ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ನಡೆಸಿದ್ದ ಟ್ರ್ಯಾಕ್ಟರ್ ಜಾಥಾದ ದಿಕ್ಕು ಬದಲಾಗಿತ್ತು. ಆರಂಭದಲ್ಲಿ ಶಾಂತವಾಗಿದ್ದ ಪ್ರತಿಭಟನೆ ನಂತರ ಉಗ್ರ ರೂಪ ಪಡೆದುಕೊಂಡಿತ್ತು. ರೈತರಿಗೆ ದೇಶ ವಿರೋಧಿಗಳು ಎನ್ನುವ ಹಣೆಪಟ್ಟಿ ಕಟ್ಟಲಾಯಿತು. ಈ ಘಟನೆಯಿಂದ ಕುಗ್ಗದ ರೈತರು ಮತ್ತೆ ಪುಟಿದೆದ್ದಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರಾದ್ಯಂತ ಶನಿವಾರ Chakka Jamಗೆ (ಹೆದ್ದಾರಿ ತಡೆ) ಹೋರಾಟಕ್ಕೆ ರೈತರು ಕರೆ ನೀಡಿದ್ದಾರೆ. ಕರ್ನಾಟಕ ಸೇರಿ ದೇಶಾದ್ಯಂತ ನಾಳೆ ಹೆದ್ದಾರಿಗಳು ಸ್ತಬ್ಧವಾಗುವ ಸಾಧ್ಯತೆ ಇದೆ.
ಜನವರಿ 26ರಂದು ನಡೆದ ಟ್ರ್ಯಾಕ್ಟರ್ ಜಾಥಾ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೆಂಪುಕೋಟೆ ಮೇಲೆ ರೈತರ ಬಾವುಟ ರಾರಾಜಿಸಿದ್ದವು. ಇನ್ನು, ಪೊಲೀಸರ ಮೇಲೆ ರೈತರು ಹಲ್ಲೆ ನಡೆಸಿದ್ದಾರೆ ಎಂದು ಕೂಡ ವರದಿ ಆಗಿತ್ತು. ಇದರಿಂದಾಗಿ ಪ್ರತಿಭಟನೆಗೆ ಭಾರೀ ಹಿನ್ನಡೆ ಉಂಟಾಗಿತ್ತು. ಈಗ ಕರೆದಿರುವ ಹೆದ್ದಾರಿ ತಡೆ ಜನಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಅಷ್ಟಕ್ಕೂ ಏನಿದು ಹೆದ್ದಾರಿ ತಡೆ? ಯಾವೆಲ್ಲ ರಾಜ್ಯಗಳಲ್ಲಿ ಇದರ ಪರಿಣಾಮ ಇರಲಿದೆ ಎನ್ನುವ ವಿಚಾರದ ಕುರಿತು ಇಲ್ಲಿದೆ ಮಾಹಿತಿ.
ಹೆದ್ದಾರಿ ತಡೆಗೆ ಕಾರಣವೇನು?
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮತ್ತೊಂದು ಹಂತವೇ ಹೆದ್ದಾರಿ ತಡೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ಕರೆದಿದ್ದ ಸಂಯುಕ್ತ ಕಿಸಾನ್ ಮೋರ್ಚಾ (40 ರೈತ ಸಂಘಟನೆಗಳ ಒಕ್ಕೂಟ) ಹೆದ್ದಾರಿ ತಡೆಗೆ ಕರೆ ನೀಡಿದೆ. ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಜಾಥಾದಲ್ಲಿ ನಡೆದ ಅಹಿಂಸೆ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ ಬೇಸರ ವ್ಯಕ್ತಪಡಿಸಿತ್ತು. ಅಲ್ಲದೆ, ಬಜೆಟ್ನಲ್ಲಿ ರೈತರ ಬೇಡಿಕೆ ನಿರ್ಲಕ್ಷಿಸಲಾಗಿದೆ, ರೈತರ ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್ ಸೇವೆ ರದ್ದುಗೊಳಿಸಲಾಗಿದೆ ಎನ್ನುವ ಆರೋಪ ಇದೆ. ಇವೆಲ್ಲದಕ್ಕೂ ಉತ್ತರ ನೀಡಲು ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಿಸಾನ್ ಮೋರ್ಚಾ ಹೆದ್ದಾರಿ ತಡೆ ಮಾಡುತ್ತಿದೆ. ಈಗಾಗಲೇ ಉತ್ತರ ಪ್ರದೇಶ ಸೇರಿ ಸಾಕಷ್ಟು ಕಡೆಗಳಲ್ಲಿ ರೈತರು ತಮ್ಮ ಟ್ರ್ಯಾಕ್ಟರ್ಗಳನ್ನು ಹೆದ್ದಾರಿ ಪಕ್ಕದಲ್ಲಿ ತಂದು ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ನಾಳೆ ಇದೇ ಟ್ರ್ಯಾಕ್ಟರ್ ಮೂಲಕ ಹೆದ್ದಾರಿ ತಡೆ ನಡೆಯಲಿದೆ.
ಯಾವೆಲ್ಲ ಪ್ರದೇಶಗಳಿಗೆ ತೊಂದರೆ?
ನಾಳೆಯ ಪ್ರತಿಭಟನೆ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಕ್ಕೆ ಹೆದ್ದಾರಿ ತಡೆಯ ಬಿಸಿ ತಟ್ಟಲಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳದಲ್ಲೂ ರಸ್ತೆ ತಡೆಯ ಕಾವು ಜೋರಾಗುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ರಸ್ತೆ ತಡೆ?
