ದೆಹಲಿ: ಕರ್ನಾಟಕದ ಬೆಟ್ಟ-ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ (Scheduled Tribe) ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಸಿರ್ಮೌರ್ ಪ್ರದೇಶದಲ್ಲಿ ವಾಸಿಸುತ್ತಿರುವ ಹಟ್ಟಿ ಸಮುದಾಯ, ತಮಿಳುನಾಡಿನ ನಾರಿಕುರವರ್ ಸೇರಿದಂತೆ ಒಟ್ಟು ಐದು ರಾಜ್ಯಗಳ ಅಧಿಸೂಚಿತ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಹಲವು ಬುಡಕಟ್ಟುಗಳನ್ನು ಸೇರಿಸುವ ಪ್ರಸ್ತಾವವನ್ನೂ ಒಪ್ಪಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ‘5 ರಾಜ್ಯಗಳಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬುಡಕಟ್ಟು ಸಂಬಂಧಿತ ವಿವಿಧ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು. ಛತ್ತೀಸಗಡ ಮತ್ತು ಉತ್ತರ ಪ್ರದೇಶದ ಸಮುದಾಯಗಳಿಗೂ ಈ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.
ತಮಿಳುನಾಡಿನ ಕುರಿವಿಕ್ಕರಣ್ ಸಮುದಾಯದ ಜೊತೆಗೆ ಬ್ರಿಜ್ಜಿಯಾ ಸಮುದಾಯ ಮತ್ತು ಛತ್ತೀಸಗಡದ ಇತರ 11 ಬುಡಕಟ್ಟು ಜನಾಂಗಗಳನ್ನು ಪಟ್ಟಿಗೆ ಸೇರಿಸಲು ಸಂಪುಟವು ಅನುಮೋದನೆ ನೀಡಿದೆ. ಈ ಹಿಂದೆ ಸಂತ ರವಿದಾಸ್ ನಗರ ಎಂದು ಕರೆಯಲ್ಪಡುತ್ತಿದ್ದ ಕುಶಿನಗರ, ಚಂದೌಲಿ ಮತ್ತು ಸಂತ ಕಬೀರ್ ನಗರ ಮತ್ತು ಭದೋಹಿ ಜಿಲ್ಲೆಯಾದ್ಯಂತ ಹರಡಿರುವ ಉತ್ತರ ಪ್ರದೇಶದ ಐದು ಉಪಜಾತಿಗಳೊಂದಿಗೆ ಗೊಂಡ ಸಮುದಾಯವನ್ನು ಎಸ್ಟಿ ಸಮುದಾಯದ ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಕೊಂಡಿದೆ.
ಹಿಮಾಚಲ ಪ್ರದೇಶದ ಟ್ರಾನ್ಸ್-ಗಿರಿ ಪ್ರದೇಶದ ನಾಲ್ಕು ವಲಯಗಳಲ್ಲಿ ವಾಸಿಸುತ್ತಿರುವ ಹಟ್ಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸ್ಥಾನ ದೊರೆತಿರುವುದು ಮಹತ್ವದ ವಿದ್ಯಮಾನ ಎನಿಸಿದೆ. ಚುನಾವಣೆಯ ಹೊಸಿಲಲ್ಲಿರುವ ರಾಜ್ಯಗಳಲ್ಲಿ ಮೀಸಲಾತಿ ಸಂಬಂಧಿತ ಚರ್ಚೆಯು ಇತ್ತೀಚೆಗೆ ಗರಿಗೆದರಿತ್ತು. ಉತ್ತರಾಖಂಡದಲ್ಲಿ ಈ ಸಮುದಾಯವು ಅದಾಗಲೇ ಎಸ್ಟಿ ಪಟ್ಟಿಗೆ ಸೇರಿತ್ತು. ಎಸ್ಟಿ ಪಟ್ಟಿಗೆ ಹಟ್ಟಿ ಜಾತಿಯನ್ನು ಸೇರಿಸುವುದರಿಂದ 1.6 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದು ಮುಂಡಾ ಹೇಳಿದರು.
ರಾಜ್ಯವಾರು ಎಸ್ಟಿ ಮೀಸಲಾತಿ ಪ್ರಕಟಣೆಗಾಗಿ ಕೇಂದ್ರ ಸರ್ಕಾರವು ಈಗ ಸಾಂವಿಧಾನಿಕ (ಅನುಸೂಚಿತ ಬುಡಕಟ್ಟುಗಳು) ಆದೇಶ 1950ಕ್ಕೆ ತಿದ್ದುಪಡಿ ತರಲಿದೆ. ಇದಕ್ಕಾಗಿ ಪ್ರತ್ಯೇಕ ಮಸೂದೆ ಮಂಡಿಸಲಿದೆ.
Published On - 9:56 pm, Wed, 14 September 22