
ಬೆಂಗಳೂರು, ಅಕ್ಟೋಬರ್ 09: ‘ಕಾವೇರಿ ಕಾಲಿಂಗ್’ (Cauvery Calling) ಯೋಜನೆಯ ಭಾಗವಾಗಿ ರೈತರಿಗೆ ಸಸಿಗಳನ್ನು ಈ ವಾರ ಕಳುಹಿಸೋದಾಗಿ ಇಶಾ ಸಂಸ್ಥೆ ತಿಳಿಸಿದೆ. ತಮಿಳುನಾಡಿನ ಕಡಲೂರಿನಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಏಕ ಸ್ಥಳೀಯ ನರ್ಸರಿಯನ್ನು ಸಂಸ್ಥೆ ನಡೆಸುತ್ತಿದ್ದು, ಸಂಪೂರ್ಣವಾಗಿ ಮಹಿಳೆಯರೇ ಈ ನರ್ಸರಿಯನ್ನು ನಿರ್ವಹಿಸುತ್ತಿದ್ದಾರೆ. ‘ಕಾವೇರಿ ಕಾಲಿಂಗ್’ ಯೋಜನೆಯಡಿ ಕಳೆದ ವರ್ಷ ತಮಿಳುನಾಡಿನಲ್ಲಿ 1.2 ಕೋಟಿ ಸಸಿಗಳನ್ನ ನೆಡಲಾಗಿದೆ. ಈ ನರ್ಸರಿಯಲ್ಲೇ 85 ಲಕ್ಷ ಸಸಿಗಳನ್ನ ಉತ್ಪಾದಿಸಿರೋದು ವಿಶೇಷ.
ಸದ್ಗುರು ಜಗ್ಗಿ ವಾಸುದೇವ್ ಮಾರ್ಗದರ್ಶನದಲ್ಲಿ ನಡೆಯುತ್ತಿರೋ ಕಾವೇರಿ ಕಾಲಿಂಗ್ ಅಭಿಯಾನದಡಿ 2024-25ರ ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದ 34,000 ಎಕರೆಗಳಲ್ಲಿ 1.36 ಕೋಟಿ ಸಸಿಗಳನ್ನು ಯಶಸ್ವಿಯಾಗಿ ನೆಡಲಾಗಿದೆ. ಇಲ್ಲಿಯವರೆಗೆ ಒಟ್ಟು 12.2 ಕೋಟಿ ಸಸಿಗಳನ್ನು ನೆಟ್ಟಿದ್ದು, ಇದು 2.38 ಲಕ್ಷ ರೈತರು ಮರ ಆಧಾರಿತ ಕೃಷಿ ಅಳವಡಿಸಿಕೊಳ್ಳಲು ಸಹಾಯ ಮಾಡಿದೆ. ಕಳೆದ ವರ್ಷ, 50,931 ರೈತರು ಮತ್ತು ನಾಗರಿಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಕಾವೇರಿ ಕಾಲಿಂಗ್ ಅಭಿಯಾನದಡಿ 1 ವರ್ಷದಲ್ಲಿ 1.36 ಕೋಟಿ ಗಿಡಗಳನ್ನು ನೆಡಲಾಗಿದೆ
ಕಾವೇರಿ ಕಾಲಿಂಗ್ ವಿಶ್ವದ ಅತಿದೊಡ್ಡ ರೈತ-ಚಾಲಿತ ಯೋಜನೆಯಾಗಿದ್ದು, ಉಷ್ಣವಲಯದ ಪ್ರದೇಶಗಳನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ . ಟ್ರಿಲಿಯನ್ ಟ್ರೀಸ್ ಇಂಡಿಯಾ ಚಾಲೆಂಜ್‌ನಿಂದ ‘ಟಾಪ್ ಇನ್ನೋವೇಟರ್’ ಎಂದು ಹೆಸರಿಸಲಾದ ಈ ಅಭಿಯಾನವು, ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿದೆ. ಭೂ ಸವೆತವನ್ನು ತಡೆಯುವ ಜೊತೆಗೆ, ಮಣ್ಣಿನ ಫಲವತ್ತತೆ ಹೆಚ್ಚಿಸಲೂ ನೆರವಾಗಲಿದೆ. ಹಾಗೆಯೇ ನೀರಿನ ಧಾರಣ ಸುಧಾರಣೆಯ ಜೊತೆಗೆ ವರ್ಷವಿಡೀ ನದಿಯ ಹರಿವನ್ನು ಕಾಪಾಡಿಕೊಳ್ಳಲು ಸಹಾಯಕರವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.