ಬೆಂಗಳೂರು, ಆಗಸ್ಟ್ 23: ಬೆಂಗಳೂರು ಕಾವೇರಿ ನೀರಿನ ಮೇಲೆ ಅವಲಂಬನೆ ಆಗಿದೆ. ಕಾವೇರಿ ನೀರು ವಿಚಾರದಲ್ಲಿ ಕೇಂದ್ರ ಬಿಜೆಪಿ ಕರ್ನಾಟಕದ ಪರ ಇದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮವದವರೊಂದಿಗೆ ಮಾತನಾಡಿದ ಅವರು, ಕಾವೇರಿ ಬೋರ್ಡ್ ಮುಂದೆ ರಾಜ್ಯ ಸರ್ಕಾರ ಸರಿಯಾಗಿ ವಾದ ಮಾಡಿಲ್ಲ. ಇದಕ್ಕೆ ನಮ್ಮ ವಿರೋಧ ಮಾಡಿದ್ದೇವೆ. ಆದರೆ ನೆಲ, ಜಲ ವಿಷಯದಲ್ಲಿ ನಾವು ಸರ್ಕಾರದ ಜೊತೆ ಇರುತ್ತೇವೆ ಅಂತ ಹೇಳಿದ್ದೇವೆ ಎಂದರು.
ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ ಸಮರ್ಥ ವಾದ ಮಂಡಿಸಬೇಕು. ತಮಿಳುನಾಡು ಹೆಚ್ಚು ನೀರು ಸಂಗ್ರಹ ಮಾಡಿದ್ದ ಬಗ್ಗೆ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಬೇಕು. ಕರ್ನಾಟಕದಲ್ಲಿ ಮುಂಗಾರು ಮುಗಿದು ಹೋಗಿದ್ದು, 42% ಮಳೆ ಕೊರತೆ ಆಗಿದ್ದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು ಅಂತ ತಿಳಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ಕಿಚ್ಚು.. ಅನ್ನದಾತರ ಸಿಟ್ಟು: ಸರ್ವಪಕ್ಷ ಸಭೆ ಬಳಿಕ ವಿರೋಧ ಪಕ್ಷಗಳ ನಾಯಕರು ಹೇಳಿದ್ದೇನು?
ಬಿಜೆಪಿ ಸರ್ಕಾರ ಕರ್ನಾಟಕದ ಪರವಾಗಿಯೇ ಹಿಂದೆಲ್ಲಾ ನಿಲುವು ತಳೆದಿದೆ. ಈಗ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡುವುದು ಕರ್ನಾಟಕದ ಪ್ರಾಥಮಿಕ ಕೆಲಸವಾಗಿದೆ ಎಂದರು. ಮಹದಾಯಿ, ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ಕೋರ್ಟ್ನಲ್ಲಿ ಇದೆ. ಇದನ್ನು ಕೋರ್ಟ್ ವ್ಯಾಪ್ತಿಯಲ್ಲಿ ಇತ್ಯರ್ಥ ಮಾಡಿಕೊಳ್ಳಲು ಸಲಹೆ ಕೊಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾವೇರಿ ಪ್ರತಿಭಟನೆ, ಸೋತು ಸುಣ್ಣವಾಗಿರುವ ಬಿಜೆಪಿಯಿಂದ ಭಾವನಾತ್ಮಕ ರಾಜಕೀಯ; ಎಂಬಿ ಪಾಟೀಲ್ ಕಿಡಿ
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಬಳಿ ನಿಯೋಗ ಹೋಗುವುದು ರಾಜಕೀಯ ವಿಚಾರ. ಮೊದಲು ಕೋರ್ಟ್ನಲ್ಲಿ ಪ್ರಬಲವಾಗಿ ವಾದ ಮಾಡಬೇಕು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿದ್ದು, ರಾಜ್ಯದ ಜಲ ವಿವಾದಗಳ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಸಮಸ್ಯೆಯನ್ನು ಸಮರ್ಥವಾಗಿ ಮಂಡಿಸುವ ಬಗ್ಗೆ ಸಲಹೆ ನೀಡಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ಮುಂದೆ ಸಮರ್ಥವಾಗಿ ಮಂಡಿಸುವ ಬಗ್ಗೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಚಂದ್ರಯಾನ 3 ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಿಜವಾಗಿಯೂ ಇವತ್ತು ಐತಿಹಾಸಿಕ ದಿನ. ಹೆಮ್ಮೆಯ ದಿನ. ಈ ದಿನಕ್ಕೊಸ್ಕರ ಇಡಿ ದೇಶ ಕಾಯುತ್ತಿದೆ. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಇಡಿ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Wed, 23 August 23