ರೈತರ ಪ್ರತಿಭಟನೆ ಕಾವು ನಾಳೆ ಕರ್ನಾಟಕದಲ್ಲೂ ಜೋರಾಗುವ ನಿರೀಕ್ಷೆ ಇದೆ. ಶಿವಮೊಗ್ಗ-ಚಿತ್ರದುರ್ಗ ರಾಜ್ಯ ಹೆದ್ದಾರಿ ತಡೆದು ಧರಣಿ ಮಾಡಲು ರೈತರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಲಿದೆ. ಹೆದ್ದಾರಿ ಮೇಲೆ ಸಸಿ ನೆಟ್ಟು ಹೋರಾಟ ನಡೆಸಲು ತೀರ್ಮಾನ ಮಾಡಲಾಗಿದೆ.
ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರಾ.ಹೆ 48, ರಂಗವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50, ಚಿತ್ರದುರ್ಗ ತಾಲೂಕಿನ ರಂಗವ್ವನಹಳ್ಳಿ ಬಳಿ ಹೆದ್ದಾರಿ, ಹೊಳಲ್ಕೆರೆಯ ಮುಖ್ಯ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ, ಹಿರಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48, ನಾಯಕನಹಟ್ಟಿ ಕ್ರಾಸ್ ಬಳಿ ರಾ.ಹೆ 150ಎ, ಚಳ್ಳಕೆರೆ ಪಟ್ಟಣದ ನಾಯಕನಹಟ್ಟಿ ಕ್ರಾಸ್, ಮೊಳಕಾಲ್ಮೂರು ತಾಲೂಕಿನ ಹಾನಗಲ್ ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಯಚೂರು ನಗರದ ಹೊರ ವಲಯದ ಅಸ್ಕಿಹಾಳ ಬಳಿ ಹೆದ್ದಾರಿ ತಡೆ ನಡೆಸಲಾಗುತ್ತಿದೆ. ಲಿಂಗಸಗೂರ, ಸಿಂಧನೂರ, ಮಾನವಿ, ದೇವದುರ್ಗ ಹೆದ್ದಾರಿ ಬಂದ್ ಆಗಲಿದೆ.
ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗೆ ತಡೆ ಬೀಳಲಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ 2 ಕಡೆ ರಸ್ತೆ ಬಂದ್ ಆಗಲಿದೆ. ಉಳಿದಂತೆ, ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಪುಣೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಮಾಗಡಿ ರೋಡ್, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗಳಿಗೆ ತಡೆ ಬೀಳಲಿದೆ.
ಎಷ್ಟು ಗಂಟೆಗೆ?
ಹೆದ್ದಾರಿ ತಡೆ ನಾಳೆ ಪೂರ್ತಿ ದಿನ ನಡೆಯುವುದಿಲ್ಲ. ಬದಲಿಗೆ ಮೂರು ಗಂಟೆಗಳ ಕಾಲ ಮಾತ್ರ ರಸ್ತೆ ತಡೆ ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆ ಇಂದ 3ಗಂಟೆವರೆಗೆ ಈ ಪ್ರತಿಭಟನೆ ನಡೆಯಲಿದೆ. ಹೀಗಾಗಿ, ಹೆದ್ದಾರಿಗಳಲ್ಲಿ ಭಾರೀ ಟ್ರಾಫಿಕ್ ಜ್ಯಾಮ್ ಉಂಟಾಗುವ ನಿರೀಕ್ಷೆ ಇದೆ.
ಹೆಚ್ಚಿನ ಭದ್ರತೆ
ಕಳೆದ ಬಾರಿ ಟ್ರ್ಯಾಕ್ಟರ್ ಜಾಥಾ ವೇಳೆ ಭಾರೀ ಹಿಂಸಾಚಾರ ಸಂಭವಿಸಿತ್ತು. ಹೀಗಾಗಿ, ಈ ಬಾರಿ ಎಚ್ಚೆತ್ತುಕೊಂಡಿರುವ ಪೊಲೀಸರು, ರಸ್ತೆ ತಡೆ ಕಾರ್ಯಕ್ರಮದ ವೇಳೆ ಬಿಗಿ ಭದ್ರತೆ ಒದಗಿಸಲು ಮುಂದಾಗಿದ್ದಾರೆ. ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ರೈತರ ಒತ್ತಾಯ ಏನು?
ಕೇಂದ್ರ ಸರ್ಕಾರ-ರೈತರ ನಡುವಣ ಹಲವು ಸುತ್ತುಗಳ ಮಾತುಕತೆ ವಿಫಲವಾಗಿತ್ತು. ಕೃಷಿ ಕಾಯ್ದೆ ಕಾರ್ಪೊರೇಟ್ಗಳಿಗೆ ಸಹಕಾರಿಯಾಗಲಿದೆ. ಕನಿಷ್ಠ ಬೆಂಬಲ ಬೆಲೆ ಸಿಗದಿದ್ದರೆ ರೈತರಿಗೆ ಭಾರೀ ತೊಂದರೆ ಉಂಟಾಗಲಿದೆ. ಹೀಗಾಗಿ, ಕನಿಷ್ಠ ಬೆಂಬಲ ಬೆಲೆಯನ್ನು ತೆಗೆದು ಹಾಕಬಾರದು ಎಂಬುದು ರೈತರ ಆಗ್ರಹ.
Chakka Jam ಮತ್ತೆ ಮೊಳಗಲಿದೆ ರೈತರ ಕಹಳೆ.. ದೇಶಾದ್ಯಂತ ನಾಳೆ ಹೈವೇಗಳು ಬಂದ್
Published On - 9:39 pm, Fri, 5 February 21