ಶತ ಶತಮಾನಗಳಿಂದ ನಡೆಯುತ್ತಿದ್ದ ಕಾವೇರಿ ಜಲ ವಿವಾದ ಈ ವರ್ಷ ಅಂತ್ಯ?

ಬೆಂಗಳೂರು: ಕರ್ನಾಟಕ-ತಮಿಳುನಾಡಿನ ನಡುವೆ ಭೂಗಡಿ ವಿವಾದ ಇಲ್ಲ. ಆದರೆ, ಎರಡೂ ರಾಜ್ಯಗಳ ನಡುವೆ ಶತ ಶತಮಾನಗಳಿಂದಲೂ ಕಾವೇರಿ ಜಲ ವಿವಾದ ಇದೆ. ಆಗಾಗ ಎರಡು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆಯ ವಿವಾದ ಸೃಷ್ಟಿಯಾಗುತ್ತಲೇ ಇರುತ್ತೆ. ಈ ವಿವಾದವು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೂ ಕಾರಣವಾಗುತ್ತೆ. ಜನರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೆ, ಈ ವರ್ಷ ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ವಿವಾದ ಸೃಷ್ಟಿಯಾಗುತ್ತೋ ಇಲ್ಲವೋ ಎನ್ನುವ ಬಗ್ಗೆ ಸ್ಪೆಷಲ್ ರಿಪೋರ್ಟ್ ಇಲ್ಲಿದೆ. ಚೋಳರ ಕಾಲದಿಂದಲೂ ಇದೆ […]

ಶತ ಶತಮಾನಗಳಿಂದ ನಡೆಯುತ್ತಿದ್ದ ಕಾವೇರಿ ಜಲ ವಿವಾದ ಈ ವರ್ಷ ಅಂತ್ಯ?

