದ್ದಾರೆ.
ಇದನ್ನೂ ಓದಿ: ರಜೌರಿ ಎನ್ಕೌಂಟರ್: ಕರ್ನಾಟಕದ ಯೋಧ ಸೇರಿದಂತೆ ನಾಲ್ವರು ಹುತಾತ್ಮ
ಕಳೆದ ಆರು ತಿಂಗಳ ಹಿಂದೆ ಮನೆಗೆ ಆಗಮಿಸಿದ್ದ ಪ್ರಾಂಜಲ್, ಮನೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಒಂದು ವಾರ ಪೋಷಕರ ಜೊತೆ ಇದ್ದು ಕರ್ತವ್ಯಕ್ಕೆ ತೆರಳಿದ್ದ ಪ್ರಾಂಜಲ್ ಇದೀಗ ಮನೆಗೆ ವಾಪಸ್ ಆಗಿದ್ದು ಹುತಾತ್ಮರಾಗಿ.
ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಂಗಳೂರಿನ MRPL ಸಂಸ್ಥೆಯಲ್ಲಿ ಎಂಡಿ ಆಗಿದ್ದರು. ಹೀಗಾಗಿ ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಕುಟುಂಬ ಸಹಿರ ವೆಂಕಟೇಶ್ ವಾಸವಿದ್ದರು. ಮಂಗಳೂರು, ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ ಪ್ರಾಂಜಲ್ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ ರೈಫಲ್ಸ್ ಅನ್ನು ಲೀಡ್ ಮಾಡುತ್ತಿದ್ದರು. ಇತ್ತೀಚೆಗೆ ವೆಂಕಟೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ನಂದನವನದಲ್ಲಿ ನೆಲೆಸಿದ್ದರು.
ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಪ್ರಾಂಜಲ್
ಎರಡು ವರ್ಷದ ಹಿಂದೆ ಜಮ್ಮು ಕಾಶ್ಮೀರಕ್ಕೆ ತೆರಳುವ ಮೊದಲು ಕ್ಯಾಪ್ಟನ್ ಪ್ರಾಂಜಲ್ ಅವರು ವಿವಾಹವಾಗಿದ್ದರು. ಬೆಂಗಳೂರಿನ ಅದಿತಿ ಎಂಬುವವರ ಜೊತೆ ವಿವಾಹವಾಗಿದ್ದರು. ಸದ್ಯ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅದಿತಿ, ಪತಿ ನಿಧನ ಹಿನ್ನೆಲೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.
ಮಂಗಳೂರಿನ ಎಮ್.ಆರ್.ಪಿ.ಎಲ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ್ದ ಪ್ರಾಂಜಲ್, ಕಾಲೇಜು ವ್ಯಾಸಾಂಗವನ್ನು ಮಹೇಶ್ ಪಿ.ಯು ಕಾಲೇಜಿನಲ್ಲಿ ಮುಗಿಸಿದರು. ಸಿದ್ದಗಂಗಾದಲ್ಲೂ ವ್ಯಾಸಂಗ ಮಾಡಿದ್ದ ಪ್ರಾಂಜಲ್, ಬಳಿಕ ಆರ್ಮಿ ಕಾಲೇಜು ಮದ್ಯಪ್ರದೇಶದ ಮಹೌನಲ್ಲಿ ಶಿಕ್ಷಣ ಪಡೆದು ಸೇನೆಗೆ ಸೇರ್ಪಡೆಯಾಗಿ ಕಾಶ್ಮೀರದಲ್ಲಿ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ದಸರಾ ಸಂದರ್ಭದಲ್ಲಿ ಮನೆಗೆ ಬಂದು ಹೋಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Thu, 23 November 23