ಸ್ವರ್ಗವನ್ನೇ ಸೃಷ್ಟಿಸಿರೋ ನಿಸರ್ಗ. ಭೂರಮೆಯ ತುಂಬೆಲ್ಲಾ ಹಸಿರಿನ ಹಾಸಿಗೆ. ಮಧುವಣಗಿತ್ತಿಯಂತೆ ಎಲೆಗಳಿಂದ ತುಂಬಿರೋ ಮರಗಿಡಗಳು. ಇಂಥ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರು ಬರ್ತಿದ್ರು. ಆದ್ರೀಗ ಅದೇ ಸೌಂದರ್ಯಕ್ಕೆ ಮೆರುಗಂತಿದ್ದ ಆನೆ ಶಿಬಿರ ಮರೆಯಾಗೋ ಲಕ್ಷಣ ಕಾಣ್ತಿದೆ.
ಪದಗಳಿಗೆ ನಿಲುಕದ ಪ್ರಕೃತಿ ಸೌಂದರ್ಯ. ನಡುವೆ ಸ್ವಚ್ಛಂದ ಜೀವಸಂಕುಲ. ನೋಡೋಕೆ ಎರಡು ಕಣ್ಣು ಸಾಲಲ್ಲ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್ನಲ್ಲಿ ಬರುವ ಕ್ಯಾತೆರ ದೇವರ ಗುಡಿ ವನ್ಯಜೀವಿ ಪ್ರಿಯರ ಅಚ್ಚುಮೆಚ್ಚಿನ ಸ್ಪಾಟ್. ಹೀಗಾಗೇ ರಜಾ ದಿನಗಳು ಬಂದ್ರೆ ಫ್ಯಾಮಿಲಿ ಸಮೇತ ಪ್ರವಾಸಕ್ಕೆ ಬರ್ತಾರೆ.
ಆನೆ ಶಿಬಿರ ಬಂದ್ ಮಾಡಲು ನಿರ್ಧಾರ:
ಅದ್ರಲ್ಲೂ ಕಳೆದ ಒಂದು ದಶಕದ ಹಿಂದೆ ಕೆ.ಗುಡಿ ಆನೆ ಶಿಬಿರದಲ್ಲಿ 15ಆನೆಗಳಿದ್ದು ಪ್ರವಾಸಿಗರು ಆನೆ ಮೇಲೆ ಕುಳಿತು ಸಫಾರಿ ಮಾಡ್ತಿದ್ರು. ಜೊತೆಗೆ ವಿಶ್ವವಿಖ್ಯಾತ ಮೈಸೂರು ದಸರೆಯಲ್ಲೂ ಇಲ್ಲಿಂದ ಮೂರು ಆನೆಗಳು ಭಾಗಿಯಗ್ತಿದ್ವು. ಆದ್ರೀಗ ಸಫಾರಿ ಮಾಯವಾಗಿದ್ದು, ದುರ್ಗಾ ಪರಮೇಶ್ವರಿ ಮತ್ತು ಗಜೇಂದ್ರ ಆನೆ ಮಾತ್ರ ಇವೆ. ಅದೇ ಆನೆಗಳನ್ನ ನೋಡಿ ಖುಷಿ ಪಡ್ತಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಲು ಮುಂದಾಗಿದೆ. ಆನೆ ಶಿಬಿರವನ್ನ ಬಂದ್ ಮಾಡುವುದರ ಜೊತೆಗೆ ಇರುವ ಆನೆಗಳನ್ನ ಬೇರೆ ಶಿಬಿರಕ್ಕೆ ಕಳುಹಿಸಲು ಪ್ಲ್ಯಾನ್ ಮಾಡಿದೆ.
ಅರಣ್ಯ ಇಲಾಖೆ ಕ್ರಮಕ್ಕೆ ಸ್ಥಳೀಯರ ವಿರೋಧ:
ಆನೆ ಶಿಬಿರ ಬಂದ್ ಮಾಡಿ ಆನೆಗಳನ್ನ ಎತ್ತಂಗಡಿ ಮಾಡಲು ಹೊರಟಿರುವ ಅರಣ್ಯ ಇಲಾಖೆ ಕ್ರಮಕ್ಕೆ ವನ್ಯಜೀವಿ ಪ್ರಿಯರ ಜೊತೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ. ಕೆ.ಗುಡಿಯಲ್ಲಿ ಸಫಾರಿ ಮಾಡುವುದು ಒಂದು ಭಾಗವಾಗಿದ್ರೆ ಆನೆ ಶಿಬಿರವೂ ಆಕರ್ಷಣೀಯವಾಗಿತ್ತು. ಸಫಾರಿ ವೇಳೆ ವನ್ಯಜೀವಿಗಳು ಕಾಣದೇ ಇದ್ದಾಗ ಶಿಬಿರದಲ್ಲಿದ್ದ ಆನೆ ಮತ್ತು ಜಿಂಕೆಗಳನ್ನ ನೋಡಿ ಖುಷಿ ಪಡ್ತಿದ್ರು. ಆದ್ರೆ ಇನ್ಮುಂದೆ ಅವೂ ಇರಲ್ಲ ಅನ್ನೋದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.
ಅರಣ್ಯ ಇಲಾಖೆಗೆ ಆದಾಯದ ಚಿಂತೆ. ಪ್ರವಾಸಿಗರಿಗೆ ಪ್ರಕೃತಿಯ ಆಸೆ. ಆದ್ರೀಗ ಇದ್ದ ಎರಡು ಆನೆಗಳನ್ನೂ ಬೇರೆಡೆ ಕಳುಹಿಸಲು ಪ್ಲ್ಯಾನ್ ರೆಡಿಯಾಗಿದೆ. ಹೀಗಾಗಿ ಇನ್ಮುಂದೆ ಆನೆಗಳು ನೋಡೋಕೆ ಸಿಗಲ್ವಲ್ಲ ಅನ್ನೋ ನಿರಾಸೆ ಪ್ರವಾಸಿಗರಿಗೆ ಶುರುವಾಗಿದೆ.