Updated on: Nov 04, 2020 | 2:45 PM

ಬೆಂಗಳೂರು: ಕರ್ನಾಟಕ-ತಮಿಳುನಾಡಿನ ನಡುವೆ ಭೂಗಡಿ ವಿವಾದ ಇಲ್ಲ. ಆದರೆ, ಎರಡೂ ರಾಜ್ಯಗಳ ನಡುವೆ ಶತ ಶತಮಾನಗಳಿಂದಲೂ ಕಾವೇರಿ ಜಲ ವಿವಾದ ಇದೆ. ಆಗಾಗ ಎರಡು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆಯ ವಿವಾದ ಸೃಷ್ಟಿಯಾಗುತ್ತಲೇ ಇರುತ್ತೆ. ಈ ವಿವಾದವು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೂ ಕಾರಣವಾಗುತ್ತೆ. ಜನರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೆ, ಈ ವರ್ಷ ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ವಿವಾದ ಸೃಷ್ಟಿಯಾಗುತ್ತೋ ಇಲ್ಲವೋ ಎನ್ನುವ ಬಗ್ಗೆ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಚೋಳರ ಕಾಲದಿಂದಲೂ ಇದೆ ಕಾವೇರಿ ಫೈಟ್:
ಕರ್ನಾಟಕ ಮತ್ತು ತಮಿಳುನಾಡು ನೆರೆಹೊರೆಯ ರಾಜ್ಯಗಳು. ಆದರೆ ಎರಡೂ ರಾಜ್ಯಗಳ ನಡುವೆ ಸ್ನೇಹ-ಸೌಹಾರ್ದ ಸಂಬಂಧ ಇಲ್ಲ. ಕಾವೇರಿ ನೀರು ಹಂಚಿಕೆಯ ವಿವಾದವು ಇಂದು ನೆನ್ನೆಯದ್ದಲ್ಲ. ಚೋಳ ರಾಜರ ಕಾಲದಿಂದಲೂ ಈ ವಿವಾದ ಇದೆ. ಸ್ವಾತಂತ್ರ್ಯ ಪೂರ್ವದಲ್ಲೂ 2 ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದ ಇತ್ತು. ಈ ವಿವಾದವಿದೆ. ಈ ಸಮಸ್ಯೆ ಬಗೆಹರಿಸಲು ಕಾವೇರಿ ನದಿ ನೀರು ನ್ಯಾಯಾಧೀಕರಣವನ್ನು ರಚಿಸಲಾಗಿತ್ತು. ಈ ನ್ಯಾಯಾಧೀಕರಣವು 2007ರ ಫೆಬ್ರವರಿ 5 ರಂದು ತನ್ನ ಅಂತಿಮ ತೀರ್ಪನ್ನು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ನಾಲ್ಕು ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಸುಪ್ರೀಂ ಕೋರ್ಟ್‌ನ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನ್ಯಾಯಾಧೀಕರಣ ಕೊಟ್ಟಿದ್ದ ತೀರ್ಪಿನಲ್ಲಿ ಕೆಲ ಮಾರ್ಪಾಡು ಮಾಡಿ ತಮ್ಮ ತೀರ್ಪು ನೀಡಿದ್ದಾರೆ. ಸುಪ್ರೀಂಕೋರ್ಟ್‌ನ ತೀರ್ಪಿನ ಪ್ರಕಾರ, ಕರ್ನಾಟಕವು ಈಗ ವಾರ್ಷಿಕ 177.25 ಟಿಎಂಸಿ ನೀರುನ್ನು ಸಾಮಾನ್ಯ ವರ್ಷದಲ್ಲಿ ತನ್ನ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಿಂದ ತಮಿಳುನಾಡಿಗೆ ಹರಿಸಬೇಕು. ಮಳೆ ಕೊರತೆಯಾದಾಗ ವಾರ್ಷಿಕ 177.25 ಟಿಎಂಸಿ ನೀರನ್ನ ಕರ್ನಾಟಕವು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ. ಜತೆಗೇ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ನಡುವೆ ನೀರು ಹಂಚಿಕೆಯ ಮೇಲ್ವಿಚಾರಣೆ ನಡೆಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸುಪ್ರೀಂಕೋರ್ಟ್ ತೀರ್ಪಿನಂತೆ ರಚಿಸಲಾಗಿದೆ. ಜತೆಗೇ ಕಾವೇರಿ ನೀರು ನಿಯಂತ್ರಣ ಸಮಿತಿಯೂ ರಚನೆಯಾಗಿದೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ತಿಂಗಳಿಗೊಮ್ಮೆ ಇಲ್ಲವೇ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ನೀರು ಹಂಚಿಕೆಯ ಪರಿಶೀಲನೆ ನಡೆಸುತ್ತೆ. ಈ ಸಭೆಯಲ್ಲಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಪ್ರತಿನಿಧಿಗಳು ಹಾಗೂ ಕೃಷಿ, ತೋಟಗಾರಿಕೆ, ನೀರಾವರಿ ತಜ್ಞರು ಭಾಗಿಯಾಗ್ತಾರೆ. ಕೇಂದ್ರ ಸರ್ಕಾರವೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಅಧ್ಯಕ್ಷರು, ತಜ್ಞ ಸದಸ್ಯರನ್ನು ನೇಮಿಸಿದೆ. ಈ ಸಮಿತಿಯಲ್ಲಿ ನಾಲ್ಕು ರಾಜ್ಯಗಳಿಗೂ ನೀರು ಹಂಚಿಕೆಯ ಬಗ್ಗೆ ಚರ್ಚೆ ನಡೆದು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತೆ.

