ಮಂಡ್ಯ: ಯಾವಾಗಲಾದ್ರು ಒಮ್ಮೆ ಕಣ್ಣೀರು ಹಾಕಿದ್ರೆ ಪರವಾಗಿಲ್ಲ. ಆದ್ರೆ ಚುನಾವಣೆ ಸಮಯದಲ್ಲಿಯೇ ಕಣ್ಣೀರು ಹಾಕೋದು ಅವರಿಗೆ ಸಾಮಾನ್ಯವಾಗಿಬಿಟ್ಟಿದೆ. ಕಣ್ಣೀರಿಗೆ ಮಹತ್ವ ಸಿಗಲ್ಲ ಅನ್ನುವುದೂ ಅವರಿಗೆ ಅರ್ಥವಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿಯನ್ನು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಛೇಡಿಸಿದ್ದಾರೆ. ಕೆ ಆರ್ ಪೇಟೆ ಉಪ ಚುನಾವಣೆ ಪ್ರಚಾರದ ವೇಳೆ ತಮ್ಮ ಪುತ್ರನ ಸೋಲನ್ನು ಪ್ರಸ್ತಾಪಿಸುತ್ತಾ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ಕಣ್ಣೀರು ಹಾಕಿದ್ದರು.
ಅವರು ಅಳುವುದು ಭಾವನಾತ್ಮಕವಾಗಿಯಂತೂ ಅಲ್ಲ. ಅಳುವಂತಹದ್ದು ಅವರಿಗೆ ಏನೂ ಆಗಿಲ್ಲ. ಅವ್ರು ಜನರ ಭಾವನೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ಸುತ್ತೆ. ಕಣ್ಣೀರು ಹಾಕೋದು, ನಾಟಕ ಮಾಡೋದು, ಎಲ್ಲವನ್ನು ನೋಡಿ ನೋಡಿ ಜನಕ್ಕೆ ಸಾಕಾಗಿದೆ. ಅವರ ತಂದೆ ತುಮಕೂರಿಗೆ ಹೋಗಿ ಸೋತಿರೋ ಬಗ್ಗೆ ಕಣ್ಣೀರು ಹಾಕಿದ್ರೆ ಪರವಾಗಿಲ್ಲ. ಆದ್ರೆ ಒಮ್ಮೆ ಸೋತಿರೊ ಮಗನಿಗಾಗಿಯೂ ಕಣ್ಣೀರು ಹಾಕ್ತಾರೆ. ಈ ಸಂದರ್ಭದಲ್ಲಿಯಾ ಅವ್ರು ಅಳಿವು-ಉಳಿವಿನ ಬಗ್ಗೆ ಮಾತನಾಡೋದಾ? ಇದೇನು ಸಾರ್ವತ್ರಿಕ ಚುನಾವಣೆಯೇ? ಎಂದು ಹೆಚ್ಡಿಕೆ ಕಣ್ಣಿರಿನ ಬಗ್ಗೆ ಚಲುವರಾಯಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಅವರು ಅಧಿಕಾರ ಕಳೆದುಕೊಳ್ಳಲು ಅವರೇ ಕಾರಣ. ಜಿಲ್ಲೆಯ ಜನರು ಅವರಿಗೆ ಅಧಿಕಾರ ನೀಡಿದ್ದರು. ಆದ್ರೆ ಅದನ್ನ ಉಳಿಸಿಕೊಳ್ಳಲಿಲ್ಲ. ಪೂರ್ತಿ ಸಾಲಮನ್ನಾ ಮಾಡ್ತೀನಿ ಅಂದ್ರು, ಮಾಡುದ್ರಾ? ಇನ್ನು, ಮಂಡ್ಯ ಷುಗರ್ ಕಾರ್ಖಾನೆ ನಿಲ್ಲಲು ಅವರೇ ಕಾರಣ. ವೈಯಕ್ತಿಕವಾಗಿ ಆಗಲಿ, ರಾಜಕೀಯವಾಗಿ ಆಗಲಿ ಕುಮಾರಸ್ವಾಮಿ ಮೇಲೆ ದ್ವೇಷ ಇಲ್ಲ. ಅವರು ನನ್ನನ್ನು ಸ್ನೇಹಿತ ಅಂತ ಒಪ್ಕೊಂಡ್ರೆ ಖುಷಿಯೇ. ಸಾಧ್ಯವಾದ್ರೆ ಅವರು ನಮ್ಮ ಪಕ್ಷಕ್ಕೆ ಸಹಾಯ ಮಾಡಲಿ. ಕೆಆರ್ ಪೇಟೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಹಿಂಪಡೆದು, ಕಾಂಗ್ರೆಸ್ ಗೆ ಸಹಾಯ ಮಾಡಲಿ ಎಂದು ಚಲುವರಾಯಸ್ವಾಮಿ ಆಶಿಸಿದರು.