ಕರ್ನಾಟಕದ ರೈತರ ಹಿತಾಸಕ್ತಿ ರಕ್ಷಿಸಲು ಸಭೆ:
ಕರ್ನಾಟಕದ ರೈತರಿಗೂ ಕೆಆರ್‌ಎಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಡ್ಯಾಂಗಳಿಂದ ಯಾವಾಗ ಬೆಳೆಗೆ ನೀರು ಬಿಡಬೇಕು, ಯಾವಾಗ ಬೆಳೆಗೆ ನೀರು ನಿಲ್ಲಿಸಬೇಕು ಎನ್ನುವುದನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೇ ನಿರ್ಧರಿಸುತ್ತೆ. ಸಭೆಯಲ್ಲಿ ಭಾಗಿಯಾಗುವ ಕರ್ನಾಟಕ ಸರ್ಕಾರದ ಪ್ರತಿನಿಧಿಯು ಕರ್ನಾಟಕದ ರೈತರಿಗೆ ಯಾವಾಗ ಬೆಳೆ ಬಿತ್ತನೆ, ಬೆಳೆ ಬೆಳೆಯಲು ನೀರಿನ ಅಗತ್ಯ ಇದೆ ಎನ್ನುವುದನ್ನು ಸಭೆಗೆ ಮನವರಿಕೆ ಮಾಡಿಕೊಡಬೇಕಾಗುತ್ತೆ. ಕರ್ನಾಟಕದ ರೈತರ ಹಿತಾಸಕ್ತಿ ರಕ್ಷಿಸಲು ಸಭೆಯಲ್ಲಿ ಸಮರ್ಪಕವಾಗಿ ವಾದ ಮಂಡಿಸಬೇಕಾಗುತ್ತೆ. ಕರ್ನಾಟಕದ ಸರ್ಕಾರವು ಸಾಮಾನ್ಯವಾಗಿ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇಲ್ಲವೇ ನೀರಾವರಿ ಇಲಾಖೆಯ ತಜ್ಞ ಅಧಿಕಾರಿಯನ್ನೇ ಸಭೆಗೆ ತನ್ನ ಪ್ರತಿನಿಧಿಯಾಗಿ ಕಳಿಸುತ್ತೆ.

ಸಭೆಯಲ್ಲಿ ಭಾಗಿಯಾಗುವ ಮುನ್ನ ನೀರಾವರಿ ಇಲಾಖೆಯ ಅಧಿಕಾರಿಗಳು, ತಜ್ಞರು ಅನೇಕ ಸುತ್ತಿನ ಸಭೆ ನಡೆಸುತ್ತಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ಹೇಗೆ ವಾದ ಮಂಡಿಸಬೇಕು, ಯಾವ್ಯಾವ ವಿಷಯ ಮಂಡಿಸಬೇಕು ಎನ್ನುವ ಬಗ್ಗೆ ಬೆಂಗಳೂರು ಇಲ್ಲವೇ ದೆಹಲಿಯ ಕರ್ನಾಟಕ ಭವನದಲ್ಲಿ ಸಾಕಷ್ಟು ವಿಚಾರ ವಿನಿಮಯ ನಡೆಸ್ತಾರೆ. ಆದಾದ ಬಳಿಕವೇ ಕರ್ನಾಟಕ ರಾಜ್ಯ ಸರ್ಕಾರದ ಸೂಚನೆಗಳನ್ನು ಪಡೆದುಕೊಂಡು ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯ ತಿಳಿಸ್ತಾರೆ.

ಇನ್ನೂ ಜಲ ವರ್ಷವೂ ಜೂನ್ ತಿಂಗಳ 1 ರಿಂದ ಆರಂಭವಾಗಿ ಮೇ, 30ಕ್ಕೆ ಅಂತ್ಯವಾಗುತ್ತೆ. ಜೂನ್ 1 ರಿಂದ ಮೇ, 30ರೊಳಗೆ ಕರ್ನಾಟಕವು ತನ್ನ ಕಾವೇರಿ ಕಣಿವೆಯ ನಾಲ್ಕು ಡ್ಯಾಂಗಳಿಂದ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಈಗ ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಹರಿಸಬೇಕಾಗಿದೆ. ಈ ಮೊದಲು ಕಾವೇರಿ ನದಿ ನೀರು ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ, ವಾರ್ಷಿಕ182 ಟಿಎಂಸಿ ನೀರುನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಾಗಿತ್ತು.

ಜತೆಗೇ 2018ರ ಫೆಬ್ರವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಕರ್ನಾಟಕಕ್ಕೆ 14.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ನೀರಿನ ಪ್ರಮಾಣವು 270 ಟಿಎಂಸಿಯಿಂದ 284.75 ಟಿಎಂಸಿಗೆ ಏರಿಕೆಯಾಗಿದೆ. ಕಾವೇರಿ ನದಿ ನೀರು ನ್ಯಾಯಾಧೀಕರಣವು ತಮಿಳುನಾಡಿನಲ್ಲಿ ಲಭ್ಯವಿರುವ ಅಂತರ್ಜಲವನ್ನು ತನ್ನ ತೀರ್ಪು ನೀಡುವಾಗ ಪರಿಗಣಿಸಿರಲಿಲ್ಲ. ಇದನ್ನು ಕರ್ನಾಟಕದ ಪರ ವಕೀಲ ಫಾಲಿ ಎಸ್‌.ನಾರಿಮನ್ ಅವರು ಸುಪ್ರೀಂಕೋರ್ಟ್ ಗಮನಕ್ಕೆ ತಂದರು.

ಹೀಗಾಗಿ ಸುಪ್ರೀಂಕೋರ್ಟ್ ತಮಿಳುನಾಡಿನ ಲಭ್ಯವಿರುವ ಅಂತರ್ಜಲವನ್ನು 10 ಟಿಎಂಸಿ ಎಂದು ಪರಿಗಣಿಸಿ, ಇದನ್ನು ತಮಿಳುನಾಡಿನ ಪಾಲಿನಲ್ಲಿ ಕಡಿತ ಮಾಡಿದೆ. ಜತೆಗೇ ಬೆಂಗಳೂರು ನಗರದ ಕುಡಿಯುವ ನೀರಿನ ಉದ್ದೇಶಕ್ಕಾಗಿ 4.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಇದರಿಂದಾಗಿ ಕರ್ನಾಟಕಕ್ಕೆ ವಾರ್ಷಿಕ 284 ಟಿಎಂಸಿ ಕಾವೇರಿ ನೀರುನ್ನು ಬಳಸಿಕೊಳ್ಳುವ ಹಕ್ಕು ಸಿಕ್ಕಿದೆ. ಈ ಮೊದಲು ಕರ್ನಾಟಕಕ್ಕೆ ವಾರ್ಷಿಕ 270 ಟಿಎಂಸಿ ನೀರು ಬಳಕೆಗೆ ಮಾತ್ರ ಕಾವೇರಿ ನದಿ ನೀರು ನ್ಯಾಯಾಧೀಕರಣ ಅವಕಾಶ ಕೊಟ್ಟಿತ್ತು.

ಈ ವರ್ಷ ಜಲವಿವಾದ ಇಲ್ಲ:
ಇನ್ನೂ ಈ ವರ್ಷ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದ ಇರುತ್ತೋ ಇಲ್ಲವೋ ಎನ್ನುವ ಕುತೂಹಲ ನಿಮ್ಮೆಲ್ಲರಿಗೂ ಇರಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಕರ್ನಾಟಕವು ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಹರಿಸಬೇಕು. ಜೂನ್ ತಿಂಗಳ 1 ರಿಂದ ಮೇ, 30ರವರೆಗೆ 177.25 ಟಿಎಂಸಿ ನೀರುನ್ನು ಹರಿಸಬೇಕು. ಕರ್ನಾಟಕವು ತನ್ನ ಕಾವೇರಿ ಕಣಿವೆಯ ಡ್ಯಾಂಗಳಾದ ಕೆಆರ್‌ಎಸ್‌, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಡ್ಯಾಂಗಳಿಂದ ಬಿಳಿಗುಂಡ್ಲು ಜಲಮಾಪಕದ ಮೂಲಕ ಆಕ್ಟೋಬರ್ 11ರವರೆಗೆ 134 ಟಿಎಂಸಿ ನೀರುನ್ನು ತಮಿಳುನಾಡಿಗೆ ಹರಿಸಿದೆ. ಬಳಿಕ ಆಕ್ಟೋಬರ್ 27ರವರೆಗೂ ಲಭ್ಯವಿರುವ ಮಾಹಿತಿ ಪ್ರಕಾರ, 157 ಟಿಎಂಸಿ ನೀರು ಬಿಳಿಗುಂಡ್ಲು ಜಲಮಾಪಕದ ಮೂಲಕ ತಮಿಳುನಾಡಿಗೆ ಹರಿದು ಹೋಗಿದೆ.

ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ, ಆಕ್ಟೋಬರ್ ತಿಂಗಳಲ್ಲಿ ಕರ್ನಾಟಕವು ತಮಿಳುನಾಡಿಗೆ 18 ಟಿಎಂಸಿ ಕಾವೇರಿ ನೀರುನ್ನು ತಮಿಳುನಾಡಿಗೆ ಹರಿಸಬೇಕಾಗಿತ್ತು. ಆದರೆ, ಕಳೆದ ಆಕ್ಟೋಬರ್ ತಿಂಗಳಿನಲ್ಲಿ 37 ಟಿಎಂಸಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿದು ಹೋಗಿದೆ. ಆಕ್ಟೋಬರ್ ತಿಂಗಳಿನಲ್ಲಿ ತಮಿಳುನಾಡಿಗೆ ಹರಿಸಬೇಕಾಗಿದ್ದ ನೀರಿನ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಜೂನ್ 1 ರಿಂದ ಅಕ್ಟೋಬರ್ 27ರವರೆಗೆ 157 ಟಿಎಂಸಿ ನೀರು ಹರಿದು ಹೋಗಿರುವುದರಿಂದ ಇನ್ನೂಳಿದ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕವು 20 ಟಿಎಂಸಿ ನೀರುನ್ನು ಮಾತ್ರ ತಮಿಳುನಾಡಿಗೆ ಹರಿಸಬೇಕು. ನವಂಬರ್ ನಿಂದ ಮೇ ಅಂತ್ಯದವರೆಗಿನ 7 ತಿಂಗಳ ಅವಧಿಯಲ್ಲಿ 20 ಟಿಎಂಸಿ ನೀರುನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕಕ್ಕೆ ಯಾವುದೇ ಸಮಸ್ಯೆಯಾಗಲ್ಲ.

ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಂಗಳು ಈಗಲೂ ಶೇಕಡಾ 93 ರಷ್ಟು ಭರ್ತಿಯಾಗಿವೆ. ಕರ್ನಾಟಕದ ಕಾವೇರಿ ಕಣಿವೆಯ ಕೆಆರ್‌ಎಸ್‌, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಡ್ಯಾಂಗಳಲ್ಲಿ ಗರಿಷ್ಠ 114.4 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ನವಂಬರ್ 3 ರಂದು ಈ ನಾಲ್ಕು ಡ್ಯಾಂಗಳಲ್ಲಿ 106.9 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಕರ್ನಾಟಕಕ್ಕೆ ಜಲವರ್ಷ ಮುಕ್ತಾಯಕ್ಕೆ ಬಾಕಿ ಇರುವ ಇನ್ನುಳಿದ ಏಳು ತಿಂಗಳ ಅವಧಿಯಲ್ಲಿ 20 ಟಿಎಂಸಿ ನೀರುನ್ನು ತಮಿಳುನಾಡಿಗೆ ಹರಿಸಲು ಯಾವುದೇ ಸಮಸ್ಯೆ ಇಲ್ಲ.

ಹೀಗಾಗಿ ಈ ವರ್ಷ ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ಜಲ ವಿವಾದ ಸೃಷ್ಟಿಯಾಗಲ್ಲ. ಕೇರಳದ ವಯನಾಡು, ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಆದ ಬಾರಿ ಮಳೆಯು ಬದ್ದ ವೈರಿ ರಾಜ್ಯಗಳಾಗಿರುವ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆಯ ವಿವಾದಕ್ಕೆ ಈ ವರ್ಷ ಬ್ರೇಕ್ ಹಾಕಿದೆ. ಮಳೆರಾಯ ಮನಸ್ಸು ಮಾಡಿದರೇ, ಕಾವೇರಿ ನೀರು ಹಂಚಿಕೆಯ ವಿವಾದ ಇರಲ್ಲ ಎನ್ನುವುದು ಈ ವರ್ಷವೂ ಸಾಬೀತಾಗಿದೆ.

Published On - 2:30 pm, Wed, 4 November 20